ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿ ಒಂಬತ್ತು ಒಕ್ಕೂಟಗಳ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಇಂದು ಮತ್ತು ನಾಳೆ (ಡಿಸೆಂಬರ್ 16-17) ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಬೆಂಗಳೂರಿನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇಶವ್ಯಾಪಿ ನಡೆದ ಈ ಪ್ರತಿಭಟನೆಗೆ ವಿವಿಧ ರಾಜ್ಯಗಳಲ್ಲಿ ಉತ್ತಮ ಪ್ರತಿಭಟನೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಶೆಕಡ 100 ರಷ್ಟು ಸಿಬ್ಬಂದಿ ಬ್ಯಾಂಕ್ ಬಂದ್ ಮಾಡಿ ಮುಷ್ಕರ ನಡೆಸಿದ್ದಾರೆ ಎಂದು ಬ್ಯಾಂಕ್ ಸಂಘಟನೆಗಳು ತಿಳಿಸಿವೆ.
ಪ್ರಸ್ತುತ ನಡೆಯುತ್ತಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021ನ್ನು ಮಂಡಿಸುವ ನಿರೀಕ್ಷೆಯಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸೋದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಸರಕಾರದ ನೀತಿಗಳಿಂದ ಬಹಳಷ್ಟು ಬ್ಯಾಂಕ್ ಗಳು ದಿವಾಳಿಯಾಗಿವೆ. ಹಾಗಾಗಿ ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ದೇಶವ್ಯಾಪಿ ಬ್ಯಾಂಕ್ ನೌಕರರು ಚಳವಳಿ ನಡೆಸುತ್ತಿದ್ದಾರೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನ ರಾಜ್ಯ ಸಂಚಾಲಕ ಶ್ರೀನಿವಾಸ ಎಸ್ ಕೆ ತಿಳಿಸಿದ್ದಾರೆ.
2021ರ ಕೇಂದ್ರ ಆಯವ್ಯಯ ಮಂಡನೆ ಸಂದರ್ಭದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿ ಬಡಂವಾಳ ಹಿಂತೆಗೆತ, ಒಂದು ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.74 ರವರೆಗೆ ಅವಕಾಶ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತ ಮತ್ತು ಮಾರಾಟದ ಕ್ರಮಗಳು ಖಂಡನೀಯ ಎಂದು ಬಿಇಎಫ್ಐ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ಶಾನಭೋಗ ಆರೋಪಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅನ್ನು ಮಂಡಿಸಲು ಮುಂದಾಗಿದೆ. ಬ್ಯಾಂಕ್ಗಳ ಖಾಸಗೀಕರಣದೊಂದಿಗೆ, ಬ್ಯಾಂಕಿಂಗ್ ಕಂಪೆನಿಗಳ (ಅಂಡರ್ಟೇಕಿಂಗ್ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಮಾಡುವುದು, 1970 ಮತ್ತು 1980 ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರಲ್ಲಿ ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ 1969ರ ಜೂನ್ ತಿಂಗಳಲ್ಲಿ ಕೇವಲ 8961ರಷ್ಟಿದ್ದ ಬ್ಯಾಂಕ್ ಶಾಖೆಗಳ ಸಂಖ್ಯೆ 1980ರಲ್ಲಿ ಜಿಗಿದು, 2020ರ ಮಧ್ಯ ಭಾಗದಲ್ಲಿ 1,46,904 ರಷ್ಟಾಗಿದೆ. 1969ರಲ್ಲಿ ಕೇವಲ ರೂ. 4700 ಕೋಟಿಗಳಷ್ಟಿದ್ದ ಠೇವಣಿಗಳ ಮೊತ್ತ 1993ರಲ್ಲಿ ರೂ. 2,77,235 ಕೋಟಿಗಳಿಗೆ ಏರಿಕೆಯಾಗಿ, ಜನವರಿ 21ರ ಅಂತ್ಯದ ವೇಳೆಗೆ ರೂ. 1,55,49,047 ಕೋಟಿಯಷ್ಟಾಗಿದೆ ಹಾಗೂ ಸಾಲ ಸರಿಸುಮಾರು 1,09,10,416 ಕೋಟಿಯಷ್ಟಿದೆ.
ರಾಷ್ಟ್ರೀಕರಣದ ನಂತರ ಗ್ರಾಮೀಣ ಕ್ಷೇತ್ರದಿಂದ ಠೇವಣಿಗಳ ಒಳ ಹರಿವು ಮತ್ತು ಕ್ಷೇತ್ರಕ್ಕೆ ಸಾಲದ ಹೊರ ಹರಿವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂತು. ರಾಷ್ಟ್ರೀಕರಣ ನಂತರ ಸಾಕಷ್ಟು ಗಮನಾರ್ಹ ಸಾಧನೆಯ ಮೂಲಕ ದೇಶದಲ್ಲಿ ಬಡತನ ನಿವಾರಣಗೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನಡೆದಿದೆ. ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆಯಲಾದ ಮಾಹಿತಿ ಪ್ರಕಾರ 30.09.2019ರ ವರೆಗೆ ಕೇವಲ 50 ಜನ ಸಾಲಗಾರರ ರೂ., 68,607 ಕೋಟಿಗಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಇದರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ಅಂತಹವರು ಇದ್ದಾರೆ. ಕೆಟ್ಟ ಸಾಲಗಳು ಎಂದು ಪರಿಗಣಿಸಲಾಗಿರುವ ರೂ. 4,50,000 ಕೋಟಿಗಳಷ್ಟು ಮೊತ್ತದ ಸಾಲ ಕೇವಲ 100 ಅತೀ ದೊಡ್ಡ ಸಾಲಗಾರರಿಗೆ ಸೇರಿದೆ.
ದೊಡ್ಡ ಸಾಳಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ಮಾಡದ ಕೇಂದ್ರ ಸರ್ಕಾರವು ಬ್ಯಾಂಕುಗಳನ್ನು ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡುತ್ತಿದೆ. ಬ್ಯಾಂಕುಗಳ ಖಾಸಗೀಕರಣ ಎಂದರೆ ದೇಶದ ಹಣಕಾಸು ಕ್ಷೇತ್ರವನ್ನು ದೇಶೀ-ವಿದೇಶಿ ಬಂಡವಾಳಗಾರರಿಗೆ ಒಪ್ಪಿಸುವುದೇ ಆಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಖಾಸಗೀಕರಣ ವಿರೋಧಿಸುವುದೆಂದರೆ…
12 ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಣ್ಣ, ಅತಿ ಸಣ್ಣ ರೈತರು, ನಿಗಮೇತರ ವೈಯಕ್ತಿಕ ರೈತರು; ಅತಿ ಸಣ್ಣ ಉದ್ಯಮದಾರರು, ಸ್ವಸಹಾಯ ಸಮೂಹಗಳು ಮತ್ತು ದುರ್ಬಲ ವರ್ಗದವರು ಅನುಸೂಚಿತ ಜಾತಿ, ಅನುಸೂಚಿತ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಇವೆ. ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು ಕೇವಲ ಆದ್ಯತಾ ವಲಯದ ಸಾಲದ ಪ್ರಮಾಣ ಪತ್ರಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಖರೀದಿಸುವ ಮೂಲಕ ತಮ್ಮ ಆದ್ಯತಾ ವಲಯದ ಸಾಲದ ಗುರಿ ಮುಟ್ಟಲು ಪ್ರಯತ್ನಿಸುತ್ತದೆ. ಖಾಸಗೀಕರಣ ಆದ್ಯತಾ ವಲಯಕ್ಕೆ ಸಾಲದ ಹರಿವಿನ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತದೆ.
ರಾಷ್ಟ್ರದ ಆರ್ಥಿಕ ನೀತಿಗೆ ಬೆನ್ನುಲುಬಾಗಿರುವ ನಮ್ಮ ಖಾಸಗಿ ವಲಯದ ಉದ್ಯಮಗಳನ್ನು ಮಾರಾಟ ಮಾಡುವುದು ವಿರೋಧಿಸಿದ ನೌಕರರು, ಸಾರ್ವಜನಿಕ ವಲಯದ ಬ್ಯಾಂಕುಗಳ ಮಿಲಿಯನ್ ಸಣ್ಣ ಠೇವಣಿದಾರರಿಗೆ, ರೈತರಿಗೆ, ಎಂಎಸ್ಎಂಇ, ಸ್ವ ಸಹಾಯ ಸಮೂಹಗಳಿಗೆ ಮತ್ತು ಸಮಾಜದ ದುರ್ಬಲ ವರ್ಗದ ಸಾಲಗಾರರಿಗೆ ಅವರ ಹಿತರಕ್ಷಣೆಗೆ ಅಡ್ಡಿಯಾಗಿರುವ ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.