ಟೆಹ್ರಾನ್: ಪೊಲೀಸರ ವಶದಲ್ಲಿದ್ದ ಮಹ್ಸಾ ಅಮೀನಿಯ ಸಾವಿನ ನಂತರ ಭುಗಿಲೆದ್ದಿರುವ ಹಿಜಾಬ್ ವಿರೋಧಿ ಪ್ರತಿಭಟನೆಗಳು, ಹಿಂಸಾಚಾರಕ್ಕೆ ತಿರುಗಿದೆ. ಇರಾನ್ ದೇಶದ ಭದ್ರತಾ ಪಡೆಗಳು ನಡೆಸಿದ ಹಿಂಸಾತ್ಮಕ ದಾಳಿಯಿಂದಾಗಿ ಕನಿಷ್ಠ 50 ಮಂದಿ ಸಾವೀಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಆದರೆ, ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಸರ್ಕಾರ ಒಂದು ಲೆಕ್ಕ ನೀಡಿದರೆ, ಸರ್ಕಾರಿ ಸುದ್ದಿವಾಹಿನಿ ಮತ್ತೊಂದು ಸಂಖ್ಯೆ ಹೇಳುತ್ತಿದೆ. ಮಾನವ ಹಕ್ಕು ಹೋರಾಟ ಸಂಸ್ಥೆಗಳು ಇನ್ನೊಂದು ಸಂಖ್ಯೆ ನೀಡುತ್ತಿವೆ. ಸರ್ಕಾರಿ ವಾಹಿನಿಗಳು 26 ಮಂದಿ ಮೃತಪಟ್ಟಿದ್ದಾರೆ ಎಂದಿದೆ. ಸರ್ಕಾರಿ ಅಧಿಕಾರಿಗಳು 17 ಎಂದು ಮತ್ತು ಎನ್‌ಜಿಓ ಸಂಸ್ಥೆಯೊಂದು 50 ಜನರು ಸಾವಿಗೀಡಾಗಿದ್ದಾರೆ ಎಂದಿದೆ.
ಉತ್ತರ ಗಿಲಾನ್ ಪ್ರಾಂತ್ಯದಲ್ಲಿರುವ ರೆಜ್ವಾನ್ ಶಹರ್ ಪಟ್ಟಣದಲ್ಲಿ ಭದ್ರತಾ ಪಡೆಗಳು ಗುರುವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಿಂದಾಗಿ ಆರು ಜನರು ಸಾವನ್ನಪ್ಪಿದ್ದರು. ನಂತರ ಆಕ್ರೋಶ ಮತ್ತಷ್ಟು ಹೆಚ್ಚಳವಾಗಿದೆ ಎಂದು ಓಸ್ಲೋ ಮೂಲದ ಇರಾನ್ ಮಾನವ ಹಕ್ಕುಗಳ(ಐಎಚ್‌ಆರ್) ಎನ್‌ಜಿಓ ಸಂಘಟನೆ ಹೇಳಿದೆ.
ಉತ್ತರ ಇರಾನಿನ ಬಾಬೋಲ್ ಮತ್ತು ಅಮೋಲ್ ಪ್ರದೇಶಗಳಲ್ಲಿಯೂ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಒಂದು ವಾರದ ಹಿಂದೆ ಪ್ರತಿಭಟನೆಗಳು ಆರಂಭವಾದಾಗಿನಿಂದಲೂ ಸುಮಾರು 80 ನಗರಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಆಕ್ರೋಶದ ಕಾವು ಹೆಚ್ಚಾಗತೊಡಗಿದೆ.
ಬ್ರಸೆಲ್ಸ್ ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮುಂದೆ ಮಹ್ಸಾ ಅಮಿನಿಯನ್ನು ಬೆಂಬಲಿಸಿ ಮತ ಪ್ರದರ್ಶನ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕೂದಲ್ಲನು ಕತ್ತರಿಸಿಕೊಂಡು, ಹಿಜಾಬ್ ಪದ್ಧತಿಯನ್ನು ಖಂಡಿಸಿದ್ದಾರೆ.
ಇದುವರೆಗೂ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆಂದು ವರದಿಯೊಂದು ಹೇಳುತ್ತಿದೆ. ಅಲ್ಲದೆ, ಜನರು ತಮ್ಮ ಮೂಲಭೂತ ಹಕ್ಕುಗಳು, ಘನತೆಗಾಗಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದರೆ, ಇರಾನ್ ಅಧಿಕಾರಿಗಳು ಹೊರಡಿಸಿರುವ ಹೇಳಿಕೆಯ ಪ್ರಕಾರ, ಐದು ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಐಎಚ್‌ಆರ್ ನಿರ್ದೇಶಕರೊಬ್ಬರು ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಸಂಪ್ರದಾಯದಂತೆ, ಸರಿಯಾಗಿ ಹಿಜಾಬ್ ಧರಿಸಿರಲಿಲ್ಲ ಎಂದು ಆರೋಪಿಸಿ ಮಹ್ಸಾ ಅಮೀನಿ ಅವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲೇ ಅವರು ಮೃತಪಟ್ಟಿದ್ದರು. ಮಹ್ಸಾ ಅವರನ್ನು ಪೊಲೀಸರು ತೀವ್ರ ಹಲ್ಲೆ ಮಾಡಿ ಕೊಂದಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.