ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹೊಸದೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಸಿಐಡಿ ಪೊಲೀಸರು ಬಂಧಿಸಿದ ಅಫಜಲಪುರ ಶಾಸಕರ ಗನ್ಮ್ಯಾನ್ ಹಯ್ಯಾಳ ದೇಸಾಯಿ ಪಕ್ಕಾ ‘ಹಿಂದಿ ಸಿನಿಮಾದ’ ಮಾದರಿಯಲ್ಲಿ ಪರೀಕ್ಷೆ ಬರೆದಿದ್ದ ಅನ್ನೋ ಸಂಗತಿ ಹೊರಬಿದ್ದಿದೆ.
ಓಎಂಆರ್ ಸೀಟಿನಲ್ಲಿ ಅಕ್ರಮವೆಸಗಿ ಆಯ್ಕೆಯಾದ ತಂಡದ ಬೇಟೆಯಾಡುತ್ತಿರುವ ಸಿಐಡಿ ಅಧಿಕಾರಿಗಳು ಮತ್ತೊಂದು ರೀತಿಯಿಂದ ಗ್ಯಾಂಗ್ ಪತ್ತೆ ಮಾಡಿದ್ದಾರೆ. ಬ್ಯೂಟೂತ್ ಡಿವೈಸ್ ಬಳಕೆ ಮಾಡಿ ಹಯ್ಯಾಳ ದೇಸಾಯಿ ಪರೀಕ್ಷೆ ಬರೆದಿದ್ದ ಎಂಬ ಅಂಶ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈತ ಬ್ಲೂಟೂತ್ ಡಿವೈಸ್ ಬಳಕೆ ಮಾಡಿಕೊಂಡು ಪರೀಕ್ಷಾ ಕೇಂದ್ರದ ಹೊರಗಿನವವರಿಂದ ಉತ್ತರ ಪಡೆದು ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆದು ಪಿಎಸ್ಐ ಆಯ್ಕೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಇದೇ ರೀತಿ ಅನೇಕರು ಸಹ ಪರೀಕ್ಷೆ ಬರೆದಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ಈಗ ಸಿಐಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ಆರಂಭಿಸಿದೆ.
ಬಂಧಿತರ ಸಂಖ್ಯೆ 15 ಕ್ಕೆ ಏರಿಕೆ : ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಕುರಿತಾದ ತನಿಖೆಯನ್ನು ಸಿಐಡಿ ತಂಡದವರು ಮತ್ತಿಷ್ಟು ತೀವ್ರಗೊಳಿಸಿದ್ದು, ಶುಕ್ರವಾರ ಮತ್ತಿಬ್ಬರನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ 12 ಕ್ಕೇರಿದೆ.
ಕಲಬುರಗಿ ನಗರದ ಜ್ಞಾನ ಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಮತ್ತೊಬ್ಬ ಅಭ್ಯರ್ಥಿಯ ಬಂಧನವಾಗಿದೆ.ಅಕ್ರಮಕ್ಕೆ ಸಂಬಂಧಿಸಿದಂತೆ ವೀರೇಶ ಶಿರೂರ ಎನ್ನುವ ಅಭ್ಯರ್ಥಿಯನ್ನು ಹಾಗೂ ಆರೋಪಿ ಹಯ್ಯಾಳಿಗೆ ಸಹಕರಿಸಿದ ಆರೋಪದ ಮೇಲೆ ಅಫಜಲಪೂರ ಮೂಲದ ಶರಣಬಸಪ್ಪ ಎಂಬಾತನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.