ಮಹೇಶ್ ಜೋಶಿ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಬಿಡುಗಡೆ ಕುರಿತ ಸಭೆಗೆ ಗೈರಾದ ಕಸಾಪ ಅಧ್ಯಕ್ಷ, ಸಮಾನ ಮನಸ್ಕರ ವೇದಿಕೆ ಆಕ್ರೋಶ ಜೋಶಿ

ಮಂಡ್ಯ: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತಂದಿರುವ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಬಿಡುಗಡೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಮರಣ ಸಂಚಿಕೆ ಅಧ್ಯಕ್ಷರಾದ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಗೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಗೈರಾದ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತೋಳಿಗೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪಕಾಶಗೌಡ, ಡಾ.ಮಹೇಶ್ ಆವರು ಮಂಡ್ಯ ಜಿಲ್ಲೆಗೆ ಗೌರವ ಕೊಡದೆ ಅಪಕೀರ್ತಿ ತಂದಿದ್ದಾರೆ. ಸಮ್ಮೇಳನ ಮುಗಿದು 5 ತಿಂಗಳಾದರೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಿಲ್ಲ, ಸಮ್ಮೇಳನಕ್ತ ತೆಗೆದುಕೊಂಡಿದ್ದ 2.50 ಕೋಟಿ ರೂ.ಗಳ ಲೆಕ್ಕವನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹೇಶ್‌ ಜೋಶಿ ಬರದಿದ್ದರೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಸಂಪೂರ್ಣ ಅಧಿಕಾರ ಜಿಲ್ಲಾ ಉಸ್ತುವಾರಿ ಸಚಿವ/ ಎನ್‌.ಚಲುವರಾಯಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳಿಗಿದೆ. ಕನ್ನಡ ನೆಲ-ಭಾಷೆ ಬಗ್ಗೆ ತಾತ್ಸಾರ ಮನೋಭಾವಹೊಂದಿರುವ ಹಾಗೂ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಮಹೇಶ್‌ ಜೋಶಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಅವರುನಡೆಸಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಸ್ವಾತಂತ್ರ ಘೋಷಿಸಿಕೊಂಡ ಬಲೂಚಿಸ್ತಾನ್‌

ಸಮಾವೇಶವು ಕಸಾಪ ಮಾಜಿ ರಾಜ್ಯಾಧ್ಯಕ್ಷರಾದ ಹಂಪ ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾಹಿತಿ ಗಳಾದ ಡಾ.ಸಿದ್ದರಾಮಯ್ಯ, ಸಿಪಿಕೆ, ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಮತ್ತಿತರರು ಭಾಗವಹಿಸಲಿದ್ದಾರೆ. ನಾಡಿನ
ಉದ್ದಗಲಕ್ಕೂ ಜೋಶಿ ವಿರುದ್ಧ ನಡೆಸಲಿರುವ ಹೋರಾಟಕ್ಕೆ ಮಂಡ್ಯ ನಾಂದಿಯಾಡಲಿದೆ ಎಂದು ಹೇಳಿದರು.

ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಮಹೇಶ್ ಜೋಶಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇನ್ನಿಲ್ಲದ ಹುನ್ನಾರ ನಡೆಸಿ, ಕಸಾಪ ಬೈಲಾವನ್ನೇ ತಿದ್ದುಪಡಿ ಮಾಡಿ ಜಿಲ್ಲೆ ಮತ್ತು ತಾಲ್ಲೂಕು ಕಸಾಪ ಅಧ್ಯಕ್ಷರೂ ಸೇರಿದಂತೆ ಎಲ್ಲರ ಅಧಿಕಾರವನ್ನೂ ಕಸಿದು ಏಕಚಕ್ರಾಧಿಪತಿಯಾಗಲು ಹೊರಟಿದ್ದಾರೆ. ಈ ಹಿಂದಿನ ಅಧ್ಯಕ್ಷರು ಭ್ರಷ್ಟಾಚಾರ ಮಾಡಿರಲಿಲ್ಲ. ಆದರೆ, ಇವರು ಭ್ರಷ್ಟಾಚಾರ ಎಸಗಿದ್ದು, ಸಮ್ಮೇಳನದ ಲೆಕ್ಕವನ್ನು ಇದುವರೆಗೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮೊದಲು ಅಧಿಕಾರ ಬಿಟ್ಟು ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಮಂಡ್ಯದಲ್ಲಿ ಸಮಾನ ಮನಸ್ಕರು ಮತ್ತು ಕನ್ನಡ ಪರ ಸಂಘಟನೆಗಳು ಒಗ್ಗೂಡಿ ಮಹೇಶ್ ಜೋಶಿಗೆ ಬುದ್ಧಿಕಲಿಸಲು ಹೋರಾಟ ನಡೆಸುತ್ತಿದ್ದೇವೆ. ಮಂಡ್ಯ ಜಿಲ್ಲೆಯ ಪ್ರೀತಿ, ಸಹಕಾರ ಮತ್ತು ಅನ್ನದ ಋಣವನ್ನು ಜೋಶಿ ಮರೆತಿದ್ದಾರೆ. ಪೊಲೀಸ್ ರಕ್ಷಣೆ ತೆಗೆದುಕೊಂಡು ಮಂಡ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಜನ ಇಡೀ ದೇಶವ್ಯಾಪಿ ಹೆಸರು ಗಳಿಸಿರುವವರು. ಘನತೆಗೆ ಕುಂದು ತರುವ ಕೆಲಸ ಮಾಡಿಲ್ಲ. ಜೋಶಿ ಅವರ ನಿಲುವು ಅಪಾಯ, ಇವರ ನಡವಳಿಕೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಅವರು ಯಾವ ಕಾರಣಕ್ಕೆ ಬಂದಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮಂಡ್ಯಕ್ಕೆ ಬರುವ ಮೊದಲು ತಮ್ಮ ಮೇಲಿನ ಎಲ್ಲ ಆಪಾದನೆಗಳು, ಕಳಂಕವನ್ನು ತೊಳೆದುಕೊಂಡು ಪರಿಶುದ್ಧವಾಗಿ ಬರಬೇಕು ಎಂದು ಆಗ್ರಹಿಸಿದರು.

ಮೇ 17ರಂದು ಬೃಹತ್ ಸಮಾವೇಶ:

ಮಹೇಶ್‌ ಜೋಶಿ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಇಡೀ ರಾಜ್ಯಾದ್ಯಂತ ಹೋರಾಟ ರೂಪಿಸಿದ್ದು, ಮೊದಲ ಭಾಗವಾಗಿ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮೇ 17ರಂದು ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಹೇಳಿದರು. ಮಂಡ್ಯ, ಹಾಸನ, ಮೈಸೂರು, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರದಿಂದ ಸಾವಿರಾರು ಮಂದಿ ಆಗಮಿಸಲಿದ್ದು, ಇದು ದೊಡ್ಡ ಆಂದೋಲನಕ್ಕೆ ನಾಂದಿ ಹಾಡಲಿದೆ ಎಂದರು.

ಶೀಘ್ರದಲ್ಲೇ ಬಿಡುಗಡೆ ಮಂಡ್ಯ:

ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು, ಸ್ಮರಣ ಸಂಚಿಕೆ ಬಿಡುಗಡೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಮೇ 14ರಂದು ಸಭೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರಿಂದ ದಿನಾಂಕ ನಿಗದಿಪಡಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾನ ಮನಸ್ಕರ ಮನಸ್ಕರ ವೇದಿಕೆಯ ಹನಕೆರೆ ನಾಗಪ್ಪ, ಸುಂಡಹಳ್ಳಿ ಮಹೇಶ್‌, ಕಾರಸವಾಡಿ ಮಹದೇವು, ಕೀಲಾರ ಸುರೇಶ್‌, ಕೀಲಾರ ಕೃಷ್ಣಗೌಡ, ವೆಂಕಟಗಿರಿಯಯ್ಯ, ಯೋಗಣ್ಣ, ಎಚ್‌.ಡಿ. ಜಯರಾಂ, ಸಿ.ಕುಮಾರಿ, ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಇತರರು ಹಾಜರಿದ್ದರು.

ಇದನ್ನೂ ನೋಡಿ: ಪ್ರೀತಿಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು Janashakthi Media

Donate Janashakthi Media

Leave a Reply

Your email address will not be published. Required fields are marked *