ಬಡ ಜನರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದ್ದು ತೀವ್ರ ಖಂಡನೆ
ಬೆಂಗಳೂರು: ಯಲಹಂಕ ಪಕ್ಕದ ಕೋಗಿಲು ಲೇಔಟ್ ಭಾಗದಲ್ಲಿರುವ ಫಕೀರ್-ವಾಸೀಮ್ ಲೇಔಟ್ ಪ್ರದೇಶದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಡ ಜನರು ವಾಸಿಸುತ್ತಿದ್ದ 200 ಸ್ಲಂ ಮನೆಗಳನ್ನು ಕರ್ನಾಟಕ ಸರಾಕರದ ಅಧೀನದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ನೆಲಸಮಗೊಳಿಸರುವುದನ್ನು ರಾಜ್ಯಸಭಾ ಸದಸ್ಯರಾದ ಎ.ಎ ರಹೀಮ್ ತೀವ್ರ ಖಂಡಿಸಿದ್ದಾರೆ.
ಶನಿವಾರ ಮನೆ ನೆಲಸಮಗೊಳಿಸಿದ ಪ್ರದೇಶಕ್ಕೆ ಡಿವೈಎಫ್ಐ ನಿಯೋಗದೊಂದಿಗೆ ತೆರಳಿ, ಮನೆಗಳನ್ನು ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಕರ್ನಾಟಕ ಕಾಂಗ್ರೇಸ್ ಸರಕಾರ ರಾಜ್ಯದ ಜನತೆಗೆ ಉತ್ತರಾದಾಯಿಯಾಗಿರಬೇಕಾಗಿತ್ತು. ಆದರೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರವು, ಉತ್ತರ ಪ್ರದೇಶದ ಬಿಜೆಪಿ ಸರಕಾರದ ಮಾದರಿಯಲ್ಲಿ ಬಡಜನರು ವಾಸಿಸುವ ಸ್ಲಂ ಮನೆಗಳನ್ನು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ ಬುಲ್ಡೋಜರ್ ನಿಂದ ನೆಲಸಮ ಮಾಡಿರುವುದು ಬಡ ಜನರ ಮೇಲೆ ಎಸಗಿರುವ ಕ್ರೂರ ಧಾಳಿಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದವರು ಈ ಫಕ್ಕೀರ್ ಲೇಔಟ್ ಪ್ರದೇಶದಲ್ಲಿ ಕಳೆದ 30-35 ವರ್ಷಗಳಿಂದ ವಾಸವಾಗಿರುವ ದಲಿತ ಹಾಗೂ ಅಲ್ಪಸಂಖ್ಯಾತ ಬಡಜನರ ಮನೆಗಳನ್ನು ಧ್ವಂಸಗೊಳಿಸಿರುವುದು ಸಂವಿಧಾನದತ್ತ ಬದುಕಿನ ಹಕ್ಕಿನ ಉಲ್ಲಂಘನೆಯಾಗಿದೆ ಎಂದರು.
ಇದನ್ನೂ ಓದಿ : ನವದೆಹಲಿ |ಮಾಜಿ ಶಾಸಕ ಅತ್ಯಾಚಾರಿ ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತು : ದೆಹಲಿ ಕೋರ್ಟ್ ಮುಂದೆ ಪ್ರತಿಭಟನೆ
ಅತ್ಯಂತ ಕಡುಬಡವರ ಮನೆಗಳನ್ನು ತನ್ನದೇ ಸರಕಾರ ಉತ್ತರ ಪ್ರದೇಶದ ಬಿಜೆಪಿ ಸರಕಾರದ ದುರ್ನೀತಿಯಂತೆ ಬುಲ್ಡೋಜರ್ ರಾಜ್ ನಿರ್ಮಿಸಿ ಗುಡಿಸಲುಗಳನ್ನು ನೆಲಸಮಗೊಳಿಸಿ ಎಂಟು ದಿನಗಳು ಕಳೆದರೂ ತುಟಿ ಬಿಚ್ಚದ ಕಾಂಗ್ರೇಸ್ ಹೈಕಮಾಂಡ್ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಸಿ ವೇಣುಗೋಪಾಲ್ ನಡೆ ಬೂಟಾಟಿಕೆಯಿಂದ ಕೂಡಿದೆ ಎಂದರು.
ಮನೆಗಳನ್ನು ಕಳೆದುಕೊಂಡ ಬಡವರು ಘನತೆಯಿಂದ ಬದುಕುವಂತಾಗಲು ಬುಲ್ಡೋಜರ್ ನ್ಯಾಯದ ಪರಿಕಲ್ಪನೆಯಲ್ಲಿ ಧ್ವಂಸಗೊಳಿಸಿರುವ 200 ಮನೆಗಳನ್ನು ರಾಜ್ಯ ಸರ್ಕಾರ ತಕ್ಷಣ ಮರುನಿರ್ಮಿಸಿ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಎ.ಎ ರಹೀಮ್ ಅವರು ಆಗ್ರಹಿಸಿದರು. ರಾಜ್ಯ ಸರಕಾರ ಕಾಲವಿಳಂಬ ಮಾಡದೇ ಕೂಡಲೇ ಸಂತ್ರಸ್ತರಿಗೆ ಘನತೆಯಿಂದ ಬದುಕಲು ಸೂಕ್ತ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರತೆರನಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಕೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ರಾಜ್ಯ ಮುಖಂಡರಾದ ನಿರೇಶಬಾಬು, ಕರ್ನಾಟಕ ಐಟಿ ಯೂನಿಯನ್ ರಾಜ್ಯ ಮುಖಂಡರಾದ ಸೂರಜ್ ನಿಧಿಯಂಗ, ಸುಹಾಸ್ ಅಡಿಗ, ಸಿಪಿಐಎಂ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಮಿತಿ ಸದಸ್ಯರಾದ ಹುಳ್ಳಿ ಉಮೇಶ, ದುಡಿಯುವ ಜನರ ವೇದಿಕೆಯ ನಂದಿನಿ ಮೇಡಂ, ಸಿಪಿಐಎಂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಸದಸ್ಯರಾದ ಮಂಗಳಕುಮಾರಿ, ಸಿಪಿಐಎಂ ಯಲಹಂಕ ಶಾಖಾ ಕಾರ್ಯದರ್ಶಿಯವರಾದ ಪುಷ್ಪಲತಾ, ಡಿವೈಎಫ್ಐ ಮುಖಂಡರಾದ ಶಿವರಾಜ್, ತನಿಕಾ ಸೇಲಂ, ದುಡಿಯುವ ಜನರ ವೇದಿಕೆಯ ಮುಖಂಡರಾದ ಪೂಜಾ, ಮಾನಸ, ಪ್ರಣೋಯ್, ಫಾತಿಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಏನಿದು ಪರ್ಯಾಯ ರಾಜಕಾರಣ? ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಸಿಪಿಐ(ಎಂ) Janashakthi Media
