ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಹಗರಣ ಸಂಬಂಧ ಬಂಧನಕ್ಕೊಳಗಾದಂತಾಗಿದೆ. ಎಸ್ಐ ನೇಮಕಾತಿ ಸಂಬಂಧ ಆಗಿರುವ ಬಂಧನಗಳಲ್ಲೇ ಇದು ದೊಡ್ಡ ಹುದ್ದೆಯ ಅಧಿಕಾರಿಯ ಬಂಧನವಾಗಿದೆ.
25 ಅಭ್ಯರ್ಥಿಗಳಲ್ಲಿ ಪ್ರತಿಯೊಬ್ಬರಿಂದ 30 ಲಕ್ಷ ರೂ. ಡೀಲ್ನಂತೆ ಒಟ್ಟು 5 ಕೋಟಿ ಡೀಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಈಗ ಮತ್ತಷ್ಟು ವಿಚಾರಣೆ ನಡೆಸಲು ಬಂಧಿಸಿದೆ. 545 ಪಿಎಸ್ಐ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ ಅವರಿಗೆ ದೂರುಗಳು ಬಂದಿದ್ದವು. ಆದರೆ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿತ್ತು. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಅಮೃತ್ ಪೌಲ್ ಅವರ ವರ್ಗಾವಣೆಗೆ ಪೊಲೀಸ್ ವಲಯದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಗಿತ್ತು.
ಇದನ್ನೂ ಓದಿ : ಪಿಎಸ್ಐ ಪರೀಕ್ಷಾ ಅಕ್ರಮ : ಖಾಕಿಸ್ಟಾರ್ಗಳಿಂದಲೇ ನಡೆಯುತ್ತಿತ್ತು ಬ್ರೋಕರ್ಗಿರಿ
545 ಪಿಎಸ್ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್ಪಿ ಹಾಗೂ ಎಫ್ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ. ಬಂಧನಕ್ಕೆ ಒಳಗಾದ ಆರೋಪಿಗಳ ವಿಚಾರಣೆ ವೇಳೆ ಕೆಲವರು ಅಮೃತ್ ಪೌಲ್ ಹೆಸರನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಲ್ಕು ಬಾರಿ ವಿಚಾರಣೆ ನಡೆಸಿದ್ದ ಸಿಐಡಿ ಇಂದು ಮತ್ತೆ ವಿಚಾರಣೆಗೆ ಕರೆದಿತ್ತು. ಇಂದು ವಿಚಾರಣೆ ನಡೆಸಿದ ಬಳಿಕ ಮತ್ತಷ್ಟು ಮಾಹಿತಿ ಕಲೆ ಹಾಕಲು ಅಮೃತ್ ಪೌಲ್ ಅವರನ್ನು ಬಂಧಿಸಿದೆ.