ಕನಕಪುರ: ವರ್ಷ ಕಳೆದರೂ ವೇತನ ನೀಡದಿದ್ದಕ್ಕೆ ತಾಳ್ಮೆ ಕಳೆದುಕೊಂಡ ಕಲ್ಲಹಳ್ಳಿ ಗ್ರಾಪಂ ಪೌರಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವ ಕ್ಷೇತ್ರದಲ್ಲಿ ಬಾಕಿ ವೇತನ ಪಾವತಿಗಾಗಿ ಪೌರಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವುದು ಚರ್ಚೆಗೆ ಗ್ರಾಸ ವಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಪಂನಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ರಂಗಯ್ಯ, ಸುರೇಶ್ ಇಬ್ಬರು ಪೌರಕಾರ್ಮಿಕರಿಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು 15 ತಿಂಗಳ ವೇತನ ಕೊಡದೆ ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಪೌರಕಾರ್ಮಿಕರು ಮಂಗಳವಾರ ಕಲ್ಲಹಳ್ಳಿ ಗ್ರಾಪಂ ಕಚೇರಿ ಎದುರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:11 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ವೇತನ ಕೊಡದೆ ಜೀವನ ನಡೆಸುವುದು ಕಷ್ಟವಾಗಿದ್ದು ಕೂಡಲೇ ಪಾವತಿಸುವಂತೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಬಾಕಿ ವೇತನ ಪಾವತಿ ಜೊತೆಗೆ ಪೌರಕಾರ್ಮಿಕರಿಗೆ ಇನ್ನು ಮುಂದೆ ಕನಿಷ್ಠ ವೇತನ ನೀಡಬೇಕು. ಪ್ರತಿ ತಿಂಗಳು ನಮಗೆ ವೇತನ ಪಾವತಿಸಬೇಕು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳು, ಕೆಲ ಸಂಘಟನೆ ಪದಾಧಿಕಾರಿಗಳು ಪೌರ ಕಾರ್ಮಿಕರ ಪ್ರತಿಭಟನೆಯನ್ನು ಬೆಂಬಲಿಸಿ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಪೌರಕಾರ್ಮಿಕರು ವೇತನ ಪಾವತಿಗಾಗಿ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಗ್ರಾಪಂ ಅಧಿಕಾರಿಗಳು ಪೌರಕಾರ್ಮಿಕರಿಗೆ ಕಳೆದ 15 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ 3,20,800 ರು.ವೇತನವನ್ನು ಸಂಪೂರ್ಣ ಪಾವತಿ ಮಾಡಿದರು.
ಪಿಡಿಒ ಶ್ರೀನಿವಾಸ್ ಮಾತನಾಡಿ, ನಮ್ಮ ಅವಧಿಯಲ್ಲಿ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಎಲ್ಲವನ್ನು ಆಗಿಂದಾಗ್ಗೆ ಪಾವತಿಸಿದ್ದೇವೆ. ಆದರೆ ಹಿಂದಿನ ಅಧಿಕಾರಿಗಳು ಅಧಿಕಾರಿಗಳ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿದ್ದೂ ಅದನ್ನು ಸಂಪೂರ್ಣ ಪಾವತಿಸಿದ್ದೇವೆ. ಇನ್ನು ಮುಂದೆ ಪ್ರತಿ ತಿಂಗಳು ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳು ತ್ತೇವೆ ಎಂದು ತಿಳಿಸಿದರು.