ಉಡುಪಿ: ಹಿಜಾಬ್ ಪರವಾಗಿ ಹೋರಾಟ ನಡೆಸಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಇಂದು ಮತ್ತೆ ಮೂವರು ವಿದ್ಯರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಹಿಜಾಬ್ ಪರ ನಿಲುವು ತಳೆದಿರುವ ವಿದ್ಯಾರ್ಥಿನಿಯರಾದ ಆಲ್ಮಾಸ್, ಹಾಜ್ರಾ ಶಿಫಾ ಹಾಗೂ ಆಯಿಶಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಗೆ ಗೈರಾದವರು.
ಇದನ್ನು ಓದಿ: ಹಿಜಾಬ್ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು : ಹಿಜಾಬ್‌ಗಿಂತ ಶಿಕ್ಷಣ ಮುಖ್ಯ
ನಿನ್ನೆ ಹಿಜಾಬ್ ಧರಿಸಿ ಬಂದಿದ್ದಕ್ಕೆ ಅಲಿಯಾ, ರೇಷಂಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಈ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ಟೀಕೆಗಳನ್ನು ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ತಾವು ಕೂಡ ಪರೀಕ್ಷಾ ಕೇಂದ್ರಕ್ಕೆ ಹೋದರೆ ಟೀಕೆಗೆ ಒಳಗಾಗಬಹುದೆಂಬ ಭೀತಿಯಿಂದ ಗೈರಾಗಿದ್ದಾರಾ ಎಂಬ ಅನುಮಾನ ಮೂಡಿದೆ.
ಮೂವರು ವಿದ್ಯಾರ್ಥಿನಿಯರು ಇಂದು ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯಕ್ಕೆ ಪರೀಕ್ಷೆ ಬರೆಯಬೇಕಿತ್ತು. ಅವರಲ್ಲಿ ಆಲ್ಮಾಸ್ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ಪ್ರವೇಶಾತಿ ಪತ್ರವನ್ನು ಸಹ ಪಡೆದುಕೊಂಡಿದ್ದು, ಪರೀಕ್ಷೆಗೆ ಗೈರು ಆಗಿದ್ದಾರೆ. ಉಳಿದಿಬ್ಬರು ಪ್ರವೇಶ ಪತ್ರ ಕೂಡಾ ಪಡೆದುಕೊಂಡಿರಲಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಮಾಹಿತಿ ನೀಡಿದ್ದಾರೆ.
ಶಾಸಕ ರಘುಪತಿ ಭಟ್ ನಮಗೆ ಬೆದರಿಕೆ ಹಾಕಿದ್ದಾರೆ
ನಿನ್ನೆ(ಏಪ್ರಿಲ್ 22) ಪರೀಕ್ಷೆಗೆ ಗೈರಾಗಿದ್ದ ಆಲಿಯಾ ಅಸಾದಿ ಟ್ವೀಟ್ ಮಾಡಿದ್ದಾಳೆ. ನನಗೆ, ರೇಷಂಗೆ ಪರೀಕ್ಷೆ ಬರೆಯಲು ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ. ಬಿಜೆಪಿ ಶಾಸಕ ರಘುಪತಿ ಭಟ್ ನಮಗೆ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಕೇಸ್ ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ. ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ಆಲಿಯಾ ಅಸಾದಿ ಟ್ವೀಟ್ ಮಾಡಿದ್ದಾಳೆ.