ಬೆಂಗಳೂರು : ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ಅದು ದಲ್ಲಾಳಿಗಳ ಹೋರಾಟವಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸಚಿವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ರೈತರು ಹಾಗೂ ಕೃಷಿಯ ಕುರಿತು ಅಜ್ಞಾನ ಮತ್ತು ತಿರಸ್ಕಾರ ಹೊಂದಿರುವ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಘಟನೆಯ ಹಿನ್ನಲೆ : ಜನಾಶೀರ್ವಾದ ಯಾತ್ರೆ ಅಂಗವಾಗಿ ಮೈಸೂರಿಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿರುವವರು ರೈತರಲ್ಲ, ರೈತರ ಹೆಸರಿನ ದಲ್ಲಾಳಿಗಳು, ರೈತರನ್ನಾದರೆ ಮನವೊಲಿಸಬಹುದು, ರೈತರಂತೆ ನಟಿಸುವವರನ್ನು ಮನವೊಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಕಾಯ್ದೆಗಳಿಂದ ರೈತರ ಬೆಳೆ ಮಾರಾಟಕ್ಕೆ ಅನುಕೂಲವಾಗಲಿದೆ. ರೈತರ ಹೊಲಕ್ಕೆ ಮುಂಬೈನಿಂದ ಟ್ರಕ್ ಬಂದು ನಿಲ್ಲುತ್ತದೆ, ನೂತನ ಕಾಯ್ದೆಯಿಂದ ರೈತರು ಎಪಿಎಂಸಿ ಹೊರತಾಗಿ ಹೊರಗೆ ವ್ಯಾಪಾರ ಮಾಡಬಹುದು. ರೈತ ಹೆಚ್ಚಿನ ಬೆಲೆಗೆ ತನ್ನ ಬೆಳೆ ಮಾರಾಟ ಮಾಡಲು ಅನುಕೂಲ ಆಗಲಿದೆ, ಆದರೆ ದೆಹಲಿಯಲ್ಲಿ ಎಂಟತ್ತು ತಿಂಗಳಿಂದ ಹೋರಾಟ ಮಾಟುತ್ತಿದ್ದಾರೆ. ಅವರು ರೈತರಲ್ಲ, ದಲ್ಲಾಳಿಗಳು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ರಾಜೀನಾಮೆಗೆ ಪ್ರಾಂತ ರೈತ ಸಂಘ ಆಗ್ರಹ : ಕರ್ನಾಟಕ ಪ್ರಾಂತ ರೈತ ಸಂಘ ಸಚಿವರ ಉದ್ಧಟತನವನ್ನು ಬಲವಾಗಿ ಖಂಡಿಸಿದೆ ಮತ್ತು ಸಚಿವರು ದೇಶದ ಅನ್ನದಾತರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳನ್ನು ಪ್ರತಿರೋಧಿಸಿ ದೇಶದಾದ್ಯಂತ ಕಳೆದ ನವೆಂಬರ್ ತಿಂಗಳಿಂದ ನಿರಂತರ ಹೋರಾಟದಲ್ಲಿ ತೊಡಗಿರುವ ಲಕ್ಷಾಂತರ ರೈತ ಕುಟುಂಬಗಳನ್ನು, ಅವರು ರೈತರಲ್ಲಾ ಬ್ರೋಕರ್ ಗಳೆಂದು ಉದ್ಧಟತನದ ಮಾತನಾಡಿ ಅಪಮಾನಿಸಿದ್ದಾರೆ. ರೈತರು ಹಾಗೂ ಕೃಷಿಯ ಕುರಿತು ಅಜ್ಞಾನ ಮತ್ತು ತಿರಸ್ಕಾರ ಹೊಂದಿರುವ ಇವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕೆಂದು ಪ್ರಧಾನ ಮಂತ್ರಿಗಳನ್ನು ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಕಾರ್ಪೊರೇಟ್ ಕಂಪನಿಗಳ ಬ್ರೋಕರ್ ಗಳಾಗಿ ದೇಶವನ್ನು ಹಾಗೂ ಕೃಷಿಯನ್ನು ಕಾರ್ಪೊರೇಟ್ ಲೂಟಿಗಾಗಿ ತೆರೆಯುತ್ತಿರುವವರಾರೆಂದು ದೇಶ ಮತ್ತು ಜಗತ್ತಿಗೆ ತಿಳಿದಿದೆಯೆಂದು ಪ್ರಾಂತ ರೈತ ಸಂಘ ಛೇಡಿಸಿದೆ.