ಕಳೆದ ಒಂದು ವರ್ಷದಿಂದ ಕುಂದಾಪುರ, ತ್ರಾಸಿ,ಮೊವಾಡಿ,ನಾಡ, ಪಡುಕೋಣೆ,ಕೋಣ್ಕಿ,ಬಡಾಕೆರೆ ಮಾರ್ಗವಾಗಿ ಓಡುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಖಾಸಗಿ ಬಸ್ ಮಾಲೀಕರ ಕುತಂತ್ರದಿಂದ ನಿಲುಗಡೆ ಆಗಿರುವುದನ್ನು ಪುನಃ ಆರಂಭಿಸಬೇಕೆಂದು ಆಗ್ರಹಿಸಿ ಇಂದು ನಾಡ ಮತ್ತು ಮೊವಾಡಿ ನೂರಾರು ನಾಗರಿಕರು ನಾಡ ಗ್ರಾಮ ಪಂಚಾಯತ್ ಎದುರುಗಡೆ ಧರಣಿ ನಡೆಸಿ ಪ್ರತಿಭಟಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ನಾಡ ಗ್ರಾಮ ಪಂಚಾಯತ್ ಸದಸ್ಯ ರಾಜೀವ ಪಡುಕೋಣೆ ಮಾತನಾಡಿ:ಈ ಗ್ರಾಮಗಳ ಬಸ್ ಸೇವೆಗಾಗಿ ಕಳೆದ 9 ತಿಂಗಳಿಂದ ಹೋರಾಟ ನಡೆಸಿ ಖಾಸಗೀ ಬಸ್ ಇಲ್ಲದ ಕಡೆಗಳಲ್ಲಿ ಪರವಾನಿಗೆ ಪಡೆಯಲಾಗಿದ್ದು ಉತ್ತಮ ಸೇವೆ ಸಲ್ಲಿಸಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸುಮಾರು 30 ಲಕ್ಷ ಪ್ರಯೋಜನ ಪಡೆದಿದ್ದಾರೆ ಆದರೆ ಖಾಸಗೀ ಬಸ್ ಮಾಲಕರು ಸುಳ್ಳು ಮಾಹಿತಿ ನೀಡಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಜನರಿಗೆ ಅನ್ಯಾಯ ಮಾಡಿದ್ದಾರೆ ಇದನ್ನು ಪ್ರಶ್ನಿಸಿ ಬೀದಿ ಹೋರಾಟ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇದನ್ನು ಓದಿ :-ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ: 3 ಹಂತಗಳಲ್ಲಿ ಸಮೀಕ್ಷೆ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ:ಖಾಸಗೀ ಬಸ್ ಮಾಲಕರು ಎಲ್ಲಾ ಮಾರ್ಗಗಳಲ್ಲಿ ಪರ್ಮಿಟ್ ಪಡೆದರೂ ಬಹುತೇಕ ಕಡೆಗಳಲ್ಲಿ ಬಸ್ ಓಡಿಸದೇ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ.ಕೆಲವು ಮಾರ್ಗಗಳಲ್ಲಿ ಪರ್ಮಿಟ್ ಇಲ್ಲದೆಯೂ ಕಾನೂನು ಬಾಹಿರವಾಗಿ ಓಡುಸುತ್ತಿರುವವರ ವಿರುದ್ಧ ಪ್ರಾಧೀಕಾರದ ಕ್ರಮ ಕೈಗೊಂಡು ರದ್ದು ಪಡಿಸಬೇಕು ಎಂದು ಹೇಳಿದರು.
ಡಿವೈಎಫ್ಐ ಮುಖಂಡ ರಾಜೇಶ್ ಪಡುಕೋಣೆ ಮಾತನಾಡಿ: ಆಲೂರು ಹೊಯ್ಯಾಣ, ಅಕ್ಕಸಾಲಿ ಬೆಟ್ಟು ಮಾ ರ್ಗದಲ್ಲಿ ಪಕ್ಕಾ ಕೆಎಸ್ಸಾರ್ಟಿಸಿ ಪರ್ಮಿಟ್ ಇದ್ದರೂ ಕೂಡ ಸರಕಾರಿ ಬಸ್ ಓಡಿಸದೇ ಇರುವುದು ಜನರಿಗೆ ಅನುಮಾನ ಮೂಡುವಂತಾಗಿದೆ ಎಂದು ದೂರಿದರು.
ಪ್ರತಿಭಟನೆಯನ್ನುದ್ದೇಶಿಸಿ ಸ್ಥಳೀಯರಾದ ಫಿಲಿಪ್ ಡಿಸಿಲ್ವ, ಸಿಐಟಿಯು ಜಿಲ್ಲಾ ಮುಖಂಡರಾದ ಎಚ್ ನರಸಿಂಹ, ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ ಮಾತನಾಡಿದರು.
ಇದನ್ನು ಓದಿ :-ಮಂಗಳೂರು| ಯುವತಿಗೆ ಲೈಂಗಿಕ ಕಿರುಕುಳ; ಬಸ್ ಕಂಡಕ್ಟರ್ ಅಮಾನತು
ಮನೋರಮ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ನಾಡ, ಡಿವೈಎಫ್ಐ ಮುಖಂಡ ನಿಸರ್ಗ, ಕಟ್ಟಡ ಕಾರ್ಮಿಕರ ಸಂಘದ ಗುಲಾಬಿ ಮೊವಾಡಿ, ಶಿವಾನಂದ ಮೊದಲಾದವರಿದ್ದರು.
ಮನವಿಯನ್ನು ಆರ್ ಟಿಓ ಅಧಿಕಾರಿ ಕಮಲ ಕುಮಾರ್,ಶಾಂತರಾಜ್,ಉದಯ ಶೆಟ್ಟಿ ಕುಂದಾಪುರ ಇವರಿಗೆ ನೀಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಮೊಗವೀರ ಅವರಿಗೂ ಮನವಿ ನೀಡಲಾಯಿತು.
ಸಭೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯನ್ನು ಖಂಡಿಸಲಾಯಿತು ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.