- ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಹವಾಲಾ ಮಾದರ ಸದ್ದು
- ಬರೋಬ್ಬರಿ 50 ಕೋಟಿ ಹವಾಲಾ ವಹಿವಾಟು?
- ಡೀಲ್‌ನ ಆರಂಭದಲ್ಲಿಯೇ ನಗದು ರೂಪದಲ್ಲಿ ಮಾತ್ರವೇ ಹಣ ನೀಡಬೇಕು ಎಂದು ಷರತ್ತು
ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾಗುವುದಕ್ಕಾಗಿ ಆರೋಪಿ ಅಭ್ಯರ್ಥಿಗಳು, ₹ 30 ಲಕ್ಷದಿಂದ ₹ 1.25 ಕೋಟಿವರೆಗೂ ಹಣ ಕೊಟ್ಟಿದ್ದಾರೆಂಬ ಮಾಹಿತಿ ಸಿಐಡಿಗೆ ಲಭ್ಯವಾಗಿದೆ. ಹಣ ವರ್ಗಾವಣೆಗೆ ಸಂಬಂಧಪಟ್ಟ ಪುರಾವೆಗಳಿಗಾಗಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಹಗರಣದಲ್ಲಿ ‘ಹವಾಲಾ’ ಮಾದರಿಯಲ್ಲಿ ಕೋಟ್ಯಂತರ ರೂ. ಹಣದ ವಹಿವಾಟು ನಡೆದಿರುವ ಸುಳಿವು ಸಿಐಡಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.
ಕಲಬುರಗಿಯಲ್ಲಿ ಸಿಐಡಿ ಬಲೆಗೆ ಬಿದ್ದಿರುವ 26 ಆರೋಪಿಗಳು ಹಾಗೂ ಬೆಂಗಳೂರಿನಲ್ಲಿ ಬಂಧನವಾಗಿರುವ 12 ಅಭ್ಯರ್ಥಿಗಳು ಸೇರಿ ಒಟ್ಟು 38 ಅಭ್ಯರ್ಥಿಗಳ ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿರುವ ದಿವ್ಯಾ ಹಾಗರಗಿ, ಆರ್.ಡಿ ಪಾಟೀಲ, ಮಂಜುನಾಥ್ ಸೇರಿ ಹಲವು ಮಧ್ಯವರ್ತಿಗಳ ಅಕೌಂಟ್‌ಗಳನ್ನು ಸಿಐಡಿ ಜಾಲಾಡಿದೆ. ಈ ವೇಳೆ ಅವರ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಪ್ರಮಾಣದ ಹಣ ಕಂಡು ಬಂದಿಲ್ಲ. ಆದರೆ, ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಆರೋಪಿಗಳು ತಾವು ನಗದು ರೂಪದಲ್ಲಿ ಹಣ ನೀಡಿರುವುದನ್ನು ಬಾಯ್ಬಿಟ್ಟಿದ್ದಾರೆ. ಹೀಗಾಗಿ, ಇಡೀ ಹಗರಣದಲ್ಲಿ ಹವಾಲಾ ಮಾದರಿಯಲ್ಲಿಯೇ 50 ಕೋಟಿ ರೂ.ಗಳಿಗೂ ಅಧಿಕ ಹಣದ ವ್ಯವಹಾರ ನಡೆದಿರುವ ಸಾಧ್ಯತೆಯಿದೆ ಎನ್ನುತ್ತವೆ ತನಿಖಾ ಮೂಲಗಳು.
ಮಧ್ಯವರ್ತಿಗಳಿಗೆ ಕೊಟ್ಟ ಮಾತಿನಂತೆ ಅಭ್ಯರ್ಥಿಗಳು ನಗದು ಹಣವನ್ನು ಅವರು ಹೇಳಿದ ಜಾಗಗಳಿಗೆ ತಲುಪಿಸುತ್ತಿದ್ದರು. ಮಧ್ಯವರ್ತಿಗಳ ಪರವಾಗಿ ಅವರ ಸಹಾಯಕರು, ಪರಿಚಯಸ್ಥರ ಮೂಲಕ ಹಣ ಪಡೆದಿದ್ದಾರೆ. ನಗದು ವಹಿವಾಟು ಬಹುತೇಕ ಬೆಂಗಳೂರಿನಲ್ಲಿಯೇ ಹೆಚ್ಚಾಗಿ ನಡೆದಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಡೀಲ್‌ನ ಆರಂಭದಲ್ಲಿಯೇ ನಗದು ರೂಪದಲ್ಲಿ ಮಾತ್ರವೇ ಹಣ ನೀಡಬೇಕು ಎಂದು ಷರತ್ತು ವಿಧಿಸಿದ್ದರು. ಕಲ್ಯಾಣ ಕರ್ನಾಟಕ ಕೋಟಾ, ಸಾಮಾನ್ಯ ಕೋಟಾ, ಸೇವಾನಿರತ ಕೋಟಾ, ಮೀಸಲಾತಿ ಕೋಟಾಗಳಿಗೆ ಸಂಬಂಧಿಸಿದಂತೆ 30 ಲಕ್ಷ ರೂ.ಗಳಿಂದ 1.25 ಕೋಟಿ ರೂ.ಗಳವರೆಗೆ ಒಬ್ಬೊಬ್ಬ ಅಭ್ಯರ್ಥಿಯಿಂದ ಡೀಲ್ ಮಾಡಿಕೊಂಡಿದ್ದರು. ಕೆಲವು ಅಭ್ಯರ್ಥಿಗಳು ಅರ್ಧ ಹಣವನ್ನು ಮೊದಲು ಕೊಟ್ಟಿದ್ದು, ತಾತ್ಕಾಲಿಕ ನೇಮಕಾತಿ ಪಟ್ಟಿ ಬಿಡುಗಡೆಯಾದ ಬಳಿಕ ಪೂರ್ತಿ ಹಣ ನೀಡಿರುವ ಶಂಕೆಯಿದೆ.
‘ಸಿಂಘಂ’ನಂಥ ಅಧಿಕಾರಿಗಳಿದ್ರೂ ಅಕ್ರಮ ಹೇಗಾಯ್ತು? ಡಿ. ರೂಪಾ ಮೌದ್ಗಿಲ್ ಪ್ರಶ್ನೆ : ಖಡಕ್ ಐಪಿಎಸ್ ಹಿರಿಯ ಅಧಿಕಾರಿ ಡಿ.ರೂಪಾ ಮೌದ್ಗಿಲ್, ಇದೀಗ ಪಿಎಸೈ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮದೇ ಖಾಕಿಪಡೆಯ ವಿರುದ್ಧ ಚಾಟಿ ಬೀಸಿದ್ದಾರೆ.
ಕರ್ನಾಟಕ ರಾಜ್ಯದ ಐಪಿಎಸ್ ಅಧಿಕಾರಿಗಳ ವಲಯದ ವಾಟ್ಸಾಪ್ ಗ್ರೂಪಿನಲ್ಲಿ ಹಿರಿಯ ಅಧಿಕಾರಿ ಡಿ.ರೂಪಾ ಅವರ ಇಂತಹುದ್ದೊಂದು ಸಂದೇಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ
‘ಈ ಅಕ್ರಮ ಜನಸಾಮಾನ್ಯರ ಬೆಚ್ಚಿ ಬೀಳಿಸಿದೆಯೆಲ್ಲದೆ, ಮುಖ್ಯವಾಗಿ ಪೊಲೀಸ್ ಇಲಾಖೆಗೆ ಕೆಟ್ಟಹೆಸರು ಮೂಡಿಸಿದೆ ಜೊತೆಗೆ ಸರ್ಕಾರಕ್ಕೂ ಕೂಡ ದೊಡ್ಡಮಟ್ಟದಲ್ಲಿ. ಹೆಸರು ಗಳಿಸಿದ್ದ ನೇಮಕಾತಿ ವಿಭಾಗಕ್ಕೆ ಇಂದಿನ ದಿನಮಾನದ ಬೆಳವಣಿಗೆಗಳಿಂದಾಗಿ ನಾನೂ ಸೇರಿದಂತೆ ನನ್ನಂತಹ ಅನೇಕರಿಗೆ ನೋವು ಮೂಡಿಸಿದೆ.
ಸಾಮಾನ್ಯ ಆಕಾಂಕ್ಷಿಗಳು ಹಾಗೂ ಮಾಧ್ಯಮಗಳು ಈ ವಿಷಯ ಪ್ರಸ್ತಾಪಿಸಿದಾಗ, ವೈಯುಕ್ತಿಕವಾಗಿ ನನಗೆ ಭಾರಿ ಮುಜುಗರ ಮೂಡಿಸಿದೆ, ತಲೆ ಕೆಳಗಾಗಿಸುವಂತೆ ಮಾಡಿದೆ. ಪಿಎಸೈ ಆಗುವುದು ಪ್ರತಿಯೊಬ್ಬ ಯುವಕ/ಯುವತಿಯ ಕನಸು, ಹೀಗಾಗಬಾರದಿತ್ತು. ರಾಜ್ಯದಲ್ಲಿ ‘ಸಿಂಘಂ’ನಂತಹ ಹಿರಿಯ ಅಧಿಕಾರಿಗಳು ಇದ್ದಾಗಲೂ ಕೂಡ ಅದ್ಹೇಗೆ ಹೀಗಾಯ್ತು? ನಿಮ್ಮ ಅವಧಿಯಲ್ಲಿ ಹೀಗಾಗಿದ್ದಕ್ಕೆ ನನಗೆ ಖೇದವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.