ತೀಸ್ತಾ ಸೆತಲ್ವಾಡ್‍, ಶ್ರೀಕುಮಾರ್ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ಹಾಸನ: 2002ರ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅವಿರತ ಹೋರಾಟ ನಡೆಸಿರುವ ತೀಸ್ತಾ ಸೆಟಲ್ವಾಡ್ ಅವರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಎಡ, ದಲಿತ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು, ಅವರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ತೀಸ್ತಾ ಸೆತಲ್ವಾಡ್, ಶ್ರೀಕುಮಾರ್ ಹಾಗೂ ಇತರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿವೆ.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಬಾಬಾಸಾಹೇಬ್‍ ಡಾ. ಬಿ.ಆರ್‍.ಅಂಬೇಡ್ಕರ್‍ ಪುತ್ಥಳಿ ಎದುರು ವಿವಿಧ ಸಂಘಟನೆಗಳು ನಡೆಸಿದವು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತೀಸ್ತಾ ಸೆತಲ್ವಾಡ್, ಶ್ರೀಕುಮಾರ್ ಹಾಗೂ ಇತರರ ಬಂಧನವು ಯಾವ ಆಳ್ವಿಕೆಯ ಅಡಿಯಲ್ಲಿ ಕೋಮು ಹಿಂಸಾಚಾರ ನಡೆಯುತ್ತದೋ ಆ ಪ್ರಭುತ್ವ ಅಥವಾ ಸರ್ಕಾರದ ಪಾತ್ರವನ್ನು ಪ್ರಶ್ನಿಸುವ ಧೈರ್ಯವನ್ನು ಯಾರೂ ಮಾಡಬಾರದು ಎಂದು ಎಲ್ಲಾ ಪ್ರಜಾಪ್ರಭುತ್ವವಾದಿ ಜನರಿಗೆ ನೀಡಿರುವ ಬೆದರಿಕೆಯಾಗಿದೆ. ಇದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಮಾಡಿರುವ ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಗುಜರಾತ್ ನರಮೇದ ವಿರುದ್ಧ ಧ್ವನಿಯೆತ್ತಿದ ಸಾಮಾಜಿಕ ಕಾರ್ಯಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಮತ್ತು ಗುಜರಾತಿನ ನಿವೃತ್ತ ಡಿಜಿಪಿ ಶ್ರೀಕುಮಾರ್ ಅವರನ್ನು ಬಂಧಿಸಲು ಗುಜರಾತ್ ಆಡಳಿತಕ್ಕೆ ಸಾಧ್ಯವಾಗಿರುವುದು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠದ ಪ್ರಶ್ನಾರ್ಹ ತೀರ್ಪಿನಿಂದಾಗಿ, ಆ ತೀರ್ಪು ದೂರುದಾರರನ್ನೇ ಆರೋಪಿಯನ್ನಾಗಿ ಮಾಡಿದೆ. 16 ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆದ ಒಂದು ಹೋರಾಟವನ್ನು ‘ದುರುದ್ದೇಶದಿಂದ ಮಡಕೆ ಬೇಯುತ್ತಲೇ ಇರು’ವಂತೆ ಮಾಡುವ ಕೆಲಸ ಎಂದು ಅಸಾಮಾನ್ಯ ಅವಹೇಳನಕಾರಿ ಪದಗಳಲ್ಲಿ ವರ್ಣಿಸಲಾಗಿದೆ.

ಈ ಹಿಂದೆ, ಏಪ್ರಿಲ್ 2004 ರಲ್ಲಿ, ಸ್ವತಃ ಸುಪ್ರೀಂ ಕೋರ್ಟ್ ಆಗಿನ ಸರ್ಕಾರದ ನಾಯಕರನ್ನು ‘ಆಧುನಿಕ ಕಾಲದ ನೀರೋಗಳು’ ಎಂದು ಬಣ್ಣಿಸಿತ್ತು. ತೀಸ್ತಾ ಅವರಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಶಿಕ್ಷೆ ನೀಡುತ್ತದೆ. ಇದು ಸರಿಪಡಿಕೆ ಅರ್ಜಿ( ಕ್ಯುರೇಟಿವ್ ಪಿಟಿಷನ್)ಗೆ ಸೂಕ್ತವಾದ ಒಂದು ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಐ(ಎಂ), ದಲಿತ ಮತ್ತ ಪ್ರಜಾಸತ್ತಾತ್ಮಕ ಸಂಘಟನೆಗಳು ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಮತ್ತು ಇತರರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿವೆ. ಅದೇ ರೀತಿ ಆರೆಸ್ಸೆಸ್-ಬಿಜೆಪಿಯ ದ್ವೇಷದ ಕಾರ್ಖಾನೆಯ ಸುಳ್ಳುಗಳನ್ನು ಆಧಾರ ಸಹಿತವಾಗಿ ಬಯಲಿಗೆಳೆಯುತ್ತಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಅತ್ಯಂತ ಅಕ್ರಮ ಮತ್ತು ಖಂಡನೀಯ. ದೆಹಲಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ನಡೆಸಿದ ಸರಣಿ ಹಿಂಸಾತ್ಮಕ ಮತ್ತು ಕೋಮುವಾದಿ ಚಟುವಟಿಕೆಗಳ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿಷ್ಕ್ರಿಯರಾಗಿರುವ ದೆಹಲಿಯ ಪೊಲೀಸರು ಆರ್ಎಸ್ಎಸ್-ಬಿಜೆಪಿಯ ಮತಾಂಧತೆಯ ವಿರುದ್ಧ ಧ್ವನಿ ಎತ್ತುವ ಸಾಮಾನ್ಯ ನಾಗರಿಕರು, ಪತ್ರಕರ್ತರು ಮತ್ತು ರಾಜಕೀಯ ನಾಯಕರಿಂದ ಧ್ವನಿಗಳನ್ನು ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಸಿಪಿಐ(ಎಂ), ದಲಿತ ಮತ್ತ ಪ್ರಜಾಸತ್ತಾತ್ಮಕ ಸಂಘಟನೆಗಳು ಮೊಹಮ್ಮದ್ ಜುಬೇರ್ ಅವರನ್ನು ಬೇಷರತ್ ಬಿಡುಗಡೆಗೆ ಒತ್ತಾಯಿಸಿದವು.

ರಾಜಾಸ್ಥಾನದ ಉದಯಪುರ ನಗರದಲ್ಲಿ ಟೈಲರ್ ಕನ್ಹಯ್ಯ ಲಾಲ್ನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯವಾಗಿದ್ದು, ಈ ಘಟನೆಯು ಮಾನವೀಯತೆಗೇ ಕಳಂಕ ತರುವ ಘಟನೆಯಾಗಿದೆ. ಈ ಭೀಕರ ಅಮಾನುಷ ಕೃತ್ಯದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ , ಹಿರಿಯ ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ರಾಜಶೇಖರ್, ಕೆ. ಈರಪ್ಪ, ಅಂತಾರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್, ಕರಾದಸಂಸ ರಾಜ್ಯ ಸಂಚಾಲಕ ಸೋಮಶೇಖರ್, ದಸಂಸ ಸಂಚಾಲಕ ಕೃಷ್ಣದಾಸ್, ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶಿರ್ ಅಹಮದ್, ಪತ್ರಕರ್ತರಾದ
ವೆಂಕಟೇಶ, ನಾಗರಾಜ್ ಹೆತ್ತೂರು, ರೈತಸಂಘದ ಮುಖಂಡರಾದ ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ ಮತ್ತು ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *