ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಲೀನ ವಿರೋಧಿಸಿ ಪ್ರತಿಭಟನೆ

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಲೀನ ಮಾಡಲು ಸರಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸಿ ರಾಜ್ಯದ್ಯಂತ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಗುರುವಾರ ರಾಜ್ಯವ್ಯಾಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪಿಯು ಉಪನ್ಯಾಸಕರು ಪ್ರತಿಭಟನೆ ನಡೆಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆ ಜತೆಗೆ ವಿಲೀನ ಮಾಡಲು ಸರಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘಗಳ ಒಕ್ಕೂಟ ಗುರುವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರ ಮೂಲಕ ಮುಖ್ಯಮಂತ್ರಿಗೆ ಪ್ರತಿಭಟನೆಯ ಬಳಿಕ  ಮನವಿ ಸಲ್ಲಿಸಿತು. ವಿಲೀನ ಕೈ ಬಿಡದೇ ಹೋದಲ್ಲಿ, ಒಕ್ಕೂಟವು  ಡಿ.1ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಪ್ರತಿಭಟನೆ ವೇಳೆ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳ ಪಿಯು ಉಪನಿರ್ದೇಶಕರಾದ ಆನಂದರಾಜು, ಒಕ್ಕೂಟಗಳ ಪದಾಧಿಕಾರಿಗಳಾದ ಎಸ್. ಆರ್.ವೆಂಕಟೇಶ್, ಎಂ.ಜಯಣ್ಣ, ಜಿ.ನಾಗಣ್ಣ, ನಂದೀಶ್ ಕುಮಾರ್ ಸೇರಿದಂತೆ ಇತರರು ಇದ್ದರು.

ಮನವಿ ಪತ್ರ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಎಚ್.ನಿಂಗೇಗೌಡ, “ಕೊಠಾರಿ ಆಯೋಗದ ಶಿಫಾರಸಿನಂತೆ ಪಿಯು ಹಂತವನ್ನು ರಾಜ್ಯದಲ್ಲಿ ಅಳವಡಿಸುವ ಸಲುವಾಗಿ ಪಿ.ಮಲ್ಲಿಕಾರ್ಜುನಪ್ಪ ನೇತೃತ್ವದ ಸಮಿತಿ ನೀಡಿದ ವರದಿಯ ಆಧಾರದ ಮೇಲೆ 1971ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಸ್ತಿತ್ವಕ್ಕೆ ಬಂದಿತು. ಇದು ರಾಷ್ಟ್ರದಲ್ಲೇ ಒಂದು ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನು ಹಂತ ಹಂತವಾಗಿ ವಿಲೀನ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಬಂಗಾರಪ್ಪ ಅವರ ಆಶಯದ ಫಲವಾಗಿ ರೂಪುಗೊಂಡಿರುವ ಇಲಾಖೆಯು ಸಾವಿನ ಅಂಚಿನಲ್ಲಿದೆ. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರೇ ಇಲಾಖೆಯ ಸಚಿವರಾಗಿದ್ದರೂ ಇಲಾಖೆಯನ್ನು ಸ್ವತಂತ್ರ ಗೊಳಿಸಲು ಪ್ರಯತ್ನಿಸುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

“ಪಿಯು ಇಲಾಖೆಯ ವಿಲೀನ ಕೈಬಿಡಬೇಕು. ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿಕೊಳ್ಳಬೇಕೆಂಬ ಸುತ್ತೋಲೆ ಹಿಂಪಡೆಯಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *