ರಾಯಚೂರು : ಜಿಲ್ಲೆಯ ಸಿರವಾರ ತಾಲ್ಲೂಕಿನಲ್ಲಿ ಸುಮಾರು 5 ಪಿಯುಸಿ ಕಾಲೆಜುಗಳಿದ್ದು ಇಲ್ಲಿ ಹಲವಾರು ವರ್ಷಗಳಿಂದ ಸಾಕಷ್ಟು ಬಡ ವಿದ್ಯಾರ್ಥಿಗಳು ವ್ಯಾಸಂಗಮಾಡಿ ಮುಂದಿನ ತರಗತಿಗಳಿಗೆ ಹೋಗುತ್ತಿದ್ದಾರೆ. ಅಂದಾಜಿನ ಪ್ರಕಾರ ಕಾಲೇಜುಗಳಲ್ಲಿ 400 ಕ್ಕು ಹೆಚ್ಚು ವಿದ್ಯಾರ್ಥಿಗಳಿದ್ದು, ಪಿಯುಸಿ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು 50 ಕಿಲೋ ಮೀಟರ್ ದೂರದ ಮಾನವಿ ಪಟ್ಟಣಕ್ಕೆ ಹೋಗಿ ಪರೀಕ್ಷೆ ಬರೆಯುವ ಅನಿವಾರ್ಯತೆ ಸೃಷ್ಟಿಯಾಗಿದ್ದು ಇದು ಸಾಕಷ್ಟು ವಿದ್ಯಾರ್ಥಿನಿಯರು ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕಾರಣ ತಾಲ್ಲೂಕು ಮಟ್ಟದಲ್ಲಿ ಪ್ರಸಕ್ತ ಶೈಕ್ಷಣಿ ಸಾಲಿನಿಂದ ಪದವಿ ಪೂರ್ವ ಪೂರಕ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ SFI ಮತ್ತು DYFI ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಿರವಾರ ತಾಲ್ಲೂಕಿನ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನೇಕ ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಹಾಜರಾಗದೆ ಪರೀಕ್ಷೆಯನ್ನು ಬಿಟ್ಟಿರುವ ಸಾಕಷ್ಟು ಉದಾಹರಣೆಗಳು ಇರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಪೂರಕ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಬೀಡಿ ಕಾರ್ಮಿಕರ ಪರ‍್ಯಾಯ – ಪರಿಹಾರ – ಕನಿಷ್ಟ ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ
ಈ ಸಂದರ್ಭದಲ್ಲಿ SFI ಸಿರವಾರ ತಾಲೂಕು ಅಧ್ಯಕ್ಷರಾದ ಚಿದಾನಂದ ಕರಿಗೂಳಿ ಚಾಗಭಾವಿ, SFI ಮುಖಂಡರಾದ ಪರ್ವತ ರೆಡ್ಡಿ , ಅರುಣ್ ಕುಮಾರ್, DYFI ಮುಖಂಡರಾದ ವೀರೇಶ ಸ್ವಾಮಿ ಜಂಬಲದಿನ್ನಿ, ಯುವ ಮುಖಂಡರಾದ ಜೆ.ಪ್ರಕಾಶ, ಯಲ್ಲಪ್ಪ , ಹನುಮೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.