ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಅಕ್ರಮದಲ್ಲಿ ಪಾಸಾದ 8 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಹಲವರು ಸರ್ಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಾಗಿದ್ದಾರೆ.
ಬಂಧಿತರೆಲ್ಲರೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಮತ್ತು ಅಫಜಲಪೂರ ತಾಲೂಕಿನ ನಿವಾಸಿಗಳಾಗಿದ್ದಾರೆ. ಅಫಜಲಪೂರ ತಾಲೂಕಿನ ಮಲ್ಲಾಬಾದ್ ಗ್ರಾಮದ ರವಿರಾಜ್ ಅಖಂಡೆ, ಶಿದ್ನಾಳ್ ಗ್ರಾಮದ ಬೀರಪ್ಪ, ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ಶ್ರೀಶೈಲ್, ಜೇರಟಗಿ ಗ್ರಾಮದ ಭಗವಂತರಾಯ ಯಾತನೂರ್, ಜೇವರ್ಗಿ ತಾಲೂಕಿನ ಬದನಿಹಾಳ ಗ್ರಾಮದ ಸೋಮನಾಥ್, ಅಫ್ಜಲ್ ಪುರ ತಾಲೂಕಿನ ಕರ್ಜಗಿ ರೋಡ್ ರಾಮನಗರದ ಕಲ್ಲಪ್ಪ ಅಲ್ಲಾಪುರ್, ಜೇವರ್ಗಿ ತಾಲೂಕಿನ ಗುಡೂರ್ ಎಸ್ ಗ್ರಾಮದ ವಿಜಯಕುಮಾರ್ ಎನ್ನುವವರೇ ಬಂಧಿತ ಆರೋಪಿಗಳು.
ಅದಾಗಿಯೂ ಪಿಎಸ್‍ಐ ಆಗಬೇಕೆಂದು ಅಕ್ರಮ ದಾರಿ ಹಿಡಿದಿರುವ ಇವರು ಇದೀಗ ಜೈಲು ಪಾಲಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಸಿದ್ದು ಪಾಟೀಲ್, ಈಗಾಗಲೇ ಎಫ್‍ಡಿಎ ಆಗಿ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇನ್ನೂ ಬಂಧಿತ ಕಲ್ಲಪ್ಪ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಪೀರಪ್ಪ ಎನ್ನುವ ಇನ್ನೊಬ್ಬ ಬಂಧಿತ ಆರೋಪಿ ಹಾಸ್ಟೆಲ್‍ನಲ್ಲಿ ಕುಕ್ ಆಗಿ ಕೆಲಸ ಮಾಡುವವನು.
ಇವರೆಲ್ಲಾ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್‌ಐ ಪರೀಕ್ಷೆ ಬರೆದವರು. ಈ ಎಂಟೂ ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಎಂಟು ಅಭ್ಯರ್ಥಿಗಳ ಹೆಸರು ಇತ್ತು.
ಬಂಧಿತ 8 ಆರೋಪಿಗಳು ಕಲಬುರಗಿಯ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ. ಇದೀಗ ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್‍ಬಿಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವುದು ಈ ಮೂಲಕ ಬಯಲಾಗಿದೆ.
ಪಿಎಸ್‍ಐ ಅಕ್ರಮದ ರೂವಾರಿ ಆರ್ ಡಿ ಪಾಟೀಲ್ ಈ ಎಲ್ಲಾ ಎಂಟು ಜನ ಅಭ್ಯರ್ಥಿಗಳ ಜೊತೆ ವ್ಯವಹಾರ ನಡೆಸಿರುವುದು ಎಂದು ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್, ಈ ಎಲ್ಲಾ ಅಭ್ಯರ್ಥಿಗಳ ಜೊತೆ ಹಣಕಾಸಿನ ವ್ಯವಹಾರ ನಡೆಸಿ ಬ್ಲ್ಯೂಟೂತ್ ಡಿವೈಸ್ ನೀಡಿದ್ದ ಎನ್ನಲಾಗಿದೆ.
ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ, ಎಂಎಸ್ ಇರಾನಿ ಪರೀಕ್ಷಾ ಕೇಂದ್ರಕ್ಕೆ ಸೀಮಿತವಾಗಿದ್ದ ಪಿಎಸ್‍ಐ ನೇಮಕಾತಿ ಅಕ್ರಮ, ಇದೀಗ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜುಗೂ ವ್ಯಾಪಿಸಿದ್ದು, ಇದು ಇನ್ನಷ್ಟು ಪರೀಕ್ಷಾ ಕೇಂದ್ರಗಳಿಗೆ ವಿಸ್ತರಿಸುವ ಸಾಧ್ಯತೆಗಳಿವೆ.
ಬಂಧಿತರ ಸಂಖ್ಯೆ 52 ಕ್ಕೆ ಏರಿಕೆ
ಪಿಎಸ್‍ಐ ನೇಮಕಾತಿಯ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡವು ಈಗಾಗಲೇ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈಗ ಒಮ್ಮೆಲೆ 8 ಜನ ಅಭ್ಯರ್ಥಿಗಳ ಬಂಧನದ ಮೂಲಕ ಪ್ರಕರಣವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 52ಕ್ಕೆ ಏರಿಕೆಯಾದಂತಾಗಿದೆ.