ಬೆಂಗಳೂರು: ಪಿಎಸ್‌ಐ ನೇಮಕಾತಿ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ ಆಡಿಯೋ ಬಗ್ಗೆಯೂ ತನಿಖೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವಾಗಿರುವ ಬಗ್ಗೆ ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ನೇಮಕಗೊಂಡಿರುವವರನ್ನು ಸಹ ವಿಚಾರಣೆ ಕೈಗೊಳ್ಳಲಾಗುತ್ತಿದೆ. ಇದರ ನಡುವೆ, ಇಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಆಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಬೆಂಗಳೂರಿನ ಆರ್‌ಟಿ ನಗರ ನಿವಾಸದಲ್ಲಿ ಮಾತನಾಡಿ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ ಆಡಿಯೋ ಏನು ಗೊತ್ತಿಲ್ಲ. ಎಲ್ಲವೂ ತನಿಖೆ ಆಗುತ್ತದೆ. ಆಡಿಯೋದಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿರುವುದು ಉಲ್ಲೇಖಿಸಲಾಗಿದೆ. ಆದರೆ ಅವರು ಯಾರು? ಅವರ ಅರ್ಹತೆ ಏನು? ಎಲ್ಲವೂ ತನಿಖೆ ಆಗುತ್ತದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈಮೇಲ್ ಬೆದರಿಕೆ ತನಿಖೆ
ಶಾಲೆ ಕಾಲೇಜುಗಳ ಮೇಲಿನ ದಾಳಿ ಬಗ್ಗೆ ಈಮೇಲ್ ಮೂಲಕ ಸಿರಿಯಾ ಮತ್ತು ಪಾಕ್ ನಿಂದ ಬೆದರಿಕೆ ಬಂದಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಈ ಬಗ್ಗೆ ಗೊತ್ತಿಲ್ಲ. ಪೊಲೀಸ್ ಕಮಿಷನರ್ ಬಳಿ ಮಾತನಾಡುತ್ತೇನೆ. ಶಾಂತಿ ಕದಡಲು ಪ್ರಯತ್ನ ನಡೆಯುತ್ತಾ ಬಂದಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳಲ್ಲ. ಈ ಬಗ್ಗೆ ತನಿಖೆ ಆಗುತ್ತದೆ. ಈಮೇಲ್ ಇದ್ರೆ ಟ್ರಾಕ್ ಮಾಡುತ್ತೇವೆ. ಅದು ಯಾವ ದೇಶದಿಂದ ಬಂದಿದೆ ಎಂದು ಗೊತ್ತಾಗುತ್ತೆ ಎಂದರು.