ಹೊಸದಿಲ್ಲಿ: ಸರಿ ಸುಮಾರು ಮೂರು ವರ್ಷಗಳಲ್ಲಿ ಮುಖ್ಯಮಂತ್ರಿ ಮತ್ತು ಇತರ ಗಣ್ಯರ ಏರ್‌ಲಿಫ್ಟಿಂಗ್ ಅಥವಾ ಹೆಲಿಕಾಪ್ಟರ್ ಶುಲ್ಪವಾಗಿ ರಾಜ್ಯದ ಬೊಕ್ಕಸದಿಂದ 58 ಕೋಟಿ ರೂ. ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಅಸ್ಸಾಂ ಸರ್ಕಾರ ಮಂಗಳವಾರ ವಿಧಾನಸಭೆಗೆ ತಿಳಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚಾರ್ಟರ್ಡ್ ಫ್ಲೈಟ್‌ಗಳ ಮೂಲಕ ಸರ್ಕಾರೇತರ ವ್ಯವಹಾರಗಳ ಪ್ರಯಾಣಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿರುವ ಕುರಿತು ದಿ ವೈರ್ ಮತ್ತು ದಿ ಕ್ರಾಸ್‌ಕರೆಂಟ್ ಜಂಟಿ ವರದಿಯನ್ನು ಪ್ರಕಟಿಸಿದ ಮೂರು ದಿನಗಳ ನಂತರ ಸರ್ಕಾರ ಈ ಮಾಹಿತಿ ನೀಡಿದೆ.
ಸಿಎಂ ಮತ್ತು ಇತರ ಗಣ್ಯರ ಏರ್‌ಲಿಫ್ಟಿಂಗ್ ಅಥವಾ ಹೆಲಿಕಾಪ್ಟರ್ ಶುಲ್ಕವಾಗಿ 2021ರ ಮೇ 10ರಿಂದ 2024ರ ಜನವರಿ 30ರ ವರೆಗೆ ರಾಜ್ಯದ ಬೊಕ್ಕಸದಿಂದ ಒಟ್ಟು 58,23,07,104 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅಸ್ಸಾಂ ರಾಜ್ಯ ಸರ್ಕಾರ ವಿಧಾನಸಭೆಗೆ ತಿಳಿಸಿದೆ.
ಇದನ್ನೂ ಓದಿ: ಪ್ರತಿಭಟನೆಗೆ ಬೆದರಿ ದೆಹಲಿ-ನೋಯ್ಡಾ ಗಡಿ ಬಂದ್ | ರೈತರ ಭೇಟಿಗೆ ಒಪ್ಪಿದ ಕೇಂದ್ರ ಸರ್ಕಾರ
ಶಿವಸಾಗರ್ ಕ್ಷೇತ್ರದ ಶಾಸಕರಾಗಿರುವ ರೈಜೋರ್ ದಳದ ನಾಯಕ ಅಖಿಲ್ ಗೊಗೊಯ್ ಅವರ ಲಿಖಿತ ಪ್ರಶ್ನೆಗಳಿಗೆ ಉತ್ತರವಾಗಿ ಫೆಬ್ರವರಿ 6 ರಂದು ಈ ಉತ್ತರವನ್ನು ನೀಡಲಾಗಿದೆ. ಆದಾಗ್ಯೂ, ಹಿಮಾಂತ ಶರ್ಮಾ ಅವರ ಸರ್ಕಾರವು ನಿರ್ದಿಷ್ಟವಾಗಿ ಮುಖ್ಯಮಂತ್ರಿ ಅವರೇ ಬಾಡಿಗೆ ಪಡೆದ ವಿಮಾನಗಳಿಗೆ ಖರ್ಚು ಮಾಡಿದ ಮೊತ್ತದ ವಿವರವನ್ನು ನೀಡಲಿಲ್ಲ. ಶಾಸಕ ಅಖಿಲ್ ಗೊಗೊಯ್ ಅವರು ಈ ಮಾಹಿತಿಯನ್ನು ವಿಶೇಷವಾಗಿ ಕೇಳಿದ್ದರು.
ಸದನದಲ್ಲಿ ಸರ್ಕಾರವು ಹೇಳಿದ ಪ್ರಕಾರ, 2021ರ ಮೇ 10 ರಿಂದ 2022ರ ಡಿಸೆಂಬರ್ 31ರ ನಡುವೆ 10.19 ಕೋಟಿ ಖರ್ಚು ಮಾಡಲಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ಮುಖ್ಯಮಂತ್ರಿ ಮತ್ತು ಇತರ ಗಣ್ಯರಿಗೆ ಚಾರ್ಟರ್ ಫ್ಲೈಟ್‌ಗಳು ಮತ್ತು ಹೆಲಿಕಾಪ್ಟರ್‌ಗಳಿಗೆ 34.01 ಕೋಟಿ ರೂ. ಮೌಲ್ಯದ ಸಾರ್ವಜನಿಕ ಹಣವನ್ನು ಖರ್ಚು ಮಾಡಲಾಗಿದೆ. ಜನವರಿ 2023 ರಿಂದ ಜನವರಿ 2024 ರವರೆಗೆ 14.02 ಕೋಟಿ ರೂ. ಗಿಂತ ಹೆಚ್ಚು ಖರ್ಮು ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
2022-2023 ಹಣಕಾಸು ವರ್ಷಕ್ಕೆ ಹಿಮಾಂತ ಶರ್ಮಾ ಸರ್ಕಾರವು ಉಲ್ಲೇಖಿಸಿದ ಮೊತ್ತವು ಕಳೆದ ಸೆಪ್ಟೆಂಬರ್‌ನಲ್ಲಿ ಅಸೆಂಬ್ಲಿಯಲ್ಲಿ ನೀಡಿದ ಹಿಂದಿನ ಹೇಳಿಕೆಯೊಂದಿಗೆ ಹೊಂದಿಕೆಯಾಗಿದ್ದರೂ, ಅದು ಸೆಪ್ಟೆಂಬರ್‌ನಲ್ಲಿ ದಿ ಕ್ರಾಸ್‌ಕರೆಂಟ್‌ಗೆ ನೀಡಿದ ಆರ್‌ಟಿಐ ಉತ್ತರದಲ್ಲಿ ಉಲ್ಲೇಖಿಸಿದ ಮೊತ್ತವನ್ನು ಮೀರಿಸಿದೆ ಎಂದು ದಿ ವೈರ್ ವರದಿ ಹೇಳಿದೆ.
ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸದ ವೇಳೆ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ
2022ರ ಆಗಸ್ಟ್ 22 ರಂದು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ರಾಜ್ಯ ಸರ್ಕಾರವು ಸುಮಾರು ಒಂದು ವರ್ಷದಿಂದ ಪ್ರತಿಕ್ರಿಯಿಸದ ಕಾರಣ ಗುವಾಹಟಿ ಮೂಲದ ನ್ಯೂಸ್ ಪೋರ್ಟಲ್ ಆಗಿರುವ ದಿ ಕ್ರಾಸ್‌ಕರೆಂಟ್ ಉತ್ತರ ಕೋರಿ ರಾಜ್ಯ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಆಯೋಗವು 2023ರ ಆಗಸ್ಟ್ 8ರಂದು ಆರ್‌ಟಿಐ ಮೂಲಕ ಕೇಳಿದ ಮಾಹಿತಿಯನ್ನು ಒದಗಿಸುವಂತೆ ರಾಜ್ಯದ ಸಾಮಾನ್ಯ ಆಡಳಿತ ಇಲಾಖೆಗೆ ನಿರ್ದೇಶನ ನೀಡಿತ್ತಿ.
ಇದರ ನಂತರ ಸೆಪ್ಟೆಂಬರ್ 2023 ರಲ್ಲಿ ರಾಜ್ಯ ಸರ್ಕಾರವು ಮಾಹಿತಿಯನ್ನು ಹಂಚಿಕೊಂಡಿತ್ತು, ಆದರೆ ಮಾಹಿತಿಯನ್ನು ಭಾಗಶಃ ಮಾತ್ರ ಹಂಚಿಕೊಂಡಿತ್ತು. ಆರ್‌ಟಿಐ ಅರ್ಜಿಯಲ್ಲಿ 2021ರ ಮೇ 10 ರಿಂದ ಇಲ್ಲಿಯವರೆಗಿನ ಅಂತಹ ಖರ್ಚಿನ ವಿವರಗಳನ್ನು ಕೇಳಿತ್ತು. ಹಿಮಾಂತ ಶರ್ಮಾ ಸರ್ಕಾರದ ಭಾಗಶಃ ಆರ್‌ಟಿಐ ಉತ್ತರವನ್ನು ಆಧರಿಸಿದ ವೈರ್ ಮತ್ತು ದಿ ಕ್ರಾಸ್‌ಕರೆಂಟ್‌ನ ಜಂಟಿ ವರದಿಯು ಮುಖ್ಯಮಂತ್ರಿಯವರ ಸರ್ಕಾರೇತರ ಚಟುವಟಿಕೆಗಳಲ್ಲಿ ರಾಜ್ಯ ಸರ್ಕಾರವು ಕೋಟಿಗಟ್ಟಲೆ ಖರ್ಚು ಮಾಡಿದೆ ಎಂದು ಆರೋಪಿಸಲಾಗಿತ್ತು.
ಮುಖ್ಯಮಂತ್ರಿ ಶರ್ಮಾ ಅವರು ರಾಜ್ಯ ಸರ್ಕಾರದ ಖರ್ಚಿನಲ್ಲಿ ಅಸ್ಸಾಂನ ಒಳಗೆ ಮತ್ತು ಹೊರಗೆ ಹೈ ಪ್ರೊಫೈಲ್ ಮದುವೆಗಳಲ್ಲಿ ಭಾಗವಹಿಸುವುದು ಮತ್ತು ತಮ್ಮ ಪಕ್ಷದ ಕೆಲಸಗಳಿಗಾಗಿ ತೊಡಗಿಸಿಕೊಂಡಿದ್ದರು ಎಂದು ವರದಿ ಉಲ್ಲೇಖಿಸಿದೆ. ಅಲ್ಲದೆ, ಭಾರತದ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಮೂಲಕ ಪಕ್ಷದ ನಾಯಕರು ಮತ್ತು ಅದರ ಮಿತ್ರಪಕ್ಷಗಳಿಗೆ ಪ್ರಚಾರ ಮಾಡಿರುವುದು ಕೂಡಾ ಸರ್ಕಾರದ ಖರ್ಚಿನಲ್ಲೆ ಆಗಿದೆ ಎಂದು ವರದಿ ತಿಳಿಸಿತ್ತು.
ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media