ಬಿಡಿಎ ಕಾಂಪ್ಲೆಕ್ಸ್‌ಗಳ ಖಾಸಗೀಕರಣಕ್ಕೆ ಭಾರಿ ಪ್ರತಿಭಟನೆ: “ಇದು 60% ಸರ್ಕಾರವೇ?” ಸಂತೋಷ್‌ ಹೆಗ್ಡ್‌ ಪ್ರಶ್ನೆ

ಬೆಂಗಳೂರು: ಗುರುವಾರ, 12 ಸೆಪ್ಟೆಂಬರ್‌ ರಂದು, ಖಾಸಗಿ ಕಂಪನಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಂಪ್ಲೆಕ್ಸ್‌ಗಳನ್ನು ಹಸ್ತಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನಗರದಲ್ಲಿ ಭಾರಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪ್ರಮುಖವಾಗಿ ಮಾಜಿ ಕರ್ನಾಟಕ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್ಆರ್ ಹಿರೇಮಠ್ ಭಾಗವಹಿಸಿದರು. ಆಮ್ ಆದ್ಮಿ ಪಕ್ಷ (ಎಎಪಿ), ಸಿಪಿಐ(ಎಂ), ಕರವೇ ಗಜಸೇನೆ ಮತ್ತು ಬಹುಜನ ದಲಿತ ಸಂಘರ್ಷ ಸಮಿತಿ ಸೇರಿದಂತೆ ಕನಿಷ್ಠ ಆರು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು.

ಏಳು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗೀಕರಣಗೊಳಿಸಿ 30 ವರ್ಷಗಳ ಗುತ್ತಿಗೆಗೆ ನೀಡುವ ಒಪ್ಪಂದವನ್ನು ರದ್ದುಗೊಳಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು. ಇಂದಿರಾನಗರ, ಕೋರಮಂಗಲ, ಎಚ್ ಎಸ್ ಆರ್ ಲೇಔಟ್ ಮತ್ತು ಸದಾಶಿವನಗರದ ಕಾಂಪ್ಲೆಕ್ಸ್‌ಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ.

“ಇದು 60% ಸರ್ಕಾರವೇ?” ಎಂದು ನ್ಯಾ. ಸಂತೋಷ್‌ ಹೆಗ್ಡ್‌ ಪ್ರಶ್ನಿಸಿದರು. “ಹಿಂದಿನ ಸರ್ಕಾರವನ್ನು ಶೇ.40 ಭ್ರಷ್ಟಾಚಾರದ ಸರ್ಕಾರ ಎಂದು ಕರೆಯಲಾಗಿತ್ತು. ಇದು ಅದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಾವು ಮೌನವಾಗಿರುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಹೆಗ್ಡೆ ಹೇಳಿದರು.

ಇದನ್ನೂ ಓದಿ: ನನಗೆ ಕಂಡ ಕತೆಗಳನ್ನು ಸಿನೆಮಾ ಮಾಡುತ್ತೇನೆ – ಪೃಥ್ವಿ ಕೊಣನೂರು

ʼಮುಂದಿನ ಪೀಳಿಗೆಗೆ ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಆದರೆ ಸರಕಾರ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆʼ ಎಂದು ಹಿರೇಮಠ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ʼಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗೀಕರಣಗೊಳಿಸುವುದು ಜನರ ಹಿತಾಸಕ್ತಿಗೆ ನೇರವಾದ ಹೊಡೆತವಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಭೂಮಿ ಕೊರತೆಯಾಗುತ್ತಿದೆ. ಈ ಭೂಮಿಗಳನ್ನು ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಮೂಲಸೌಕರ್ಯಗಳಿಗೆ ಬಳಸಬೇಕು. ಈ ಪ್ರತಿಭಟನೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಅವರು ಹೇಳಿದರು.

ಸರ್ಕಾರ ಮತ್ತು ಬಿಡಿಎ ಅಧಿಕಾರಿಗಳು ಈ ಒಪ್ಪಂದಕ್ಕಾಗಿ ಕಿಕ್‌ಬ್ಯಾಕ್ ವ್ಯವಹಾರ ನಡೆಸಿರಬಹುದು ಎಂದು ಎಎಪಿ ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದೆ.

ಇದರ ಟೆಂಡರ್ ಅನ್ನು 2018 ರಲ್ಲಿ ಕರೆಯಲಾಗಿತ್ತು. ನಗರಾಭಿವೃದ್ಧಿ ಇಲಾಖೆಯ (ಯುಡಿಡಿ) ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸೆಪ್ಟೆಂಬರ್ 2023 ರಲ್ಲಿ ಟೆಂಡರ್‌ನೊಂದಿಗೆ ಮುಂದುವರಿಯುವಂತೆ ಬಿಡಿಎಗೆ ಸೂಚಿಸಿದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

”ಈ ಏಳು ಬಿಡಿಎ ಕಾಂಪ್ಲೆಕ್ಸ್‌ಗಳು ಆಯಕಟ್ಟಿನ ಜಾಗದಲ್ಲಿವೆ. ಉದಾಹರಣೆಗೆ ಎಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ನ ಭೂಮಿ ಪ್ರಸ್ತುತ ಚದರ ಅಡಿಗೆ 50,000 ರೂ.ಗಳಾಗಿದ್ದು, ಗುತ್ತಿಗೆಯನ್ನು ಇನ್ನೂ 30 ವರ್ಷಗಳವರೆಗೆ ವಿಸ್ತರಿಸಿ ಅಂತಹ ಬೆಲೆಬಾಳುವ ಆಸ್ತಿಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದು ಅಜಾಗರೂಕ ನಿರ್ಧಾರವಾಗಿದೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಮಾರಾಟ ಮಾಡಲಾಗಿದೆ” ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ. ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ಮುಖ್ಯಮಂತ್ರಿ ಚಂದ್ರು ಮತ್ತು ಮೋಹನ್ ದಾಸರಿ ಕೂಡ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸಿರುವ ಆದೇಶ ಹಿಂಪಡೆಯಿರಿJanashakthi Media

Donate Janashakthi Media

Leave a Reply

Your email address will not be published. Required fields are marked *