ಪಿಎಸ್ಐ ಪರೀಕ್ಷಾ ಅಕ್ರಮ : ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

ಬೆಂಗಳೂರು: ಪೊಲೀಸ್​ ಸಬ್​ಇನ್​ಸ್ಪೆಕ್ಟರ್ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ದಿವ್ಯಾರನ್ನು ಪುಣೆಯಿಂದ ಕಲಬುರಗಿಗೆ ಕರೆತರಲಾಗುತ್ತಿದೆ. 10 ಗಂಟೆಗೆ ಅವರು ಕಲಬುರಗಿ ತಲುಪಬಹುದು ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್​ಐ ಪರೀಕ್ಷೆ ಅಕ್ರಮ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡವು ತನಿಖೆಗೆ ಅಸಹಕಾರ, ಆರೋಪಿಗಳ ನಾಪತ್ತೆಗೆ ಬೆಂಬಲ ಆರೋಪದ ಮೇಲೆ ರಾಜೇಶ್ ಹಾಗರಗಿಯನ್ನ ಬಂಧಿಸಿದ್ದರು. ನಾಪತ್ತೆಯಾಗಿದ್ದ ದಿವ್ಯಾ ಹಾಗರಗಿಗಾಗಿ ಕಳೆದ 18 ದಿನಗಳಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.

ಕಲಬುರಗಿಯಲ್ಲಿ ದಿವ್ಯಾ ಹಾಗರಗಿ ಪ್ರಭಾವಿ ರಾಜಕಾರಣಿ :
ಕಲಬುರಗಿ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ದಿವ್ಯಾ ಹಾಗರಗಿ, ದಿಶಾ ಕಮಿಟಿ ಸದಸ್ಯೆಯಾಗಿದ್ದು, ರಾಜ್ಯ ನರ್ಸಿಂಗ್ ಬೋರ್ಡ್ ಸದಸ್ಯರಾಗಿಯೂ ಇದ್ದಾರೆ. ಈ ಮೊದಲು ಕಲಬುರಗಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆರೂ ಆಗಿದ್ದರು. ಕಳೆದ ಫೆಬ್ರವರಿ ತಿಂಗಳಿನಲ್ಲಿ ಸ್ವತಃ ಗೃಹ ಸಚಿವ ಅರಗ ಜ್ಞಾನೇಂದ್ರರವರ ದಿವ್ಯಾ ಹಾಗರಗಿ ನಿವಾಸಕ್ಕೆ ಭೇಟಿ ನೀಡಿ, ಆತಿಥ್ಯ ಸ್ವೀಕರಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ದಿವ್ಯಾ ಹಾಗರಗಿ ತೆಗೆಸಿಕೊಂಡಿದ್ದ ಫೋಟೊಗಳು ವೈರಲ್ ಆಗಿದ್ದವು.

20 ಜನರ ಬಂಧನ : ಅಕ್ರಮದ ಪ್ರಮುಖ ಕಿಂಗ್‌ ಪಿನ್‌ ದಿವ್ಯಾ ಹಾಗರಗಿ, ರುದ್ರಗೌಡ ಪಾಟೀಲ, ಅವರ ಸಹೋದರ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ, ದಿವ್ಯಾ ಪತಿ ರಾಜೇಶ ಹಾಗರಗಿ ಸೇರಿದಂತೆ ಅಭ್ಯರ್ಥಿಗಳು, ಮೇಲ್ವಿಚಾರಕಿಯರು, ಸರ್ಕಾರಿ ಮಹಿಳಾ ಸಿಬ್ಬಂದಿ ಸೇರಿದಂತೆ 20 ಜನರನ್ನು ಸಿಐಡಿ ಪೊಲೀಸರು ಈ ವರೆಗೆ ಬಂಧಿಸಿದ್ದಾರೆ. ಆ ಪೈಕಿ ಏಳು ಅಭ್ಯರ್ಥಿಗಳು ಸಿಐಡಿ ವಶದಲ್ಲಿದ್ದಾರೆ. ಸಿಐಡಿ ಎಸ್‌ಪಿ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *