ಪಿಎಸ್‌ಐ ನೇಮಕಾತಿ ಅಕ್ರಮ: ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ

ಹಾಸನ: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪುರಸಭೆ ಹಾಲಿ ಸದಸ್ಯ ಸಿ.ಎನ್.ಶಶಿಧರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.  ಬಂಧಿತ ಶಶಿಧರನನ್ನು ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.

ಬೆಕ್ಕ ಗ್ರಾಮದ ವೆಂಕಟೇಶ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಲು ವ್ಯವಹಾರ ಕುದುರಿಸಿದ್ದರು ಎಂಬ ಆರೋಪದ ಮೇಲೆ ಶಶಿಧರ್‌ ರನ್ನು ಬಂಧಿಸಲಾಗಿದೆ. ಈ ಹಿಂದೆ ಜೆಡಿಎಸ್‌ ಪಕ್ಷದಲ್ಲಿದ್ದ ಶಶಿಧರ್ ನಂತರದ ದಿನಗಳಲ್ಲಿ ಬಿಜೆಪಿ ನಾಯಕರ ಜೊತೆಗೆ ಸಖ್ಯ ಬೆಳೆಸಿಕೊಂಡರು.

ಇದನ್ನು ಓದಿ: ಪಿಎಸ್‌ಐ ನೇಮಕಾತಿ ಹಗರಣ: ಡಿವೈಎಸ್‌ಪಿ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು

ಶಶಿಧರ್ ಸಂಬಂಧಿಯೂ ಆಗಿರುವ ಬೆಕ್ಕ ಗ್ರಾಮ ಪಂಚಾಯಿತಿ‌ ಅಧ್ಯಕ್ಷ ಕೇಶವಮೂರ್ತಿ ಅವರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು. ನಂತರ ಪಿಎಸ್ಐ ಆಗಿ ಆಯ್ಕೆ ಆಗಿದ್ದ ವೆಂಕಟೇಶ್ ಮತ್ತು ಆತನ ತಂದೆ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು.

ಪ್ರಭಾವಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಂಬಂಧ ಹೊಂದಿ ವ್ಯವಹಾರ ಕುದುರಿಸಿರುವ ಆರೋಪದ ಮೇಲೆ ಶಶಿಧರ್‌ ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ವಿಚಾರಣೆ ನಂತರ ಮತ್ತಷ್ಟು ವಿಚಾರ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ರುದ್ರಗೌಡ ಕಿಂಗ್‌ಪಿನ್:

ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ರುದ್ರಗೌಡ ಪಾಟೀಲ್ ಈ ಹಿಂದೆ ನಡೆದಿದ್ದ ಪಿಡಬ್ಲ್ಯುಡಿ ನೇಮಕಾತಿ ಅಕ್ರಮದಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಕಳೆದ ಡಿಸೆಂಬರ್ 14ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಡಬ್ಲ್ಯುಡಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ರುದ್ರಗೌಡ 7ನೇ ಆರೋಪಿಯಾಗಿದ್ದ. ಬೆಂಗಳೂರಿನ ಸೇಂಟ್‌ ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು.

ಇದನ್ನು ಓದಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವ ಅಶ್ವಥ್‌ ನಾರಾಯಣ್ ಸಹೋದರ ಭಾಗಿ: ಉಗ್ರಪ್ಪ ಆರೋಪ

ಅಭ್ಯರ್ಥಿಯೊಬ್ಬ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿರುವ ರುದ್ರಗೌಡನಿಗೆ ಇದೀಗ ಕೇಸ್ ರೀ ಓಪನ್ ಆದ ಹಿನ್ನೆಲೆಯಲ್ಲಿ ಹೊಸ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ರುದ್ರಗೌಡನನ್ನು ವಶಕ್ಕೆ ಪಡೆದುಕೊಳ್ಳಲು ಕಲಬುರಗಿಗೆ ಬಂದಿದ್ದಾರೆ. ಸದ್ಯ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಜೈಲು ಸೇರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *