ಬೆಂಗಳೂರು : ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸ್ಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ ಹಿರಿಯ ರೈತ ನಾಯಕ ಶ್ರೀ ಜಗಜಿತ್ ಸಿಂಗ್ ದಲ್ಲೆವಾಲರವರ ಪ್ರಾಣ ಉಳಿಸಲು ತಕ್ಷಣ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ/ಧರಣಿ ಸತ್ಯಾಗ್ರಹಕ್ಕೆ ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ.
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ ,ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 26 ರಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಹಿರಿಯ ರೈತ ನಾಯಕ 70 ವರ್ಷ ವಯಸ್ಸಿನ ಶ್ರೀ ಜಗಜಿತ್ ಸಿಂಗ್ ದಲ್ಲೇವಾಲ ರವರು ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಉಪವಾಸ ಸತ್ಯಾಗ್ರಹ 48 ನೇ ದಿನಕ್ಕೆ ಕಾಲಿಟ್ಟಿದ್ದು ,ದೇಹ ನಿತ್ರಾಣಗೊಂಡು ,ಮಾಂಸಖಂಡಗಳು ತಮ್ಮ ತೂಕವನ್ನು ಕಳೆದುಕೊಂಡಿದ್ದು ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ಉಂಟಾಗಿದೆ. ಇಂತಹ ಸ್ಥಿತಿಗೆ ರೈತ ನಾಯಕರ ಪರಿಸ್ಥಿತಿ ತಲುಪಲು ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಟಿ.ಯಶವಂತ್ ತಿಳಿಸಿದದಾರೆ.
ಇದನ್ನೂ ಓದಿ : ಸಿಪಿಐ(ಎಂ) ನಾಯಕ, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ನಿಧನ
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಅಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ ,ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೋತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆಯನ್ನು ನೀಡಿತ್ತು. ಆದರೆ ಈ ಭರವಸೆಗೆ ವಿರುದ್ದವಾಗಿ ನಡೆದುಕೊಂಡ ಕಾರಣಕ್ಕಾಗಿ ಎರಡನೇ ಎನ್ ಡಿ ಎ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಮತ್ತೇ ಆದೇ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದರು.
ಮೂರನೇ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ ದೇಶದ ಎಲ್ಲಾ ಸಂಸದರಿಗೆ ಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳನ್ನು ಈ ಸರ್ಕಾರಕ್ಕೆ ನೆನಪಿಸುವಂತೆ ಒತ್ತಾಯಿಸಲಾಗಿತ್ತು. ಅದಲ್ಲದೇ ರಾಷ್ಟ್ರ ಪತಿಗಳಿಗೂ ಜಿಲ್ಲಾಧಿಕಾರಿ ಗಳ ಮೂಲಕ ಐನೂರಕ್ಮೂ ಹೆಚ್ಚು ಜಿಲ್ಲೆಗಳಿಂದ ಈ ಲಿಖಿತ ಭರವಸೆಗಳನ್ನು ಸರ್ಕಾರಕ್ಕೆ ನೆನಪಿಸಿ ಈಡೇರಿಸಲು ಆಗ್ರಹಿಸಲಾಗಿತ್ತು. ಮೂರು ವರ್ಷಗಳ ನಂತರವೂ ರೈತರ ಹಕ್ಕೋತ್ತಾಯಗಳನ್ನು ನಿರ್ಲಕ್ಷ್ಯ ಮಾಡಿದೆ ಮಾತ್ರವಲ್ಲ ಇಡೀ ವರ್ಷಕ್ಕಿಂತ ಹೆಚ್ಚು ಕಾಲ ಲಕ್ಷಾಂತರ ರೈತರು ಹೋರಾಟ ನಡೆಸಿ ರದ್ದುಪಡಿಸಿಕೊಂಡ ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣವನ್ನು ರದ್ದುಪಡಿಸುವ ಕರಾಳ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆಯನ್ನು ಜಾರಿ ಮಾಡುವ ಪ್ರಯತ್ನ ನಡೆಸುತ್ತದೆ. ದೇಶಾದ್ಯಂತ ಎಲ್ಲಾ ರೈತರ ಪಂಪಸೆಟ್ ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಪಾವತಿ ಮಾಡುವಂತೆ ರೈತರನ್ನು ಬಲವಂತಕ್ಕೆ ಒಳಪಡಿಸಲು ಆಧಾರ್ ಕಾರ್ಡ್ ಜೋಡಣೆ ಕಾರ್ಯ ಪೂರ್ಣಗೊಳಿಸಿದೆ.ಯಾವುದೇ ರೈತರ ಬೆಳೆಗಳನ್ನು ಸಕಾಲದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿಲ್ಲ. ಇಂತಹ ಹಲವು ರೈತ ವಿರೋಧಿ ಧೋರಣೆಗಳು ಹಾಗೂ ರೈತರ ಆಗ್ರಹಗಳನ್ನು ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಈ ತಕ್ಷಣವೇ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು. ರಾಜ್ಯ ಸರ್ಕಾರವು ಕೂಡ ರೈತ ನಾಯಕರ ಪ್ರಾಣ ಉಳಿಸಲು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿ ತಕ್ಷಣ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಬೇಕು ಎಂದು ಈ ಪ್ರತಿಭಟನೆ/ಧರಣಿ ಸತ್ಯಾಗ್ರಹ ನಡೆಸಿ ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.