ಪುಣೆ: ಮಹಾರಾಷ್ಟ್ರದ ಪುಣೆಯ ಘೋಟವಾಡ ಫಾಟಾ ಎಂಬಲ್ಲಿ ಇರುವ ಖಾಸಗಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 18 ಜನ ಸಜೀವವಾಗಿ ದಹನವಾಗಿರುವ ದಾರುಣ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ದುರಂತ ಸಂಭವಿಸಿದ ಕಾರ್ಖಾನೆಯ ಒಳಗೆ ಮತ್ತಷ್ಟು ಮಂದಿ ಇರುವ ಕಾರಣ ಅವರ ಹುಡುಕುವ ಮತ್ತು ರಕ್ಷಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದವರು ಕಾರ್ಯಪ್ರವೃತ್ತರಾಗಿದ್ದಾರೆ. ಮಾಹಿತಿ ಪ್ರಕಾರ ಫ್ಯಾಕ್ಟರಿಯ ಒಳಗೆ 37 ಮಂದಿ ಕಾರ್ಮಿಕರು ಇದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಕಳ್ಳಭಟ್ಟಿ ದುರಂತ: ಆರೋಪಿ ಬಿಜೆಪಿ ಶಾಸಕ ವಜಾ
ಪಿಎಂಆರ್‌ಡಿಎ (ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ) ದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಮುಲ್ಶಿ ತಹಸಿಲ್‌ನ ಪಿರಂಗುಟ್ ಎಂಐಡಿಸಿ ಪ್ರದೇಶದ ಎಸ್‌ವಿಎಸ್ ಆಕ್ವಾ ಟೆಕ್ನಾಲಜೀಸ್‌ನ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ.
ಅಗ್ನಿ ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ವಾಹನಗಳು ಹಾಗೂ ಸುಮಾರು 8 ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ 20 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಇನ್ನು 5 ಮಂದಿಯ ಶೋಧ ಕಾರ್ಯ ಮುಂದುವರೆದಿದೆ. ಇಲ್ಲಿಯವರೆಗೆ ಪತ್ತೆಯಾಗದಿರುವ ಕಾರ್ಮಿಕರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಅಗ್ನಿ ಪ್ರಮಾಣ ನಿಯಂತ್ರಣಕ್ಕೆ ಸಿಕ್ಕಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ದೇಶದ ಎಲ್ಲ ಜನರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ
ಕಂಪನಿಯು ನೀರಿನ ಶುದ್ಧೀಕರಣಕ್ಕಾಗಿ ಕ್ಲೋರಿನ್ ಡೈಆಕ್ಸೈಡ್ ಟ್ಯಾಬ್ ಅನ್ನು ಉತ್ಪಾದಿಸುತ್ತದೆ. ಸಂಸ್ಥೆಯು ಗಾಳಿ, ನೀರು ಮತ್ತು ಮೇಲ್ಮೈ ಸಂಸ್ಕರಣಾ ರಾಸಾಯನಿಕಗಳ ಉತ್ಪಾದನೆ, ಪೂರೈಕೆ ಮತ್ತು ರಫ್ತಿಗೆ ಸಂಬಂಧಿಸಿದ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದ್ದವು.
ಕಂಪನಿಯಿಂದ ಹೊರಹೊಮ್ಮುವ ಅಪಾರ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಈ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದವು. ಕಂಪನಿಯ ಸುತ್ತಲಿನ ಜನಸಂದಣಿ ಮತ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಗಳನ್ನು ನಿರ್ವಹಿಸಲು ಪುಣೆ ಗ್ರಾಮೀಣ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದೆ.
ಅಗ್ನಿ ದುರಂತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.