ಕಾರವಾರ: ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಜಿಲ್ಲಾ ಪಂಚಾಯತಿಯಿಂದ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಉತ್ತರಕನ್ನಡ ಜಿಲ್ಲಾ ಪಂಚಾಯತಿ ಕಚೇರಿ ಎದುರು ಧರಣಿ ನಡೆಸಲಾಗುತ್ತಿದೆ.
ಭಟ್ಕಳ ತಾಲ್ಲೂಕಿನಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆಗೆ ಒತ್ತಡ ಹೇರಿದ ಮೇಲೆ ಎರಡು ಬಾರಿ ಪ್ರಕರಣದ ತನಿಖೆ ನಡೆಸಲಾಗಿದೆ. ತನಿಖಾ ವರದಿಯಲ್ಲಿ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಆದರೆ ಭ್ರಷ್ಟಾಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯತಿ ವಿಫಲವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಹಣಕಾಸು ಆಯೋಗದ ನಿಧಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕ್ರಿಯಾ ಯೋಜನೆಗಳಿಗೆ ಮಂಜೂರಾತಿ ಪಡೆಯದೆ ಸಂಬಂಧಿಗಳ ಹೆಸರಿನಲ್ಲಿ ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದಾರೆ.
ಇನ್ನು ಅಧಿಕಾರಿಗಳು ಸರ್ಕಾರಿ ಆದೇಶಗಳನ್ನ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸುವ ಕಾರ್ಯಕರ್ತರು, ಹೆಬಳೆ ಗ್ರಾಮ ಪಂಚಾಯತಿಯಲ್ಲಿ ಅಕ್ರಮಗಳು ನಡೆದು ಎರಡು ವರ್ಷ ಕಳೆದರೂ, ಆರೋಪ ಸಾಬೀತಾಗಿದ್ದರೂ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮವಾಗಿಲ್ಲ. 14, 15ನೇ ಹಣಕಾಸು ಯೋಜನೆ, ನರೇಗಾ ಸೇರಿದಂತೆ ಅನೇಕ ಯೋಜನೆಗಳಲ್ಲಿ ಅವ್ಯವಹಾರವಾಗಿದೆ. ಅವ್ಯವಹಾರ ನಡೆದಿರುವುದು ಸಾಬೀತಾದರೂ ಕ್ರಮಕ್ಕೆ ಮುಂದಾಗದಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೆ.ರಮೇಶ್ ಕುಣಿಗಲ್, ಉಪಾಧ್ಯಕ್ಷ ಶಂಕರ ನಾಯ್ಕ, ರಾಜ್ಯ ಕಾರ್ಯದರ್ಶಿ ಮಂಜುನಾಥ ಆರ್., ಮೋಹನ ಕುಮಾರ್, ರುದ್ರೆಶ್ ವಾಸು, ಚೆನ್ನೆಯ್ಯ ವಸ್ತ್ರದ್, ಶಂಕರಪ್ಪ,ರಾಜು ನಾಯ್ಕ, ನಾಗೇಂದ್ರ ನಾಯ್ಕ,ಶಂಕರ್ ನಾಯ್ಕ, ಲಕ್ಷ್ಮಣ ಮೊಗೇರ್ ಹಾಗೂ ಇನ್ನಿತರು ಇದ್ದರು.
ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು