ಬೆಂಗಳೂರು: ಪಿಎಸ್ಐ ಹುದ್ದೆಗಳಿಗೆ ಸಂಬಂಧಿಸಿದ ಮರು ಪರೀಕ್ಷೆ ನಡೆದು 9 ತಿಂಗಳಾದರೂ ಫಲಿತಾಂಶವನ್ನು ಇನ್ನೂ ಕೂಡ ಸರ್ಕಾರ ಪ್ರಕಟಿಸಿಲ್ಲ ಎಂದು ನೊಂದ ಅಭ್ಯರ್ಥಿಗಳು ,ಇದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
2020ರಲ್ಲಿ ಮೊದಲಿಗೆ ಪಿಎಸ್ಐ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು.ನಂತರದ ವರ್ಷದಲ್ಲಿ ಪಿಎಸ್ಐ ಪರೀಕ್ಷೆಯೂ ನಡೆದು, ಫಲಿತಾಂಶವೂ ಪ್ರಕಟವಾಗಿತ್ತು. ಆದರೆ, ಈ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದರಿಂದ ಮೊದಲು ನಡೆಸಿದ್ದ ಪರೀಕ್ಷೆಯನ್ನು ರದ್ದು ಸರ್ಕಾರ ರದ್ದು ಮಾಡಿತ್ತು.
ಈ ವೇಳೆ ಯಾರೋ ಕೆಲವರು ಅಕ್ರಮ ಮಾಡಿರುವ ತಪ್ಪಿಗೆ ನೂರಾರು ಮಂದಿ ಅಭ್ಯರ್ಥಿಗಳು ನೋವು ಅನುಭವಿಸಬೇಕಾಯಿತು. ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಮರುಪರೀಕ್ಷೆ ನಡೆಸುವುದಾಗಿ ಮತ್ತೆ ಹೇಳಿತ್ತು. ಇದನ್ನು ಖಂಡಿಸಿ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಮರುಪರೀಕ್ಷೆ ನಡೆಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಹಾಗಾಗಿ ರಾಜ್ಯ ಸರ್ಕಾರ ಕೂಡ ಮರುಪರೀಕ್ಷೆ ನಡೆಸಲು ಆದೇಶ ಹೊರಡಿಸಿತು. ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈ ಜನವರಿಯಲ್ಲಿ ಮರುಪರೀಕ್ಷೆಯನ್ನು ನಡೆಸಿತ್ತು. ಬಳಿಕ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಕರ್ನಾಟಕ ರಾಜ್ಯ ಪೊಲೀಸ್ಗೆ ವರ್ಗಾಯಿಸಲಾಗಿತ್ತು.
ಇದನ್ನು ಓದಿ : ದಸರಾ ಹಬ್ಬವು ಹಿಂಸೆಗೆ ಪ್ರಚೋದನೆ ಕೊಡುವಂತದ್ದು: ಲೇಖಕಿ ಬಿ. ಟಿ. ಲಲಿತಾ ನಾಯಕ್
ಆದರೆ ಇಲ್ಲಿವರೆಗೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿಲ್ಲ ಎಂದು ಅಭ್ಯರ್ಥಿಗಳು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ನೊಂದ ಅಭ್ಯರ್ಥಿಗಳು ತಮ್ಮ ರಕ್ತದಲ್ಲೇ ಪತ್ರ ಬರೆದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲಿಂದಲೂ ಯಾವುದೇ ಸ್ಪಂದನೆ ಸಿಗದ ಕಾರಣ ಜಿಲ್ಲಾಮಟ್ಟದಲ್ಲಿ ಮೊದಲಿಗೆ ಪ್ರತಿಭಟನೆ ಕೈಗೊಂಡಿದ್ದರು. ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆಗಳು ಬಹುತೇಕ ಖಾಲಿ ಇದ್ದು, ಮಾನ್ಯ ಸರ್ಕಾರ 545 ಮತ್ತು 402ರ ಪರೀಕ್ಷೆಯನ್ನು ಸುಗಮವಾಗಿ ನಡೆಸಿದರೂ ಫಲಿತಾಂಶ ಬಿಡುಗಡೆಯ ಭಾಗ್ಯವೇ ಇಲ್ಲದಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಯಾಕಿಷ್ಟು ವಿಳಂಬ ಮಾಡುತ್ತಿದ್ದೀರಿ? 4 ವರ್ಷಗಳಿಂದ ಕಾಯುತ್ತಲೇ ಇದ್ದೇವೆ, ಆದೇಶದ ಗ್ಯಾರಂಟಿ ಯಾವಾಗ ನೀಡುವಿರಿ? ಎಂದು ಅಭ್ಯರ್ಥಿಗಳು ಸಂಕಟ ಹೊರಹಾಕಿದ್ದಾರೆ.
ಜೆಡಿಎಸ್ ಸಾಥ್: ಪಿಎಸ್ಐ ಅಭ್ಯರ್ಥಿಗಳ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಕಣ್ಣು ಕಾಣದ, ಕಿವಿ ಕೇಳದ ಭಂಡ ಕಾಂಗ್ರೆಸ್ ಸರ್ಕಾರಕ್ಕೆ ಯುವ ಜನತೆಯ ಬಗ್ಗೆ ಕಾಳಜಿ ಇಲ್ಲದಾಗಿದೆ. ಪಿಎಸ್ಐ 545ರ ಮರು ಪರೀಕ್ಷೆ ನಡೆದು ಸುಮಾರು 9 ತಿಂಗಳಾದರೂ ಆಯ್ಕೆ ಪಟ್ಟಿ ಪ್ರಕಟಿಸದೆ ಹೊಣೆಗೇಡಿಯಂತೆ ವರ್ತಿಸುತ್ತಾ, ಅಭ್ಯರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ದೂರಿದೆ.
ನೊಂದ ಅಭ್ಯರ್ಥಿಗಳು ರಕ್ತದಲ್ಲಿ ಬರೆದ ಪತ್ರಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಾದರೂ ಪಿಎಸ್ಐ ಮರು ಪರೀಕ್ಷೆಯ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.
ಇದನ್ನು ನೋಡಿ : ಕೇಂದ್ರ ಸರ್ಕಾರ ಮಕ್ಕಳ ಹಕ್ಕುಗಳನ್ನು ಕಸಿಯುತ್ತಿದೆ – ಯಮುನಾ ಗಾಂವ್ಕರ್ Janashakthi Media