ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿಎಸ್‌ಐ ಪರೀಕ್ಷೆ ಬರೆದಿರುವ 545 ಅಭ್ಯರ್ಥಿಗಳಲ್ಲಿ ಎಷ್ಟು ಜನರನ್ನು ಕರೆದು ಒಎಂಆರ್ ಶೀಟ್ ಗಳನ್ನು ಪರೀಕ್ಷೆ ಮಾಡಿದ್ದೀರಿ? ಎಷ್ಟು ಜನ ಹಾಜರಾಗಿದ್ದಾರೆ? ಎಷ್ಟು ಜನ ಹಾಜರಾಗಿಲ್ಲ ಎನ್ನುವುದನ್ನು ಸರ್ಕಾರ ಜನತೆಗೆ ತಿಳಿಸಬೇಕು. ವಿಧಾನಸಭೆಯಲ್ಲಿ ಪಿಎಸ್ಐ ಅಕ್ರಮ ತನಿಖೆಯ ಮಧ್ಯಂತರ ವರದಿ ಸಲ್ಲಿಸುವ ಬಗ್ಗೆ ಮಾತನಾಡುವ ಗೃಹ ಮಂತ್ರಿಗಳು, ಎಷ್ಟು ಜನರನ್ನು ವಿಚಾರಣೆ ಮಾಡಲಾಗಿದೆ? ವಿಚಾರಣೆಯಲ್ಲಿ ಹೊರಬಿದ್ದ ಅಂಶಗಳೇನು ಎನ್ನುವುದನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇಂದು (ಮೇ 14) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಹಗರಣಕೋರರು ಸರಕಾರದಲ್ಲಿಯೇ ಇದ್ದಾರೆ. ಅವರನ್ನು ಬಚಾವ್ ಮಾಡುವ ನಿಟ್ಟಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಯಾರನ್ನೋ ಬಚಾವು ಮಾಡಲು ಅವರು ತಮ್ಮನ್ನು ತಾವು ಬಲಿಕೊಟ್ಟು ಕೊಳ್ಳುತ್ತಿದ್ದಾರೆ ಎಂದರು.
ಇಡೀ ಪ್ರಕರಣದಲ್ಲಿ ವಾಸ್ತವವಾಗಿ ತನಿಖೆ ನಡೆಯುತ್ತಿಲ್ಲ. ಬಂಧನಕ್ಕೆ ಒಳಗಾಗಿರುವವರ ಮನೆಗಳನ್ನು ಮಹಜರು ಮಾಡುವುದು, ಶಾಲೆಗಳನ್ನು ಮಹಜರ್ ಮಾಡುವ ಮುಖಾಂತರ ಸರಕಾರ ಜನತೆಗೆ ಏನನ್ನು ಹೇಳಲು ಹೊರಟಿದೆ ಎಂದು ಪ್ರಶ್ನಿಸಿದರು.
ಪಿಎಸ್ಐ ಪರೀಕ್ಷೆಯ ಅಕ್ರಮದ ಹಗರಣದಲ್ಲಿ ಬಂಧಿಸಲಾಗಿರುವ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿರುವ ಕಲಬುರಗಿಯ ರುದ್ರಗೌಡ, ದಿವ್ಯಾ ಹಾಗರಗಿ ಹಾಗೂ ಇತರರು ಪ್ರಮುಖರಲ್ಲ. ಬದಲಾಗಿ ಸರಕಾರದ ಉನ್ನತ ಅಧಿಕಾರಿಗಳು ಮತ್ತು ಮಂತ್ರಿಗಳೇ ಪ್ರಮುಖ ಆರೋಪಿಗಳು. ಇದನ್ನು ಕೂಡಲೇ ಸರ್ಕಾರ ತನಿಖೆಯ ಮುಖಾಂತರ ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಜೈಲಿನಲ್ಲಿ ಊಟ ಸರಿಯಾಗಿಲ್ಲ, ಮದ್ಯ ಕೇಳುತ್ತಿದ್ದಾರೆ, ಫ್ಯಾನ್ ಕೇಳುತ್ತಿದ್ದಾರೆ, ಕೈದಿಗಳು ಅಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವ ಸಣ್ಣ ಪುಟ್ಟ ಮಾಹಿತಿಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಛೇಡಿಸಿದರು.
ಮೊದಲು ಬೆಂಗಳೂರಿನಲ್ಲಿ ಜಟ್ಕಾ ಕಟ್ ಮಾಡಿ ಅಧಿಕಾರಿಗಳು ಮತ್ತು ಮಂತ್ರಿಗಳ ಪಾತ್ರ ಬಹಿರಂಗಪಡಿಸಿ ಅದನ್ನು ಬಿಟ್ಟು ಬರೀ ಹಲಾಲ್ ಮಾಡಿ ಸಂತೋಷ ಪಡುವ ಸಣ್ಣತನಕ್ಕೆ ಇಳಿಯಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇತರರು ಇದ್ದರು.