ಕನ್ನಡ ವಿಶ್ವ ವಿದ್ಯಾಲಯಕ್ಕೆ ಅಗತ್ಯ ನೆರವು ಒದಗಿಸಲು ಒತ್ತಾಯ

ಬೆಂಗಳೂರು: ರಾಜ್ಯದ ಹೆಮ್ಮೆಯ ವಿಶ್ವ ವಿದ್ಯಾಲಯವಾದ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಆರ್ಥಿಕ ದುಸ್ಥಿತಿಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದು ದೇಶದಲ್ಲೆ ಒಂದು ಅಪರೂಪದ ಸಂಶೋಧನಾ ವಿಶ್ವ ವಿದ್ಯಾಲಯವಾಗಿದ್ದು, ಆರ್ಥಿಕ ದುಸ್ಥಿತಿಯು ಅದರ ಅಭಿವೃದ್ಧಿಗೆ ಮತ್ತು ಅದರ ಸಾಧನೆಗೆ ತೊಡಕಾಗಬಾರದಾಗಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.

ಆರ್ಥಿಕ ಸಂಕಷ್ಠದಿಂದಾಗಿ, ಬೋಧಕ ನೌಕರರು ಮತ್ತು ಬೋಧಕೇತರ ನೌಕರರಿಗೆ ಮತ್ತು ಭದ್ರತೆ ಮತ್ತು ಶುಚಿತ್ವದ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ಒಂದು ವರ್ಷದ ವೇತನ ಪಾವತಿ ಮಾಡದಿರುವುದು ಕಂಡು ಬಂದಿದೆ. ಅದೇ ರೀತಿ, ಕಮಲಾಪುರ ಪುರ ಸಭೆಗೆ ನೀಡ ಬೇಕಾದ ತೆರಿಗೆ ಪಾವತಿಸಲಾಗದೆ ವಿಶ್ವ ವಿದ್ಯಾಲಯದ ಕುಡಿಯುವ ನೀರಿನ ಸಂಕಷ್ಟ ಎದುರಿಸುತ್ತಿರುವುದು ಮತ್ತು ವಿದ್ಯುತ್ ಬಿಲ್ ಪಾವತಿಸಲಾಗದೆ ಕತ್ತಲೆಯಲ್ಲಿರುವ ದುಸ್ಥಿತಿ ಕಂಡು ಬಂದಿದೆ ಎಂದರು.

ಇತ್ತೀಚೆಗೆ, ಆರ್ಥಿಕ ಸಂಕಷ್ಟದ ಕಾರಣದಿಂದಾಗಿಯೆ ಕಳೆದ 20 ವರ್ಷಗಳಿಂದ ದಿನಗೂಲಿಯಲ್ಲಿ ತೊಡಗಿದ ಹೊರಗುತ್ತಿಗೆಯ 47 ಜನ ಕೆಲಸಗಾರರನ್ನು ಉದ್ಯೋಗದಿಂದ ಹೊರ ದೂಡುವ ಕೆಲಸಕ್ಕೆ ಆಡಳಿತ ಮಂಡಳಿ ಮುಂದಾಗಿದೆ ಎಂದರು.

ಇದನ್ನೂ ಓದಿ: ರೈತರಿಗೆ ವಕ್ಫ್ ನೋಟಿಸ್ ವಿವಾದ : ನೋಟಿಸ್ ಹಿಂಪಡೆಯುವಂತೆ ಖಡಕ್ ಸೂಚನೆ ನೀಡಿದ ಸಿಎಂ

ಹೆಮ್ಮೆಯ ಕನ್ನಡ ವಿಶ್ವ ವಿದ್ಯಾಲಯಕ್ಕೆ ಇಂತಹ ದುಸ್ಥಿತಿ ಒದಗಿ ಬಂದಿರುವುದು ದುರದೃಷ್ಠಕರವಾಗಿದೆ. ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ 100 ಕೋಟಿ ರೂ ಬಂಡವಾಳ ಹೂಡಲು ಆಸಕ್ತಿ ತೋರುವ ರಾಜ್ಯ ಸರಕಾರ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವನ್ನು ಇಂತಹ ದುಸ್ಥಿತಿಗೆ ತಳ್ಳಿ, ನಿರ್ವಹಣೆಗೆ ಅಗತ್ಯ ಮತ್ರು ಮತ್ತಷ್ಟು ಅಭಿವೃದ್ಧಿ ಸಾಧನೆಗೆ ಅವಶ್ಯ ಅನುದಾನ ಒದಗಿಸದಿರುವುದು ಖೇದಕರವಾಗಿದೆ.

ಈ ಕೂಡಲೆ ಕನ್ನಡ ವಿಶ್ವ ವಿದ್ಯಾಲಯದ ರಕ್ಷಣೆಗೆ ಮತ್ತು ಮುನ್ನಡೆಗೆ ಅಗತ್ಯ ಅನುದಾನ ಒದಗಿಸುವಂತೆ ಮತ್ತು ತಕ್ಷಣಕ್ಕೆ ಕನಿಷ್ಟ 10 ಕೋಟಿ ರೂ ಬಿಡುಗಡೆ ಮಾಡುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಬಲವಾಗಿ ಒತ್ತಾಯಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ಮೋದಿಯವರ ನೀತಿ : ಹಣಕಾಸು ಕಾಯ್ದೆಗಳ ದುರ್ಬಳಕೆ, ಸ್ವತಂತ್ರ ಮಾಧ್ಯಮಗಳ ಮೇಲೆ ದಬ್ಬಾಳಿಕೆ- WAN -IFRA, IAPA ವರದಿ

Donate Janashakthi Media

Leave a Reply

Your email address will not be published. Required fields are marked *