‘ಪುನರ್ ವಸತಿ’ ಬಿಟ್ಟು ಕಾಡಿಗೆ ಮರಳಿದ ಆದಿವಾಸಿಗಳು

ಮೈಸೂರು: ಜಿಲ್ಲೆಯ ಹೆಗ್ಗಡದೇವನಕೋಟೆ ತಾಲುಕಿನ ಕಸಬಾ ಹೋಬಳಿಯ ಮಾಸ್ತಿಗುಡಿ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದ ಜೇನುಕುರುಬ ಹಾಗು ಯರವ ಸಮುದಾಯದ ಆದಿವಾಸಿ ಕುಟುಂಬಗಳು ಪುನರ್ ವಸತಿ ಕೇಂದ್ರದಲ್ಲಿನ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಡುಗುಂಡಿ ಅರಣ್ಯ ಪ್ರದೇಶದಲ್ಲಿ ವಾಸವಿದ್ದ ನೂರಾರು ಆದಿವಾಸಿ ಕುಟುಂಬಗಳನ್ನು ಮನವೊಲಿಸುವ ಮೂಲಕ ಅಲ್ಲಿಂದ ಮೈಸೂರು ಜಿಲ್ಲೆಯ ಕಸಬಾ ಹೋಬಳಿಯ ರಾಜೇಗೌಡನ ಹುಂಡಿ ಗ್ರಾಮದ ಸರ್ವೇ ನಂ. 37ರ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರತಿಕುಟುಂಬಕ್ಕೆ 15 ಲಕ್ಷ ರೂಪಾಯಿ ಪ್ಯಾಕೇಜಿನಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೇಳಿತ್ತು. ಸರ್ಕಾರದ ಆಶ್ವಾಸನೆ ನಂಬಿದ ಆದಿವಾಸಿಗಳು ಸರ್ಕಾರದ ಮಾತು ನಂಬಿ ಕಾಡು ತೊರೆದು ಬಂದಿದ್ದರು.

ಕೇಂದ್ರ ಸರ್ಕಾರದ ಪುನರ್ ವಸತಿ ಯೋಜನೆಯಡಿಯಲ್ಲಿ ಅರಣ್ಯ ಮತ್ತು ಪರಿಸರ ಮಂತ್ರಾಲಯವು ಇವರಿಗೆ ಜಮೀನು ಹಾಗೂ ನಿವೇಶನದ ಸ್ವಾಧೀನ ಪತ್ರಗಳನ್ನು ನೀಡಿತ್ತು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಆದಿವಾಸಿ ಕುಟುಂಬಗಳನ್ನು ಪುನರ್ವಸತಿ ಕೇಂದ್ರಕ್ಕೆ ಕರೆತರುವಾಗ ಸರ್ಕಾರ ಆರಂಭದಲ್ಲಿ 75 ಸಾವಿರ ನಗದು ಹಣ ಹಾಗೂ ಬ್ಯಾಂಕ್ ಖಾತೆಯಲ್ಲಿ 2.50 ಲಕ್ಷ ಹಣವನ್ನು ಪ್ಯಾಕೇಜಿನಡಿ ಘೋಷಿಸಿ, ಜೀವಿಸಲು ಯೋಗ್ಯವಾದ ಗುಣಮಟ್ಟದ ಮನೆ, ಮೂರು ಎಕರೆ ಜಮೀನು ನೀಡುವುದಾಗಿ ತಿಳಿಸಿತು. ಅದರಂತೆ, ಇವುಗಳಿಗೆ ಒಪ್ಪಿಗೆ ಸೂಚಿಸಿದ ಕುಟುಂಬಗಳನ್ನು ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮೂಲಕ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿತ್ತು.

ಕಳೆದ ನಾಲ್ಕು ವರ್ಷಗಳಿಂದ ಜೀವನ ನೆಡೆಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಸರಿಯಾದ ರೀತಿಯಲ್ಲಿ ಭೂಮಿಯನ್ನು ಹಂಚಿಕೆ ಮಾಡಿಕೊಡದೆ, ಕೃಷಿಗೆ ಭೂಮಿ ನೀಡದೆ ವಂಚಿಸಿದ್ದಾರೆ. ಹೀಗಾಗಿ ಅಧಿಕಾರಿಗಳೊಂದಿಗೆ ಆದಿವಾಸಿಗಳು ಸಂಘರ್ಷ ನಡೆಸುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಪುನರ್ವಸತಿ  ಕೇಂದ್ರಕ್ಕೆ ಬಂದು ಸೌಲಭ್ಯ ಒದಗಿಸುವ ಬಗ್ಗೆ ಭರವಸೆ ಮಾತ್ರ ನೀಡುತ್ತಾರೆ.

ಭರವಸೆ ನೀಡಿದ ಅಧಿಕಾರಿಗಳು ಕೆಲವೆ ತಿಂಗಳುಗಳಲ್ಲಿ ಬೇರೆಡೆಗೆ ವರ್ಗಾವಣೆಯಾಗುತ್ತಾರೆ. ಹೊಸ ಅಧಿಕಾರಿ ಬಂದಾಗಲೂ ಇದೇ ರೀತಿಯ ಭರವಸೆ ನೀಡುತ್ತಾರೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಕೊಡಗಿನ ಬಾಳಲೆಗೆ ಗ್ರಾಮ ಪಂಚಾಯಿತಿ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಪ್ರದೇಶದ ಗೇಟ್ ಬಳಿ ನೂರಾರು ಆದಿವಾಸಿಗಳು ಕೂತು ಪ್ರತಿಭಟನೆ ನಡೆಸಿದ್ದಾರೆ.

ಆದಿವಾಸಿಗಳು ಹಾಡಿ ಮುಖಂಡರಾದ ಜೇನು ಕುರುಬರ ಟಿ.ಅಯ್ಯಪ್ಪ ಹಾಗೂ ಜೇಬು ಕುರುಬರ ಎಂ.ಸಣ್ಣಯ್ಯ ಅಡಗುಂಡಿ ಅರಣ್ಯಕ್ಕೆ ಆಗಮಿಸಿದರು. ವಿಷಯ ತಿಳಿದ ಪೊಲೀಸರು,ಮತ್ತು  ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪ್ರತಿಭಟಿಸುತ್ತಿದ್ದಾ ಆದಿವಾಸಿಗಳನ್ನು ಅಡುಗುಂಡಿಗೇಟ್ ಬಳಿಯೇ ತಡೆದಿದ್ದಾರೆ. ಗೇಟ್ ಬಳಿಯೇ ಪ್ರತಿಭಟನೆಯನ್ನು ನಡೆಸಿದಾಗ, ಅಧಿಕಾರಿಗಳು ಆದಿವಾಸಿಗರ ಮನವೊಲಿಸಲು ಪ್ರಯತ್ನಿಸಿದ್ದಾರೆ.ಆದರೆ ಆದಿವಾಸಿಗಳು ಸರ್ಕಾರ ನಮಗೆ ನೀಡಿದ ಮಾತಿನಂತೆ ನಡೆದುಕೊಂಡಿಲ್ಲ ನಮಗೆ ನೀಡಬೇಕಾದ ಸವಲತ್ತುಗಳು ಎಲ್ಲಿ. ಕಾಡಿನಲ್ಲಿದ್ದ ನಮ್ಮನ್ನು ಇಲ್ಲಿಗೆ ಕರೆತಂದು ನಮ್ಮ ಜೀವನವನ್ನು ಅದಗೆಡೆಸಿದ್ದೀರಿ ಎಂದು ತಮ್ಮ ಬೇಸರವನ್ನ ಹೊರಹಾಕಿದರು

ಪ್ರತಿಭಟನೆ ವೇಳೆ ಭೇಟಿ ನೀಡಿದ ಹಣಸೂರು ಉಪವಿಭಾಗಾಧಿಕಾರಿ ”ಆದಿವಾಸಿಗಳಿಗೆ ನೀಡಬೇಕಿದ್ದ ಸವಲತ್ತುಗಳನ್ನು ಈಡೇರಿಸುವ ಕೇಲಸವು ಪ್ರಗತಿಯಲ್ಲಿದೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಜರಿಗುಸುತ್ತಿದ್ದಾರೆ” ಎಂದು ಹೇಳಿದ್ದು, ಬುಡಕಟ್ಟು ಸಮುದಾಯಗಳ ಪರ ಕೆಲಸ ಮಾಡುತ್ತಿರುವ ಪ್ರೊ.ಎ.ಎಸ್.ಪ್ರಭಾಕರ್ ಪ್ರತಿಕ್ರಿಯಿಸಿ, “ಅಧಿಕಾರಿಗಳು ಭರವಸೆಗಳನ್ನು ನೀಡುತ್ತಾರೆ ಆದರೆ ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲಾ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *