- ರಚನಾ ಹನುಮಂತ ಮುತ್ತಲಗೇರಿ(25) ಬಂಧಿತ ಆರೋಪಿ
- ಮೊದಲ ಪ್ರಯತ್ನದಲ್ಲಿಯೇ ರಾಜ್ಯಕ್ಕೆ ಪ್ರಥಮ ಸ್ಥಾನ
- ಸರ್ಕಾರದ ವಿರುದ್ಧ ಹೋರಾಟದಲ್ಲೂ ಮುಂಚೂಣಿ ಸ್ಥಾನ
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ ಅವರನ್ನು ಬಂಧಿಸಿದ್ದಾರೆ.
545 ಪಿಎಸ್ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೇ ಆರೋಪಿಯಾಗಿರುವ ರಚನಾ ಹನುಮಂತ ಅವರನ್ನು ಸಿಐಡಿ ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿದೆ.
ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ ಮೊದಲ ರ‍್ಯಾಂಕ್ ಪಡೆದಿದ್ದರು. ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ರಚನಾ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದರು. ಪೊಲೀಸರ ಕಣ್ಣುತಪ್ಪಿಸಿ ತಿರುಗಾಡುತ್ತಿದ್ದ ರಚನಾ ಒಂದೆಡೆ ನೆಲೆ ನಿಲ್ಲದೇ ಹಲವು ಕಡೆ ವಾಸ್ತವ್ಯ ಬದಲಾಯಿಸಿದ್ದರು. ಬೆಂಗಳೂರು, ಕಲಬುರಗಿ ಸಿಐಡಿ ಅಧಿಕಾರಿಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಮಹಾರಾಷ್ಟ್ರ ಗಡಿಯಲ್ಲಿರುವ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ಸಿಐಡಿ ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ ಬಸವರಾಜ ನೇತೃತ್ವದ ತಂಡವು ರಚನಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಶನಿವಾರ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರಸಾಬ್ ಮುಲ್ಲಾ ಅವರ ಎದುರು ಆರೋಪಿಯನ್ನು ಹಾಜರುಪಡಿಸಲಾಯಿತು.
ಪಿಎಸ್‌ಐ ಅಕ್ರಮ ನಡೆದ ಆರೋಪ ಕೇಳಿ ಬಂದಾಗ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಕ್ರಮ ಖಂಡಿಸಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದರು. ಸಿಐಡಿ ತನಿಖೆಯಲ್ಲಿ ರಚನಾ 30 ಲಕ್ಷ ನೀಡಿದ್ದರೆಂಬ ಮಾಹಿತಿ ಬಹಿರಂಗವಾಗಿತ್ತು.
ರಾಜ್ಯ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿರುವ ಪಿಎಸ್‌ಐ ಹಗರಣ ದಿನಕೊಂದು ಆಯಾಮ ಪಡೆಯುತ್ತಾ ಇದೆ. ಇದು ವಿರೋಧ ಪಕ್ಷಗಳಿಗೆ ಒಂದು ರೀತಿಯ ಅಸ್ತ್ರವಾಗಿ ಸಿಕ್ಕರೆ ಆಡಳಿತ ಪಕ್ಷದವರಿಗೆ ಒಂದು ತರಹದ ತಲೆ ನೋವಾಗಿ ಮಾರ್ಪಟ್ಟಿದೆ.