ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯು 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆಸಲಾಗುತ್ತಿದೆ.
ದಿನೇ ದಿನೇ ಪಿಎಸ್‌ಐ ಪರೀಕ್ಷೆಅಕ್ರಮದಲ್ಲಿ ಪಾಲ್ಗೊಂಡವರ ಸಂಖ್ಯೆ ಸಿಐಡಿ ತನಿಖೆಯಿಂದ ಹೊರಬೀಳುತ್ತಿದೆ. ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಂಡಿದೆ ಎಂಬುದನ್ನು ಖಂಡಿಸಿ ಹಲವು ಅಭ್ಯರ್ಥಿಗಳು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನು ಓದಿ: ಪಿಎಸ್‌ಐ ಪರೀಕ್ಷೆ ಅಕ್ರಮ: ಬ್ಲೂಟೂತ್ ಬಳಸಲು ತರಬೇತಿ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಪ್ರತಿಭಟನಾಕಾರರು, ನ್ಯಾಯಯುತವಾಗಿ ಪರೀಕ್ಷೆ ಬರೆದು ಪಾಸ್ ಮಾಡಿದ್ದೇವೆ. ಅಕ್ರಮವಾಗಿ ಪರೀಕ್ಷೆ ಬರೆದವರ ಕುರಿತು ತನಿಖೆ ನಡೆಸಿ ಕ್ರಮವಹಿಸುವುದನ್ನು ಬಿಟ್ಟು, ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಾವು 5 ವರ್ಷಗಳಿಂದ ಕಷ್ಟಪಟ್ಟು ಓದಿದ್ದೇವೆ. ನಮಗೆಲ್ಲ ದೈಹಿಕ ಪರೀಕ್ಷೆಯಾದ ಮೇಲು ಮತ್ತೊಮ್ಮೆ ಮರು ಪರೀಕ್ಷೆ ಎಂದರೆ ಹೇಗೆ? ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಂದು ಕಡೆ ಉತ್ತಮ ಹುದ್ದೆಗೆ ಏರಿದ ಖುಷಿಯಲ್ಲಿ, ಇನ್ನೊಂದು ಕಡೆ ನನಗೂ ದುಡಿಮೆ ಸಿಗುತ್ತಿದೆ, ನನ್ನ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಮುನ್ನೋಡುತ್ತಿದ್ದ ಆಯ್ಕೆಯಾದ ಹಲವು ಅಭ್ಯರ್ಥಿಗಳ ಕನಸು ನುಚ್ಚುನೂರು ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ಆಯ್ಕೆಯಾದ ಅಭ್ಯರ್ಥಿಗಳು ನೋವು ತೋಡಿಕೊಂಡಿದ್ದಾರೆ.
ಇದನ್ನು ಓದಿ: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಶಾಲೆ ಮುಖ್ಯ ಶಿಕ್ಷಕ ಕಾಶೀನಾಥ್ ಪ್ರಮುಖ ಪಾತ್ರ
ನಿವೃತ್ತ ಯೋಧ ಓಂಕಾರಪ್ಪ ಮಾತನಾಡಿ, ನಾನು ಸೈನಿಕನಾಗಿ ಕೆಲಸ ಮಾಡಿದ್ದೇನೆ. 3 ವರ್ಷಗಳಿಂದ ಸತತವಾಗಿ ಓದಿದ್ದೇನೆ. ಕೆಪಿಎಸ್ಸಿ ಪರೀಕ್ಷೆ ಬರೆದು ವರ್ಷವಾಯಿತು. ಇನ್ನು ಪಲಿತಾಂಶವಿಲ್ಲ. ಜನಸೇವೆ ಮಾಡುವುದೇ ನನ್ನ ಗುರಿ. ಈಗ ಮತ್ತೊಮ್ಮೆ ಮರು ಪರೀಕ್ಷೆ ಎಂದರೆ ಹೇಗೆ? ನಾವೆಲ್ಲಿಗೆ ಹೋಗಬೇಕು . 41 ವಯಸ್ಸಿನ ಸೈನಿಕ 25ರ ಯುವಕರ ಜೊತೆ ಸೇರಿ ಪ್ರತಿಭಟನೆ ನಡೆಸುತ್ತೇನೆ. ನಮ್ಮ ಕೂಗು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ವರೆಗೂ ತಲುಪಲಿ ಹೈಕೋರ್ಟ್ ಮೆಟ್ಟಿಲು ಹತ್ತಿ ಪ್ರತಿಭಟಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡೆಸಿದ್ದಾರೆ.
‘ಕಾನೂನು ಪ್ರಕಾರ ನೂರು ಜನಕ್ಕೆ ಶಿಕ್ಷೆ ಆಗದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾದರು’ ಎನ್ನುತ್ತದೆ. ಆದರೆ, ಇಲ್ಲಿ ಬುಹುತೇಕ ನಿರಪರಾಧಿಗಳಿಗೆ ಶಿಕ್ಷೆ ಆಗುತ್ತಿದೆ. ಸರ್ಕಾರದ ಇಂತಹ ನೀತಿ ಸರಿ ಅಲ್ಲ. ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೂ ಅನ್ಯಾಯವಾಗುತ್ತದೆ. ಪರಿಶ್ರಮ ಹಾಗೂ ಕನಸು ಎರಡು ವ್ಯರ್ಥವಾಗುತ್ತಿದೆ ಸರ್ಕಾರದ ನಿರ್ಧಾರ ವಾಪಸ್ಸು ಪಡೆಯಲು ಅಭ್ಯರ್ಥಿಗಳು ಒತ್ತಾಯಿಸಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಪರೀಕ್ಷೆ ಅಕ್ರಮವಾಗಿ ನಡೆದಿರುವುದರಿಂದ ಮರು ಪರೀಕ್ಷೆ ಅನಿವಾರ್ಯ. ಲಿಖಿತ ಪರೀಕ್ಷೆ ಮಾತ್ರ, ದೈಹಿಕ ಪರೀಕ್ಷೆ ಇರುವುದಿಲ್ಲ. ಅಕ್ರಮದಲ್ಲಿ ಒಳಗಾದವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದರು. ಹಾಗೆಯೇ, ಕಷ್ಟಪಟ್ಟವರಿಗೆ ನ್ಯಾಯಒದಗಿಸಬೇಕೆಂದೆ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.