ಚಿತ್ರ : ನ್ಯೂ ಯಾರ್ಕ್ ನಲ್ಲಿ ಯುದ್ಧ ವಿರೋಧಿ ಪ್ರದರ್ಶನ
ವಸಂತರಾಜ ಎನ್.ಕೆ
ಇರಾನ್ ಮೇಲೆ ಯು.ಎಸ್-ಇಸ್ರೇಲಿ ಯುದ್ಧದ ವಿರುದ್ಧ ಜಗತ್ತಿನಾದ್ಯಂತ ಭಾರೀ ಪ್ರದರ್ಶನಗಳು ನಡೆದಿವೆ. ಯು.ಎಸ್ ಸಾಮ್ರಾಜ್ಯಶಾಹಿಯ ಬಾಲಬಡುಕ ಜಾಗತಿಕ ಮಾಧ್ಯಮಗಳು ಮತ್ತು ಅವು ಹೇಳಿದ್ದು ಮಾತ್ರ ಸುದ್ದಿ ಮತ್ತು ಮೋದಿಯ ಯು.ಎಸ್-ಇಸ್ರೇಲಿ ಪರ ವಿದೇಶ ನೀತಿಗೆ ಧಕ್ಕೆಯಾಗಬಹುದು ಎಂದು ಭಾವಿಸುವ ಭಾರತದ ‘ಗೋದಿ’ (ಆಳುವವರ ಮಡಿಲ) ಮಾಧ್ಯಮಗಳು ಇವುಗಳ ಕುರಿತು ಚಕಾರವೆತ್ತಿಲ್ಲ. ಆದರೆ ಕೆಲವು ಸಾಮಾಜಿಕ ಮಾಧ್ಯಮಗಳು ಮತ್ತು ಕೆಲವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ. ಇಂತಹ ಪ್ರದರ್ಶನಗಳ ಕುರಿತು ಯುದ್ಧದ ದಿನ 5 ರಂದು ಒಂದು ವರದಿ.
ಮಾರ್ಚ್ 4 : ಇರಾನ್ ಮೇಲೆ ಯು.ಎಸ್-ಇಸ್ರೇಲಿ ವಿಮಾನ ದಾಳಿ ಆರಂಭವಾಗುತ್ತಿದ್ದಂತೆ ಮೊದಲ ದಿನವೇ (ಫೆ.28ರಂದೆ) ಯು.ಎಸ್ ಮತ್ತು ಯುರೋಪುಗಳಲ್ಲಿ ಸ್ವಯಂ-ಸ್ಫೂರ್ತ ಪ್ರದರ್ಶನಗಳು ನಡೆದವು. ಸುದ್ದಿ ಹರಡುತ್ತಿದ್ದಂತೆ ಏಶ್ಯಾ ಮತ್ತು ಜಗತ್ತಿನ ಎಲ್ಲೆಡೆ ಹಲವು ಪ್ರದರ್ಶನಗಳು ನಡೆದವು.
ಯು.ಎಸ್ ನಲ್ಲಿ 60% ಜನ ಯುದ್ಧ ವಿರೋಧಿಸುತ್ತಾರೆ
ರಾಜಧಾನಿ ವಾಶಿಂಗ್ಟನ್ ನಲ್ಲಿ ಶ್ವೇತಭವನದ ಎದುರು ಸೇರಿದಂತೆ ಕೆಲವು ದೊಡ್ಡ ನಗರಗಳಲ್ಲಿ (ನ್ಯೂಯಾರ್ಕ್, ಸಾನ್ ಫ್ರಾನ್ಸಿಸ್ಕೊ, ಚಿಕಾಗೊ, ಬೋಸ್ಟನ್) ಆರಂಭವಾಗಿ, ಯುದ್ಧ ದಿನ 5ಕ್ಕೆ (ಮಾರ್ಚ್ 4) ಪ್ರವೇಶಿಸುತ್ತಿದ್ದಂತೆ ಯು.ಎಸ್ ನ ನೂರಾರು ನಗರಗಳಲ್ಲಿ ಪ್ರದರ್ಶನಗಳು ಪ್ರತಿದಿನ ಎಂಬಂತೆ ನಡೆಯುತ್ತಿವೆ. ಮೊದಲ ದಿನ ಪ್ರಮುಖವಾಗಿ ಸ್ವಯಂ-ಸ್ಫೂರ್ತವಾಗಿದ್ದ ಪ್ರತಿಭಟನೆಗಳನ್ನು ನಂತರದ ದಿನಗಳಲ್ಲಿ ಪ್ರಮುಖ ಯುದ್ಧ-ವಿರೋಧಿ, ಮಿಲಿಟರಿ-ಹಸ್ತಕ್ಷೇಪ-ವಿರೋಧಿ ಸಂಘಟನೆಗಳು ಸಂಯೋಜಿತವಾಗಿ ಸಂಘಟಿತವಾಗಿ ಮುಂದೊಯ್ಯುತ್ತಿವೆ.

ಚಿಕಾಗೊ (ಯು.ಎಸ್) ದಲ್ಲಿ ಯುದ್ಧ-ವಿರೋಧಿ ಪ್ರದರ್ಶನ
ಒಂದು ಸಮೀಕ್ಷೆಯ ಪ್ರಕಾರ 60% ಯು.ಎಸ್ ನಾಗರಿಕರು ಈ ಯುದ್ಧವನ್ನು ವಿರೋಧಿಸಿದ್ದಾರೆ. ಟ್ರಂಪ್ ರ ಆಳುವ ಪಕ್ಷ ರಿಪಬ್ಲಿಕನ್ ಬೆಂಭಲಿಗರಲ್ಲಿ ಸಹ ಹಲವರು ಯುದ್ಧವನ್ನು ವಿರೋಧಿಸಿದ್ದಾರೆ. ಟ್ರಂಪ್ “ಶಾಂತಿಪರ ಅಧ್ಯಕ್ಷ”ನೆಂದು ನಂಬಿ ಬೆಂಬಲಿಸಿದ್ದ “ಮಗ” (ಮೇಕ್ ಅಮೆರಿಕ್ ಗ್ರೇಟ್ ಅಗೈನ್) ಚಳುವಳಿಯ ಸದಸ್ಯರೂ ವಿರೋಧಿಸಿದ್ದಾರೆ ಎನ್ನಲಾಗಿದೆ. ಯು.ಎಸ್ ನಲ್ಲಿ ಹಲವು ಮಗ್ಗಲುಗಳಿಂದ ಯುದ್ಧಕ್ಕೆ ವಿರೋಧ ವ್ಯಕ್ತವಾಗಿದೆ. ಸಾಮ್ರಾಜ್ಯಶಾಹಿ-ವಿರೋಧಿ ಮತ್ತು ‘ವಿದೇಶಗಳಲ್ಲಿ ಯಾವುದೇ ರೀತಿಯ ರಾಜಕೀಯ-ಮಿಲಿಟರಿ ಮಧ್ಯಪ್ರವೇಶ ಕೂಡದು’ ಎನ್ನುವ ರಾಜಕೀಯ ಧೋರಣೆಯವರು ಒಂದು ಬಗೆ. ಈ ಯುದ್ಧವು ಇಸ್ರೇಲ್ ಒತ್ತಡದಿಂದ ಆಗುತ್ತಿದೆ. ಯು.ಎಸ್ ಗೆ ಇದರಿಂದ ನಷ್ಟ ಬಿಟ್ಟರೆ ಯಾವುದೇ ಲಾಭವಿಲ್ಲ ಎನ್ನುವವರು ಕೆಲವರು. ಯು.ಎಸ್ ಸೈನಿಕರ ಸಾವುಗಳು ವರದಿಯಾಗುತ್ತಿದ್ಧಂತೆ, ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಅಲ್ಲೋಲ ಕಲ್ಲೋಲ ಸಾಧ್ಯತೆ ಹೆಚ್ಚುತ್ತಿದ್ದಂತೆ ಯುದ್ಧಕ್ಕೆ ವಿರೋಧ ಹೆಚ್ಚುತ್ತಿದೆ. ಇರಾಕ್ ಮತ್ತು ಅಫ್ಗಾನಿಸ್ತಾನಗಳಂತೆ ಎಂದೂ ಮುಗಿಯದ ಯುದ್ಧವಾಗಬಹುದು ಎಂಬ ಆತಂಕವೂ ಪ್ರದರ್ಶನಗಳಲ್ಲಿ ಕೇಳ ಬಂದಿದೆ.

ಲಾಸ್ ಏಂಜಲೀಸ್ (ಯು.ಎಸ್) ನಲ್ಲಿ ಯುದ್ಧ-ವಿರೋಧಿ ಪ್ರದರ್ಶನ
ಯು.ಎಸ್ ಮೇಲೆ ಯಾವುದೇ ದಾಳಿಯಾಗದೆ ಇರುವಾಗ, ಸಂಸತ್ ಅನುಮತಿ ಪಡೆಯದೆ ಯುದ್ಧ ಸಾರಲು ಅಧ್ಯಕ್ಷರಿಗೆ ಅಧಿಕಾರವಿಲ್ಲವೆಂದು ಮತ್ತು ಅದು ಅಸಂವಿಧಾನಿಕ ಕ್ರಮವೆಂದೂ ಹಲವು ಸಂಸತ್ ಸದಸ್ಯರು ಹೇಳಿದ್ದು ಅದೂ ರಾಜಕೀಯ ಚರ್ಚೆಯ ವಿಷಯವಾಗಿದೆ. ಯು.ಎಸ್ ನಾಗರಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಈ ಯುದ್ಧ ಅನಗತ್ಯ ಹಣ ಪೋಲು ಮತ್ತು ಜನರ ಸಮಸ್ಯೆಗಳಿಂದ ಗಮನ ಬೇರಡೆಗೆ ಸೆಳೆಯುವ ಯತ್ನವೆಂದೂ ಹಲವರ ಯುದ್ಧ-ವಿರೋಧದ ತರ್ಕ.
‘ನಾಟೋ ಇರಾನ್ ಯುದ್ಧದಿಂದ ದೂರವಿರಬೇಕು’
ಯುರೋಪಿನಾದ್ಯಂತ ಸಹ ಇರಾನ್ ಮೇಲೆ ಯು.ಎಸ್-ಇಸ್ರೇಲಿ ಯುದ್ಧದ ವಿರುದ್ಧ ಭಾರೀ ಪ್ರದರ್ಶನಗಳು ನಡೆದಿವೆ. ಇರಾನ್ ಯುದ್ಧ ಯುರೋ ಕೂಟ ಮತ್ತು ಅದರ ದೇಶಗಳ ರಾಜಕೀಯ ನಾಯಕತ್ವವನ್ನು ಪೇಚಿಗೆ ಸಿಕ್ಕಿಸಿದೆ. ಒಂದು ಕಡೆ ಟ್ರಂಪ್ ಕೋಪಕ್ಕೆ ಗುರಿಯಾಗದಿರುವ ಬಯಕೆ. ಇನ್ನೊಂದು ಕಡೆ ಜನತೆಯ ಯುದ್ಧ-ವಿರೋಧಿ ಆಕ್ರೋಶದ ಭೀತಿ. ಇದಲ್ಲದೆ ಯು.ಎಸ್-ಇಸ್ರೇಲ್ ಅಧಿಕೃತವಾಗಿ ಯುರೋ ಕೂಟದ ಯಾವುದೇ ನಾಯಕರ ಜತೆ ಯುದ್ಧ ಆರಂಭಿಸುವ ಮೊದಲು ಸಮಾಲೋಚನೆಯನ್ನು ನಡೆಸದಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಪ್ರತಿ ದೇಶದಲ್ಲಿ ವಿಭಿನ್ನ ರಾಜಕೀಯ ಪರಿಸ್ಥಿತಿಯಿರುವುದರಿಂದ ಯುರೋ ನಾಯಕರಿಗೆ ಒಂದು ಸಮಾನ ನಿಲುವು ತೆಗೆದುಕೊಳ್ಳುವುದು ಸಾಧ್ಯವಿಲ್ಲದ ಸಂದಿಗ್ಧ ಉಂಟಾಗಿದೆ.

ಲಂಡನ್ (ಯು.ಕೆ) ನಲ್ಲಿ ಯುದ್ಧ-ವಿರೋಧಿ ಪ್ರದರ್ಶನ
ಹಾಗಾಗಿ ವಿಭಿನ್ನ ನಾಯಕರು ವಿಭಿನ್ನ ಸ್ವರದಲ್ಲಿ ಮಾತಾಡುತ್ತಿದ್ದಾರೆ. ಯು.ಎಸ್ ದಾಳಿಯನ್ನೂ ಬೆಂಬಲಿಸಲೂ ಆಗದೆ, ಖಂಡಿಸಲೂ ಆಗದೆ, ಇರಾನ್ ಪ್ರತಿದಾಳಿಯನ್ನು ಖಂಡಿಸಿದ್ದಾರೆ! ಇರಾನ್ ಅಣ್ವಸ್ತ್ರ, ಕ್ಷಿಪಣಿ ಸಾಮರ್ಥ್ಯದ ಮೇಲೆ ಕಡಿವಾಣ ಬೇಕು, ಇರಾನಿ ಜನತೆಯ ದಮನ ಮಾಡುವ ಸರಕಾರ ಹೋಗಬೇಕು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯು.ಎಸ್ ನಿಕಟ ಮಿತ್ರ ಯು.ಕೆ ಸರಕಾರ ಸಹ ‘ತನ್ನ ನೆಲೆಗಳನ್ನು ದಾಳಿಗೆ ಬಳಸಬಾರದು, ರಕ್ಷಣಾತ್ಮಕ ಉದ್ಧೇಶಕ್ಕೆ ಬಳಸಬಹುದು’ ಎಂಬ ಎಡಬಿಡಂಗಿ ಹೇಳಿಕೆ ಕೊಡಬೇಕಾಗಿ ಬಂದಿದೆ. ಸ್ಪೈನ್ ಸರಕಾರವೊಂದೇ ತನ್ನ ದೇಶದಲ್ಲಿರುವ ನೆಲೆಗಳನ್ನು ದಾಳಿಗೆ ಬಳಸುವಂತೆ ಸ್ಪಷ್ಟ ಹೇಳಿಕೆ ನೀಡಿ ಇದಕ್ಕೆ ಅಪವಾದವಾಗಿದೆ. ಇದಕ್ಕಾಗಿ ಯು.ಕೆ ಪ್ರಧಾನಿ ಟ್ರಂಪ್ ಟೀಕೆ, ಮತ್ತು ಸ್ಪೈನ್ ಸರಕಾರ ಸುಂಕಾಸ್ತ್ರದ ಬೆದರಿಕೆ ಎದುರಿಸಬೇಕಾಗಿ ಬಂದಿದೆ. ಆದರೆ ಎಲ್ಲ ದೇಶಗಳಲ್ಲಿ ಎಡ-ಪ್ರಗತಿಪರ ಪಕ್ಷಗಳು, ಸಂಘಟನೆಗಳು, ಟ್ರೇಢ್ ಯೂನಿಗಳು, ಶಾಂತಿ-ಚಳುವಳಿಗಳು ಯು.ಎಸ್ ದಾಳಿ ಖಂಡಿಸಿದ್ದಲ್ಲದೆ ಪ್ರದರ್ಶನಗಳನ್ನು ಸಂಘಟಿಸಿವೆ.

ಅಥೇನ್ಸ್ (ಗ್ರೀಸ್) ನಲ್ಲಿ ಯುದ್ಧ-ವಿರೋಧಿ ಪ್ರದರ್ಶನ
ಯುರೋಪಿನ ಜನತೆಗೆ ಈ ರೀತಿಯ ಯಾವುದೇ ಗೊಂದಲಗಳಿಲ್ಲ. ಯುದ್ಧಕ್ಕೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈಗಾಗಲೇ ಉಕ್ರೇನ್ ಯುದ್ಧದಿಂದಲೇ ತೀವ್ರ ಸಂಕಷ್ಟಕ್ಕೊಳಗಾಗಿರುವ ಜನತೆ ಇನ್ನೊಂದು ಯುದ್ಧಕ್ಕೆ ಸೆಳೆಯಲ್ಪಡಲು ತಯಾರಿಲ್ಲ. ಯುದ್ಧದ 5ನೇ ದಿನವೇ ತೈಲ, ಗ್ಯಾಸ್ ಬೆಲೆಗಳು ಸುಮಾರಾಗಿ ದುಪ್ಪಟ್ಟಾಗಿದ್ದು ಮತ್ತು ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಡುವ ಭಯ ಸಹ ಇದಕ್ಕೆ ಕಾರಣ. ಯುರೋಪಿನ ದೇಶಗಳು ನಾಟೋ ಸದಸ್ಯರಾಗಿದ್ದು, ಯುದ್ಧಕ್ಕೆ ಸೆಳೆಯಲ್ಪಡುವ ಭೀತಿ ಹೆಚ್ಚಾಗಿದೆ. ಯು.ಎಸ್ ಧಾಳಿಗೆ ಪ್ರತಿದಾಳಿ ಎದುರಿಸಿದರೆ ನಾಟೋ ಅದಕ್ಕೆ ಜವಾಬ್ದಾರವಲ್ಲ. ‘ನಾಟೋ ಇರಾನ್ ದಾಳಿಗೆ ಯು.ಎಸ್ ಗೆ ಬೆಂಬಲ ನೀಡಬಾರದು, ಯುದ್ಧದಿಂದ ದೂರವಿರಬೇಕು’ ಎಂಬ ನಿಲುವು ಈ ಪ್ರದರ್ಶನಗಳಲ್ಲಿ ಗಟ್ಟಿದನಿಯಲ್ಲಿ ಕೇಳಿಬಂದಿದೆ.
ಯುರೋಪಿನಲ್ಲಿ ಪ್ರಮುಖ ನಗರಗಳಾದ ಲಂಡನ್, ಪ್ಯಾರೀಸ್ ಬ್ರಸ್ಸೆಲ್ಸ್ ಮ್ಯೂನಿಕ್ ಅಲ್ಲದೆ ಗ್ರೀಸ್ ನ ಅಥೇನ್ಸ್ ನಲ್ಲಿ ಮತ್ತು ಹಲವಾರು ನಗರಗಳಲ್ಲಿ ಸಹ ಭಾರೀ ಪ್ರದರ್ಶನಗಳು ನಡೆದಿವೆ. ಯುರೋಪಿನಲ್ಲಿ ಹೆಚ್ಚಿನ ಕಡೆ ಯು.ಎಸ್ ಅಥವಾ ಇಸ್ರೇಲ್ ರಾಯಭಾರ ಕಚೇರಿಗಳ ಮುಂದೆ ಪ್ರದರ್ಶನಗಳು ನಡೆದಿವೆ.
ಖಮೇನಿ ಹತ್ಯೆಯ ವಿರುದ್ಧ ಆಕ್ರೋಶ
ಪಶ್ಚಿಮ ಏಶ್ಯಾ, ಅರಬ್ ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಮುಸ್ಲಿಮರಿರುವ (ಪಾಕಿಸ್ತಾನ, ಭಾರತ, ಮಲೇಶ್ಯಾ, ಇಂಡೋನೇಶ್ಯಾ) ದೇಶಗಳಲ್ಲಿ ಸೇರಿದಂತೆ ಏಶ್ಯಾದ ದೇಶಗಳಲ್ಲಿ ಭಾರೀ ಪ್ರದರ್ಶನಗಳು ನಡೆದಿವೆ. ಯು.ಎಸ್ ಸಾಮ್ರಾಜ್ಯಶಾಹಿಗೆ ಒಂದು ದೇಶದ ಸಾರ್ವಭೌಮತೆ ಪ್ರಶ್ನಿಸುವ ಹಕ್ಕಿಲ್ಲ. ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲದೆ ಇಸ್ಲಾಮಿನ (ಅದರಲ್ಲೂ ಶಿಯಾ ಪಂಥದ) ಧಾರ್ಮಿಕ ನಾಯಕ ಮತ್ತು ಇತರ ಇರಾನಿನ ನಾಯಕರ ಹತ್ಯೆ ಭಾರೀ ಶೋಕ, ಆಕ್ರೋಶವುಂಟು ಮಾಡಿದೆ.

ಮನಿಲಾ (ಫಿಲಿಪ್ಪೀನ್ಸ್) ನಲ್ಲಿ ಯುದ್ಧ-ವಿರೋಧಿ ಪ್ರದರ್ಶನ
ಈ ದೇಶಗಳಲ್ಲಿ ಹೆಚ್ಚಾಗಿ ಯು.ಎಸ್ ರಾಯಭಾರ ಕಚೇರಿ ಮುಂದೆ ಭಾರೀ ಪ್ರದರ್ಶನಗಳಾಗಿವೆ. ಪಾಕಿಸ್ತಾನದಲ್ಲಿ ನಡೆದ ಇಂತಹ ಪ್ರದರ್ಶನದ ಮೇಲೆ ಪೋಲಿಸ್ ಮತ್ತು ಯು.ಎಸ್ ಭದ್ರತಾ ಪಡೆಗಳು ಗೋಲಿಬಾರು ಮಾಡಿ ಹಲವಾರು ಜನ ಸತ್ತ ವರದಿಯಾಗಿದೆ. ಯು.ಎಸ್ ಮಿಲಿಟರಿ ನೆಲೆಯಿಂದ ದಾಳಿ ನಡೆದಿದ್ದಕ್ಕೆ ಪ್ರತಿಧಾಳಿ ಎದುರಿಸಿದ ಪಶ್ಚಿಮ ಏಶ್ಯಾ, ದೇಶಗಳಲ್ಲೂ ಇಂತಹ ಪ್ರದರ್ಶನಗಳು ನಡದಿವೆ. ಬಹ್ರೈನ್ ನಲ್ಲಿ ನಡೆದ ಭಾರೀ ಪ್ರದರ್ಶನದಲ್ಲಿ ಇದ್ದ ಜನತೆ ಯು.ಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನಿ ಕ್ಷಿಪಣಿಗಳು ಬೀಳುತ್ತಿದ್ದಂತೆ ಹರ್ಷೋದ್ಗಾರ ಮಾಡಿದ ವರದಿಗಳು ಬಂದಿವೆ. ಇವರು ತಮ್ಮ ದೇಶದ ನೆಲೆಗಳಿಂದ ಯು.ಎಸ್ ದಾಳಿ ಮಾಡಲು ಅವಕಾಶ ಕೊಡಬಾರದೆಂದೂ ಒತ್ತಾಯಿಸಿದರು. ಇರಾಕ್. ಟರ್ಕಿ, ಲೆಬನಾನ್, ಯೆಮೆನ್ ಮುಂತಾದ ದೇಶಗಳ ನಗರಗಳಲ್ಲಿ ಭಾರೀ ಪ್ರದರ್ಶನಗಳೂ ನಡೆದಿವೆ.

ಇರಾಕ್ ನಲ್ಲಿ ಖಮೇನಿ ಹತ್ಯೆಯ ವಿರುದ್ಧ ಪ್ರದರ್ಶನ
ಜಗದಗಲಕ್ಕೂ ಇರಾನ್ ಮೇಲಿನ ಯುದ್ಧ ವಿರೋಧಿ ಪ್ರದರ್ಶನಗಳ ವಿಡಿಯೊ (ಕೃಪೆ : ಅಲ್ ಜಜೀರಾ)
Courtesy : Al Jazeera
**************************
