ಬೆಂಗಳೂರು: ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಮಾಜಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಚಿವ ಅಶ್ವತ್ಥನಾರಾಯಣ ವಿರುದ್ಧವೂ ಆರೋಪ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಮಾಜಿ ಸಿಎಂ ಅವರ ಪುತ್ರ ವಿಜಯೇಂದ್ರ ವಿರುದ್ಧವೂ ಆರೋಪ ಕೇಳಿ ಬಂದಿದೆ. ಅಶ್ವತ್ಥ ನಾರಾಯಣ ಮೇಲೂ ಆರೋಪ ಇದೆ. ಆದರೆ ನನಗೆ ಸಿಕ್ಕ ಮಾಹಿತಿ ಬಹಿರಂಗಪಡಿಸಲು ಆಗಲ್ಲ. ಇನ್ನೂ ಹಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದ್ದಾರೆ. ಇವರಿಗೆಲ್ಲ ರಕ್ಷಣೆ ನೀಡುವ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನ ಆಗಿದೆ. ನಾವು ವಿಧಾನಸಭೆಯಲ್ಲಿ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದಾಗ ಸಿಎಂ ಹಾಗೂ ಗೃಹ ಸಚಿವರು ನಮ್ಮ ಮೈಮೇಲೆ ಬಿದ್ದರು. ಪಿಎಸ್ ಐ ಹಗರಣದಲ್ಲಿ ಯಾವ ಭ್ರಷ್ಟಾಚಾರ ನಡೆದಿಲ್ಲ ಎಂದು ಸದನದಲ್ಲಿ ಹೇಳಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ವೀರಾವೇಶದಲ್ಲಿ ಉತ್ತರ ಕೊಟ್ಟಿದ್ದರು.ಇವಾಗ ಅದೇ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದ ಅಮೃತ್ ಪೌಲ್ ಬಂಧನ ಆಗಿದೆ. ಇವಾಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.
ಒಬ್ಬ ಜವಾಬ್ದಾರಿ ಮಂತ್ರಿಯಾಗಿ ಅವರ ಇಲಾಖೆಯಲ್ಲಿ ನಡೆದ ನೇಮಕಾತಿಯ ಭ್ರಷ್ಟಾಚಾರ ಆರೋಪವನ್ನು ತಳ್ಳಿ ಹಾಕಿದವರು ಇವಾಗ ಬೆನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸದನದಲ್ಲಿ ಸುಳ್ಳು ಹೇಳಿದವರು ಮಂತ್ರಿಯಾಗಿ ಮುಂದುವರಿಯಲು ಲಾಯಕ್ಕಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ಹಲವು ಘಟನೆಗಳಲ್ಲಿ ಬೇಜಾವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ : ಅಕ್ರಮ ನೇಮಕಾತಿ ಪ್ರಕರಣ, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನ
ಇಂತಹ ಗೃಹ ಸಚಿವರ ಮೂಲಕ ಸಿಎಂ ಸುಳ್ಳು ಹಾಗೂ ಬೇಜವಾಬ್ದಾರಿ ಹೇಳಿಕೆ ಕೊಡಿಸುತ್ತಿದ್ದಾರೆ. ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ನಡೆಸಿತ್ತು. ಸಿಐಡಿಯಿಂದ ನ್ಯಾಯ ಸಿಕ್ಕಲ್ಲ, ಇದರಲ್ಲಿ ಮಂತ್ರಿಗಳ ಪಾತ್ರ ಇದೆ. ದೊಡ್ಡ ರಾಜಕಾರಣಿಗಳ ಪಾತ್ರ ಇದೆ. ಅವರ ಬಂಧನ ಮಾಡುವುದು ಕಷ್ಟ ಅದಕ್ಕಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿದ್ದೆವು. ಮೇ 26 ತಾರೀಕಿನಂದು ಈ ಬಗ್ಗೆ ಪತ್ರ ಬರೆದಿದ್ದೆ. ಆದರೆ ನ್ಯಾಯಾಂಗ ತನಿಖೆ ಮಾಡಿಲ್ಲ ಎಂದು ಕಿಡಿಕಾರಿದರು.ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥ ನಾರಾಯಣ ಮೇಲೂ ಆರೋಪ ಮಾಡಿದ್ದೆವು. ಅವರ ಕಡೆಯವರು ಐದು ಮಂದಿ ಅಕ್ರಮವಾಗಿ ಆಯ್ಕೆ ಆಗಿದ್ದಾರೆ. ಹಾಗಾದರೆ ಅಶ್ವತ್ಥ ನಾರಾಯಣ ವಿರುದ್ಧ ಕ್ರಮ ಸಿಐಡಿ ತೆಗೆದುಕೊಳ್ಳುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 30 ಲಕ್ಷದಿಂದ ಒಂದು ಕೋಟಿಯವರೆಗೂ ಹಣ ಅವ್ಯವಹಾರ ನಡೆದಿದೆ. ಯಾರ್ಯಾರಿಗೆ ಈ ಹಣ ಹೋಗಿದೆ ಎಂದು ಗೊತ್ತಾಗಬೇಕಿದೆ. ಇವರನ್ನು ರಕ್ಷಣೆ ಮಾಡುತ್ತಿರುವುದು ರಾಜ್ಯದ ಮುಖ್ಯಮಂತ್ರಿಗಳು ಎಂದು ಆರೋಪಿಸಿದರು.
ಡಿ.ಸಿ ಮಂಜುನಾಥ್ ಪ್ರಕರಣಲ್ಲಿ ಹೈಕೋರ್ಟ್ ನ್ಯಾಯಾಧೀಶರರು ಏನೆಲ್ಲಾ ಮಾತನಾಡಿದ್ದಾರೆ? ಆದರೆ ಅವರನ್ನೇ ಹೆದರಿಸಲು ಪ್ರಯತ್ನ ಮಾಡಿದ್ದಾರೆ. ಜಡ್ಜ್‌ಗೇ ರಕ್ಷಣೆ ಇಲ್ಲ ಅಂದ್ರೆ ಮತ್ಯಾರಿಗೆ ರಕ್ಷಣೆ ಸಿಗಲಿದೆ ಎಂದ ಸಿದ್ದರಾಮಯ್ಯ, ನ್ಯಾಯಾಧೀಶರು ಹೇಳದೆ ಹೋಗಿದ್ದರೆ ಡಿ.ಸಿ ಮಂಜುನಾಥ್ ಬಂಧನ ಆಗುತ್ತಿರಲಿಲ್ಲ. ಲಂಚ ಇವಾಗ ಮುಗಿಲು ಮುಟ್ಟಿದೆ. ಎಸಿಬಿ ಕಲೆಕ್ಷನ್ ಬ್ಯೂರೋ ಎಂದು ಹೇಳಿದ್ದಾರೆ. ಅದು ಹುಟ್ಟು ಹಾಕಿದ್ದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಆದರೆ ಅದೇ ಭ್ರಷ್ಟಾಚಾರ ಕೂಪ ಆದರೆ ಹೇಗೆ ಎಂದು ಪ್ರಶ್ನಿಸಿದರು.
ಇನ್ನು, ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿಗೆ ಪ್ರತಿಕ್ರಿಯೆ ನೀಡಿ, ಇ.ಡಿ ಹಾಗೂ ಎಸಿಬಿಗೆ ಸಂಬಂಧ ಇಲ್ಲ. ಬೇರೆ ಕೇಸ್‌ನಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಇದನ್ನು ಡೈವರ್ಟ್ ಮಾಡಲು ದಾಳಿ ಮಾಡಿರಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.