ಬೆಂಗಳೂರು: ಬಿಎಂಆರ್‌ಸಿಎಲ್ ಲೂಟಿ ಮಾಡುವ ಸಂಸ್ಥೆ. ಜನರನ್ನು ಕೊಳ್ಳೆ ಹೊಡೆಯುವುದನ್ನು ಸಾರ್ವಜನಿಕ ಸೇವೆ ಎಂದು ಕರೆಯುತ್ತಾರೆಯೇ? ಅಲ್ಲಿನ ಅಧಿಕಾರಿಗಳು ಸುಳ್ಳುಬುರುಕರು. ಅವರನ್ನು ನಿಯಂತ್ರಿಸುವವರೇ ಇಲ್ಲದಂತಾಗಿದೆ…’
ಒಂದು ವರ್ಷದ ಹಿಂದೆ ದರವನ್ನು ವಿಪರೀತ ಏರಿಕೆ ಮಾಡಿದ್ದ ಬಿಎಂಆರ್‌ಸಿಎಲ್ ಈಗ ಮತ್ತೆ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ನಮ್ಮ ಮೆಟ್ರೊ ಪ್ರಯಾಣದರ ಹೆಚ್ಚಳದ ಬಳಿಕ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿರುದ್ಧ ಜನರು ವ್ಯಕ್ತಪಡಿಸಿದ ಆಕ್ರೋಶವಿದು.
‘ನಾಚಿಕೆ, ಮಾನ ಮರ್ಯಾದೆ ಇಲ್ಲದ ಕಿತ್ತೋಗಿರೊ ಸಂಸ್ಥೆ. ಜನರ ಹಣ ಲೂಟಿ ಮಾಡೋ ಸಂಸ್ಥೆ’ ಎಂದು ಪ್ರಯಾಣಿಕರೊಬ್ಬರು ಜಾಲತಾಣದಲ್ಲಿ ಜರಿದಿದ್ದಾರೆ. ‘ನಿಜವಾಗ್ಲೂ ದರಿದ್ರ ಸರ್ಕಾರಗಳು. ಮೆಟ್ರೊ ಟ್ರಿಪ್‌ಗಳು ಕೂಡ ಹೆಚ್ಚಾಗಿಲ್ಲ. ನಿಂತುಕೊಳ್ಳೋದಕ್ಕೂ ಜಾಗ ಇಲ್ಲ. ಸಿಬ್ಬಂದಿ ದರ್ಪ ಅತಿಯಾಗಿದೆ. ಇಷ್ಟೆಲ್ಲ ಆದರೂ ದರ ಮಾತ್ರ ಹೆಚ್ಚು ಮಾಡಲಾಗುತ್ತಿದೆ. ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಜನರು ಕೇಳುತ್ತಿಲ್ಲ. ಹಾಗಂತ ಲೂಟಿ ಮಾಡ್ತೀರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಫೆ.12 ಅಖಿಲ ಭಾರತ ಮುಷ್ಕರ – ಶ್ರಮಿಕರ ಪ್ರತಿರೋಧದ ಮಹಾದಿನ
ಬೇಡಿಕೆಗೆ ಒಪ್ಪುವವರೆಗೆ ಹೊರಡಬಾರದು. ಬೆಂಗಳೂರಿಗರೇ ಮೆಟ್ರೊ ನಿಲ್ದಾಣಕ್ಕೆ ಬನ್ನಿ’ ‘ಬೆಂಗಳೂರಿನ ಜನರು ಕೆಲಸಕ್ಕೆ ರಜೆ ತೆಗೆದುಕೊಂಡು, ನಗರದ ಪ್ರತಿಯೊಂದು ಮೆಟ್ರೊ ನಿಲ್ದಾಣದ ಸುತ್ತಲೂ ಒಟ್ಟುಗೂಡಿ ಪ್ರವೇಶದ್ವಾರವನ್ನು ತಡೆದು ಕುಳಿತುಕೊಳ್ಳಬೇಕು ಎಂದು ನಾಗರಿಕರೊಬ್ಬರು ಕರೆ ನೀಡಿದ್ದಾರೆ.
ಕೋಚ್ ಒಳಗೆ ಜನರನ್ನು ಕುರಿಗಳಂತೆ ತುಂಬಲಾಗುತ್ತಿದೆ. ಇಂಥ ದಯನೀಯ ಸೇವೆಗೆ ದರ ಏರಿಕೆಯೆಂಬ ಬರೆ ಬೇರೆ’ ಎಂದು ಪ್ರಯಾಣಿಕರು ಕಿಡಿ ಕಾರಿದ್ದಾರೆ. ದಟ್ಟಣೆ ಅವಧಿಯಲ್ಲಿಯೂ 10 ನಿಮಿಷಕ್ಕೊಂದು ರೈಲು ಓಡಿಸುತ್ತೀರಾ, ಮೆಜೆಸ್ಟಿಕ್‌ನಲ್ಲಿ ಎಲ್ಲ ರೈಲುಗಳು ತುಂಬಿರುವುದರಿಂದ ರೈಲು ಹತ್ತಲು ಕನಿಷ್ಠ 30 ನಿಮಿಷ ಕಾಯಬೇಕಿದೆ ಎಂದು ಪ್ರಶ್ನಿಸಿದ್ದಾರೆ.
‘ದಿನಕ್ಕೆ ಸರಾಸರಿ 10 ಲಕ್ಷ ಜನರು ಪ್ರಯಾಣಿಸುತ್ತಾರೆ. ಟಿಕೆಟ್ ದರ ಸರಾಸರಿ ₹70 ಇದೆ. ಅಂದರೆ ದಿನಕ್ಕೆ ₹ 7 ಕೋಟಿ ಸಂಗ್ರಹವಾಗುತ್ತದೆ. ಇದು ಸಾಕಾಗುವುದಿಲ್ಲವೇ’ ಎಂದು ಅಂಕಿ ಅಂಶವನ್ನು ಮುಂದಿಟ್ಟು ಪ್ರಶ್ನಿಸಿದ್ದಾರೆ.
ಈ ಏರಿಕೆಯು ಒಂದು ರೂಪಾಯಿ ಚಿಲ್ಲರೆ ಸಮಸ್ಯೆ ತಂದಿಟ್ಟಿದೆ ಎಂದು ಒಬ್ಬರು ತಿಳಿಸಿದ್ದರೆ, ‘ಪ್ರಯಾಣಿಕರು ಚಿಲ್ಲರೆಗಾಗಿ ಪರದಾಡಲಿ ಎಂದು ಈ ರೀತಿ ದರ ಏರಿಕೆ ಮಾಡಿರಬಹುದು’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಇದನ್ನೂ ನೋಡಿ : ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ ಜೊತೆ ಮಾತುಕತೆ Janashakthi Media
