ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಅವರ ತಮ್ಮ ಸತೀಶ್ ಅವರ ಪಾತ್ರವಿದೆ. ಅವರು ಅಭ್ಯರ್ಥಿ ದರ್ಶನ್ ಗೌಡರಿಂದ 80 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಆರೋಪ ಮಾಡಿದ್ದಾರೆ.
ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಾಗುತ್ತಿದ್ದು, ದಿನಕ್ಕೊಂದು ಹೊಸ ವಿಷಯಗಳು ಬೆಳಕಿಗೆ ಬರುತ್ತಿದೆ. ಇದರಲ್ಲಿ ಆಡಳಿತ ಪಕ್ಷ ಬಿಜೆಪಿ ಪ್ರಮುಖರೇ ಭಾಗಿಯಾಗುತ್ತಿದೆ ಎಂಬ ಗಂಭೀರ ಆರೋಪಗಳು ಬಲಯಾಗುತ್ತಿವೆ. ಅಕ್ರಮದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ ಅಶ್ವಥ್ ನಾರಾಯಣ ಅವರೇ ಪ್ರಭಾವ ಬೀರಿದ್ದಾರೆ, ಅವರ ತಮ್ಮ ಸತೀಶ್ ಗೌಡ ಅಭ್ಯರ್ಥಿ ದರ್ಶನ್ ಗೌಡರಿಂದ ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ವಿ ಎಸ್ ಉಗ್ರಪ್ಪ ಮಾಡಿದ್ದಾರೆ.
ಈ ವಿಚಾರದಲ್ಲಿ ಸಚಿವ ಅಶ್ವಥ್ ನಾರಾಯಣ ಮೌನವಾಗಿದ್ದಾರೆ. ಅವರ ಜಿಲ್ಲೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಮಾಗಡಿ ತಾಲ್ಲೂಕಿನ ಐವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಅಕ್ರಮವಾಗಿರುವುದು ಸಾಬೀತಾಗುವಂತಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಶ್ವಥ್ ನಾರಾಯಣ ಅವರ ರಾಜೀನಾಮೆ ಪಡೆಯಬೇಕು ಎಂದು ವಿ ಎಸ್ ಉಗ್ರಪ್ಪ ಒತ್ತಾಯಿಸಿದ್ದಾರೆ.
ಅಶ್ವಥ್ ನಾರಾಯಣ ಗಂಡಸ್ಥನದ ಬಗ್ಗೆ ಮಾತನಾಡಿದ್ದೀರಿ. ನಿಮಗೆ ತಾಕತ್, ಧಮ್ ಇದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಿರಿ. ಸಚಿವ ಅಶ್ವಥ್ ನಾರಾಯಣಗೌಡ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಉಗ್ರಪ್ಪ ಆಗ್ರಹಿಸಿದರು.