ಕೆರೆ ನೀರಿನ ಹಕ್ಕಿಗಾಗಿ ಪ್ರತಿಭಟನೆ; 9 ಹೋರಾಟಗಾರರ ವಿರುದ್ಧ ಎಫ್‌ಐಆರ್

ಕೊಪ್ಪಳ: ಜುಲೈ 23 ರಂದು ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಬಾಲ್ದೋಟಾ ಎಂಎಸ್‌ಪಿಎಲ್‌ ಕಂಪನಿಯ ಅತಿಕ್ರಮಣ ಮತ್ತು ಕೆರೆ ನೀರಿನ ಹಕ್ಕಿಗಾಗಿ ನಡೆಯುತ್ತಿದ್ದ ತೀವ್ರ ಪ್ರತಿಭಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬಾಲ್ದೋಟಾ ಕಾರ್ಖಾನೆ ಎದುರು ಧರಣಿ ನಡೆಸಿದ್ದ ಒಂಬತ್ತು ಮಂದಿ ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ

ಈ ಪ್ರತಿಭಟನೆಯು ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ನಡೆದಿದ್ದು, ಜಿಲ್ಲಾಡಳಿತ ಭವನ ಮತ್ತು ಬಾಲ್ದೋಟಾ ಕಾರ್ಖಾನೆ ಎರಡೂ ಕಡೆ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಬಸಾಪುರ ಕೆರೆ ಅತಿಕ್ರಮಣವನ್ನು ಖಂಡಿಸಿ, ಬಲ್ಡೋಟಾ ಎಂಎಸ್‌ಪಿಎಲ್‌ ಕಂಪನಿ ವಿರುದ್ಧ ಬೃಹತ್ “ಜನ-ಜಾನುವಾರು ಪ್ರತಿಭಟನೆ” ಜುಲೈ 24 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಿತು. ಬಸಾಪುರ ಕೆರೆ ಬಚಾವೋ ಮತ್ತು ಪರಿಸರ ಹಿತರಕ್ಷಣಾ ಸಮಿತಿಗಳು ಜಂಟಿಯಾಗಿ ಕರೆ ನೀಡಿದ ಈ ಪ್ರತಿಭಟನೆಯಲ್ಲಿ ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ಸಹಸ್ರಾರು ರೈತರು ಕೊಪ್ಪಳ ಜಿಲ್ಲಾಡಳಿತದ ಕಚೇರಿ ಮುಂದೆ ಜಮಾಯಿಸಿ, ಉಚ್ಚ ನ್ಯಾಯಾಲಯದ ಆದೇಶದಂತೆ ಬಸಾಪುರ ಕೆರೆಯನ್ನು ತಕ್ಷಣವೇ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಆಗ್ರಹಿಸಿದ್ದರು.

ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಉದ್ದೇಶಿಸಿ, “ಸಿದ್ದರಾಮಯ್ಯನವರೇ ಇಲ್ಲಿ ನೋಡಿ, ಕುರಿಗಳಿಗೆ ಕುಡಿಯಲು ನೀರಿಲ್ಲ, ದನಗಳಿಗೆ ಕುಡಿಯಲು ನೀರಿಲ್ಲ!” ಎಂದು ಆಕ್ರೋಶದಿಂದ ಕೂಗಿದರು. ಕೊಪ್ಪಳ ಜಿಲ್ಲೆಯ ಬೃಹತ್ ಕಾರ್ಪೊರೇಟ್ ಸಂಸ್ಥೆಯಾದ ಬಲ್ಡೋಟಾ ಕಂಪನಿಗೆ ಬಸಾಪುರ ಕೆರೆಯನ್ನು ಬರೆದುಕೊಡಲಾಗಿದೆ ಎಂದು ಆರೋಪಿಸಿದ ರೈತರು, ಇದನ್ನು ವಿರೋಧಿಸಿ ಕಂಪನಿ ಮುಂದೆ ಈ ಜನ-ಜಾನುವಾರು ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದರು. ನೂರಾರು ಪ್ರತಿಭಟನಾಕಾರರು, “ಬಸಾಪುರ ಕೆರೆಯನ್ನು ನಾವು ಬಿಡುವುದಿಲ್ಲ, ಬಿಡುವುದಿಲ್ಲ!” ಎಂದು ಜೋರು ಘೋಷಣೆಗಳನ್ನು ಕೂಗಿದರು. ಇಂತಹ ಕಂಪನಿಗಳಿಗೆ ಕಾರ್ಖಾನೆ ಮಾಡಲು ಕೇಳಿದಷ್ಟು ಜಾಗ ಕೊಟ್ಟಿರುವುದರ ಪರಿಣಾಮವೇ ಈ ನೀರಿನ ಅಭಾವ ಮತ್ತು ಜಾನುವಾರುಗಳ ಸಂಕಷ್ಟ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕುರಿಗಳಿಗೆ ನೀರು ಕುಡಿಸಲು ಹೋದ ಕುರಿಗಾಹಿ ಮೇಲೆ ಕಂಪನಿ ಭದ್ರತಾ ಸಿಬ್ಬಂದಿ ಹಲ್ಲೆ

ಪ್ರತಿಭಟನಾನಿರತ ರೈತರು ನೀಡಿದ ಮಾಹಿತಿಯ ಪ್ರಕಾರ, ಬಲ್ಡೋಟಾ ಕಂಪನಿಯು ತನಗೆ ಮಂಜೂರಾಗಿದ್ದ ಭೂಮಿಯ ಜೊತೆಗೆ, ಬಸಾಪುರ ಗ್ರಾಮದ 44 ಎಕರೆ 35 ಗುಂಟೆ ಸಾರ್ವಜನಿಕರ ಕೆರೆಯನ್ನು ಅಕ್ರಮವಾಗಿ ತನ್ನೊಡಲೊಳಗೆ ಸೇರಿಸಿಕೊಂಡು, ಸುತ್ತಲೂ ಕಂಪೌಂಡ್ ಅನ್ನು ನಿರ್ಮಿಸಿದೆ. ಇಷ್ಟೇ ಅಲ್ಲದೆ, ಕೆರೆಯ ಮಧ್ಯಭಾಗದಲ್ಲಿ ರಸ್ತೆಯನ್ನೂ ಸಹ ನಿರ್ಮಿಸಿದ್ದು, ಇದು ಸಂಪೂರ್ಣವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವನ್ನು ಕಡಿತಗೊಳಿಸಿದೆ. ಈ ಕಂಪನಿಯ ಸುತ್ತಮುತ್ತ ಇರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಭೂಮಿ ಮತ್ತು ಕೆರೆಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ. “ಕೆಲವರು ಈ ಕಂಪನಿ ಜೊತೆಗೆ ನಿಂತಿದ್ದಾರೆ. ಇದರಿಂದಾಗ ಸುತ್ತಮುತ್ತಲಿನ ಜನ, ಜಾನುವಾರುಗಳ ಸ್ಥಿತಿ ಅರಣ್ಯರೋದನವಾಗಿದೆ. ಇಂತಹ ಒಂದು ಪರಿಸ್ಥಿತಿ ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಉದ್ಭವಿಸಿದೆ,” ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉದ್ಭವಿಸಿರುವುದು ಮಾತ್ರವಲ್ಲದೆ, ಈ ಅತಿಕ್ರಮಣವನ್ನು ಪ್ರಶ್ನಿಸಲು ಹೋದರೆ ಕಾರ್ಖಾನೆಯವರು ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮದ ರೈತರು, ಸುಮಾರು 4,000 ಕುರಿ-ದನಗಳೊಂದಿಗೆ ಕೊಪ್ಪಳ ಜಿಲ್ಲಾಡಳಿತದ ಮುಂದೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.

ಒಬ್ಬ ರೈತ ಮಾತನಾಡಿ, “ನಮ್ಮ ಕೊಪ್ಪಳ ಜಿಲ್ಲೆಯ ಅಸ್ತಿಯನ್ನೆಲ್ಲಾ ಖರೀದಿಮಾಡಿಕೊಂಡು, ಕೆರೆಯ ನೀರನ್ನು ಕುಡಿಯಲು ಹೋಗಲು ದಾರಿಯಿಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಅದರ ಸಲುವಾಗಿ ಇಂದು ನಾವು ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡಲಿಕ್ಕೆ ಬಂದಿದ್ದೇವೆ,” ಎಂದು ಹೇಳಿದರು. ಈ ಸಮಸ್ಯೆಯನ್ನು ಬಗೆಹರಿಸಿದರೆ ಒಳ್ಳೆಯದಾಗುತ್ತದೆ. ಇದನ್ನು ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ “ಇಂದು 4,000 ಜಾನುವಾರುಗಳೊಂದಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ 45,000 ದನ ಮತ್ತು 1 ಲಕ್ಷ ಕುರಿಗಳೊಂದಿಗೆ ಬರುತ್ತೇವೆ,” ಎಂದು ಅವರು ಜಿಲ್ಲಾಡಳಿತಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು.

“ಆಗ ನಾವು ಈ ಕುರಿ ಮತ್ತು ಜಾನುವಾರುಗಳೊಂದಿಗೆ ಪ್ರತಿಭಟಿಸುತ್ತೇವೆ. ನಮಗೆ ನ್ಯಾಯ ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ” ಎಂದು ರೈತರು ದೃಢಸಂಕಲ್ಪ ವ್ಯಕ್ತಪಡಿಸಿದರು. “ಈ ಕಂಪನಿಯವರು 2007ರಿಂದಲೂ ನೀರನ್ನು ಬಳಕೆ ಮಾಡಲು ಬಿಟ್ಟಿಲ್ಲ. ಕೆರೆಯ ಸುತ್ತಲೂ ಕಂಪೌಂಡ್ ಹಾಕಿಬಿಟ್ಟಿದ್ದಾರೆ ಮತ್ತು ಗೇಟ್ ಮಾಡಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ, ಈ ಗೇಟಿಗೆ ಹತ್ತಾರು ಕಾವಲುಗಾರರನ್ನು ಇಟ್ಟಿದ್ದಾರೆ. ಹೀಗಿದ್ದಾಗ ನಾವು ನಮ್ಮ ಜಾನುವಾರುಗಳಿಗೆ ನೀರು ಕುಡಿಸುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು. ಬಸಾಪುರ ಕೆರೆಯ ಹತ್ತಿರ ಜನ ಅಥವಾ ಜಾನುವಾರು ಹೋದರೆ ಬಡಿದು ಕಳುಹಿಸುತ್ತಾರೆ. ಈ ರೀತಿಯ ದೌರ್ಜನ್ಯ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮುಂದುವರಿಯುತ್ತಿದೆ ಎಂದೂ ಪ್ರತಿಭಟಿಸಿದ ರೈತರು ಆರೋಪಿಸಿದ್ದರು.

ಇಂದು ಜನ ಮತ್ತು ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು. ಇಂದಿನ ಹೋರಾಟದ ಪ್ರಮುಖ ಉದ್ದೇಶಗಳು ಎರಡು. “ಒಂದು, ಬಲ್ಡೋಟಾ ಕಂಪನಿಯ ವಿಸ್ತರಣೆಯನ್ನು ನಿಲ್ಲಿಸಬೇಕು. ಎರಡನೆಯದು, ಕಂಪನಿಗೆ ಬಸಾಪುರ ಕೆರೆಯನ್ನು ಜಿಲ್ಲಾಡಳಿತ ಮಾರಾಟ ಮಾಡಿದೆ. ಇದನ್ನು ನಾವು ಸರ್ವತ ಒಪ್ಪುವುದಿಲ್ಲ. ಹಾಗಾಗಿ ಬಸಾಪುರ ಕೆರೆಯನ್ನು ಜನ ಮತ್ತು ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ,” ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದರು.

ಕಾನೂನುಬದ್ಧತೆ ಏನೇ ಇರಲಿ, ಸರ್ಕಾರ ಕಂಪನಿಗೆ ಈ ಕೆರೆಯನ್ನು ಮಾರಾಟ ಮಾಡಿರುವುದೇ ತಪ್ಪು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. “ಅದನ್ನು ಜನ ಜಾನುವಾರುಗಳಿಗೆ ಮುಕ್ತಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಾಗಾಗಿ ಈ ಕಂಪನಿಯಿಂದ ದೌರ್ಜನ್ಯಕ್ಕೊಳಗಾದ ಗ್ರಾಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಬೇಕು, ಇಲ್ಲಿಯ ಪರಿಸ್ಥಿತಿ ಅವಲೋಕಿಸಿ ಇಲ್ಲಿರುವ ಕಂಪನಿಯನ್ನು ಒಕ್ಕಲೆಬ್ಬಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು,” ಎಂದು ಅವರು ಆಗ್ರಹಿಸಿದ್ದರು.

ಇದನ್ನು ಬಿಟ್ಟು ಸರ್ಕಾರ ಮತ್ತು ಜಿಲ್ಲಾಡಳಿತ ಬೇರೆ ಏನೋ ನೆಪವೊಡ್ಡಿ ಬಲ್ಡೋಟಾ ವಿಸ್ತರಣೆಯನ್ನು ನಿಲ್ಲಿಸದಿದ್ದರೆ ಮತ್ತು ಕೆರೆಯನ್ನು ಮುಕ್ತಗೊಳಿಸದಿದ್ದರೆ, “ಮುಂದಿನ ದಿನಗಳಲ್ಲಿ 40,000 ಜಾನುವಾರುಗಳೊಂದಿಗೆ ಬಲ್ಡೋಟಾ ಕಂಪನಿಯ ಒಳಗೆ ನುಗ್ಗುವಂತಹ ಹೋರಾಟವನ್ನು ಮಾಡುತ್ತೇವೆ,” ಎಂದು ಹೋರಾಟಗಾರರು ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು.

ಧರಣಿ ನಡೆಸುತ್ತಿದ್ದಾಗ ಕಾರ್ಖಾನೆಯ ಸಿಬ್ಬಂದಿ ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಧರಣಿನಿರತರು ಬಿ.ಎಸ್.ಪಿ.ಎಲ್. ಬಾಲ್ದೋಟಾ ಕಂಪನಿಯ ಮುಖ್ಯ ದ್ವಾರದ ಹತ್ತಿರ ಕರ್ತವ್ಯದಲ್ಲಿದ್ದಾಗ, ಸುಮಾರು 4,000ಕ್ಕೂ ಹೆಚ್ಚು ದನಗಳನ್ನು ಮತ್ತು ಕುರಿಗಳನ್ನು ಕಾರ್ಖಾನೆಯ ಆವರಣದೊಳಗೆ ಒಡೆದುಕೊಂಡು ಬಂದು ಕಂಪನಿಯ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಯ ಭದ್ರತಾ ವ್ಯವಸ್ಥಾಪಕರಾದ ಎಂ. ಮಹೇಶ್ ನೀಡಿದ ದೂರಿನಲ್ಲಿ, ಪ್ರತಿಭಟನಾಕಾರರು ತಮ್ಮನ್ನು ತಳ್ಳಿ ಬಲವಂತವಾಗಿ ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದರು.

ಈ ದೂರಿನ ಅನ್ವಯ, ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಅಲ್ಲಮ ಪ್ರಭು ಬೆಟದೂರು, ಹನುಮಂತಪ್ಪ ಕಲ್ಕೆರಿ, ಮಂಗಳೇಶ್ ರಾಥೋಡ್, ಮುದುಕಪ್ಪ ಹೊಸಮನಿ, ಕೆ.ಬಿ ಗೋನಾಳ್, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಕೇರಿ ಹಾಗೂ ಎ.ಗಫಾರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು.

ಹೋರಾಟಗಾರ ಮಂಜುನಾಥ್ ಗೊಂಡ್ವಾಳ್ ಮಾತನಾಡಿ, “44 ಎಕರೆ ಕೆರೆ ಮತ್ತು ಸಾರ್ವಜನಿಕ 12 ಎಕರೆ ಭೂಮಿ ಅಂದರೆ ಸುಮಾರು 57 ಎಕರೆ ಮುಖ್ಯ ರಸ್ತೆ ಹೊಂದಿಕೊಂಡಿರುವ ಭೂಮಿಯನ್ನು ಕಬಳಿಸಿ ಅತ್ಯಂತ ಕಡಿಮೆ ಬೆಲೆಗೆ ಲೀಸ್ ಕಮ್ ಖರೀದಿ ಮಾಡಿಕೊಂಡಿದ್ದಾರೆ,” ಎಂದು ಆರೋಪಿಸಿದರು. ಈ ಕೆರೆಗೆ ಸಂಬಂಧಿಸಿದಂತೆ 2022ರ ಹೈಕೋರ್ಟ್ ಆದೇಶದಲ್ಲಿ ಈ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಸ್ಪಷ್ಟವಾಗಿ ಇದೆ. ಆದರೆ ಕಂಪನಿಯು ಈ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಗೊಂಡ್ವಾಳ್ ಆರೋಪಿಸಿದ್ದರು.

“ಹಾಗಾಗಿ ಜಾನುವಾರುಗಳಿಗೆ, ಕುರಿಗಳಿಗೆ, ಕರುಗಳಿಗೆ ನೀರು ಕುಡಿಯಲು ಮುಕ್ತಗೊಳಿಸಬೇಕು. ಇಲ್ಲಿ ಯಾವುದೇ ರೀತಿಯಾದ ಅಡತಡೆಯನ್ನು ಕಂಪನಿ ಮಾಡಬಾರದು ಎಂದು ಕೋರ್ಟ್ ಆದೇಶವಿದೆ. ಈ ಆದೇಶವನ್ನು ಸರ್ಕಾರ ಮತ್ತು ಜಿಲ್ಲಾಡಳಿತವು ಜಾರಿಮಾಡದೆ, ಕೆಲ ಜನರು ಕಂಪನಿ ಜೊತೆ ಸೇರಿಕೊಂಡಿದ್ದಾರೆ. ಹಾಗಾಗಿ ಕಂಪನಿ ನಿರ್ಮಿಸಿರುವ ಕಂಪೌಂಡ್ ಅನ್ನು ಈ ಕೂಡಲೇ ತೆರವುಗೊಳಿಸಬೇಕು. ಅಲ್ಲಿರುವ ಕಂಪನಿಯ ಭದ್ರತಾ ಸಿಬ್ಬಂದಿಯ ದೌರ್ಜನ್ಯದ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಲ್ಲಿಯ ಜನ-ಜಾನುವಾರುಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸುತ್ತೇವೆ,” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಈ ಸಂಬಂಧ ಮುಖ್ಯಮಂತ್ರಿಯವರಿಗೂ ಮತ್ತು ಜಿಲ್ಲಾಧಿಕಾರಿಗೂ ಸಹ ಮನವಿ ಸಲ್ಲಿಸಿದ್ದರೂ, ತಮ್ಮ ಸಮಸ್ಯೆ ಕುರಿತು ಯಾರೂ ಗಮನಹರಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮ ಊರಿನ ಕೆರೆಗೆ ನಮ್ಮ ಹಕ್ಕು ಇದೆ. ಸರ್ಕಾರವೇ ನಮಗೆ ಮೋಸ ಮಾಡಿದರೆ ನಾವೆಲ್ಲ ಬೀದಿಪಾಲಾಗುತ್ತೇವೆ. ರೈತರಾದ ನಾವು ದುಡಿಯದೇ ಇದ್ದರೆ ಇವರೇನು ದುಡ್ಡನ್ನು ತಿಂದು ಬದುಕುತ್ತಾರೆಯೇ? ಸರ್ಕಾರಕ್ಕೆ ರೈತರ ಮೇಲೆ ಕರುಣೆ ಇಲ್ಲವೇ? ಸರ್ಕಾರ ನಡೆಸುವವರು ರೈತರ ಮಕ್ಕಳಲ್ಲವೇ? ಇವರಿಗೆ ಸರ್ಕಾರಿ ನೌಕರಿ ಬಂದ ಕೂಡಲೇ ದೊಡ್ಡ ಶ್ರೀಮಂತರಾಗಿಬಿಟ್ಟರೆಯೇ? ಇಂತಹ ಬಂಡರು ಹುಟ್ಟಿ ಹುಟ್ಟಿ ನಮ್ಮ ದೇಶ ಹಾಳಾಗಿ ಹೋಗಿದೆ,” ಎಂದು ರೈತರೊಬ್ಬರು ತಮ್ಮ ಆಕ್ರೋಶವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು.

ಇಂದಿನದು ಕೇವಲ ಸಾಂಕೇತಿಕ ಪ್ರತಿಭಟನೆ ಆಗಿದೆ. ಇದು ಮುಂದುವರಿಯುತ್ತದೆ. ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ರೈತರು ದೃಢಪಡಿಸಿದ್ದರು.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣಪ್ರಭಾವ ಲೆಕ್ಕಿಸದೆ ಬಂಧಿಸಬೇಕು | Janashakthi Media

Donate Janashakthi Media

Leave a Reply

Your email address will not be published. Required fields are marked *