ನವದೆಹಲಿ : ‘ರಾಜಕಾರಣವನ್ನು ಅಪರಾಧೀಕರಣ ಮುಕ್ತಗೊಳಿಸುವ ಕಾರ್ಯವು ನಮ್ಮ ವ್ಯಾಪ್ತಿಯನ್ನು ಮೀರಿದ್ದಾಗಿದೆ. ಇದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ’ ಎಂದು ಕೇಂದ್ರ ಚುನಾವಣಾ ಆಯೋಗವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.
‘ರಾಜಕಾರಣವನ್ನು ಅಪರಾಧೀಕರಣ ಮುಕ್ತಗೊಳಿಸಲು ಆಯೋಗವು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೆಲ ಶಿಫಾರಸುಗಳನ್ನೂ ಮಾಡಿದೆ. ಆದರೆ, ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾಯ್ದೆಗೆ ತಿದ್ದುಪಡಿ ಅಗತ್ಯ’ ಎಂದು ಹೇಳಿತು.
ಈ ಸಂಬಂಧ ಲಿಖಿತ ಪ್ರತಿಕ್ರಿಯೆಯನ್ನು ದಾಖಲಿಸಿದ ಆಯೋಗವು, ‘2016ರ ಚುನಾವಣಾ ಸುಧಾರಣೆಗಳು’ ಕುರಿತ ಅಂಶಗಳನ್ನು 2004ರಲ್ಲಿ ಮಾಡಿದ್ದ ಶಿಫಾರಸುಗಳಲ್ಲಿಯೂ ಉಲ್ಲೇಖಿಸಿದೆ. ನಿರ್ದಿಷ್ಟ ಸ್ವರೂಪದ ಅಪರಾಧಗಳಿರುವ, ಕನಿಷ್ಠ 5 ವರ್ಷ ಸಜೆಗೆ ಒಳಗಾಗಿರುವ, ಆರೋಪಪಟ್ಟಿ ದಾಖಲಿಸಿರುವ, ಚುನಾವಣೆಗೆ ಕನಿಷ್ಠ ಆರು ತಿಂಗಳು ಮೊದಲು ಪ್ರಕರಣ ದಾಖಲಾಗಿರುವ ವ್ಯಕ್ತಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇರದಂತೆ ನಿಷೇಧ ಹೇರಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಆಯೋಗವು ತಿಳಿಸಿದೆ. ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಪ್ರತಿಕ್ರಿಯೆಯಾಗಿ ಆಯೋಗವು ಈ ಪ್ರಮಾಣಪತ್ರ ಸಲ್ಲಿಸಿತು. ಗಂಭೀರ ಪ್ರಕರಣಗಳಿರುವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಅರ್ಜಿದಾರರು ಕೋರಿದ್ದರು.
ಅತ್ಯಾಚಾರ, ಕೊಲೆ, ಅಪಹರಣ, ಸುಲಿಗೆ, ಲಂಚ, ಹಣ ಅಕ್ರಮ ವರ್ಗಾವಣೆ, ಆದಾಯ ಮೀರಿದ ಆಸ್ತಿ ಗಳಿಕೆ ಇತ್ಯಾದಿ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಿರುವ ವ್ಯಕ್ತಿಗೆ ಚುನಾವಣೆಗೆ ಸ್ಪರ್ಧಿಸುವುದರಿಂದ ನಿಷೇಧ ಹೇರಬೇಕು ಎಂದು ಕೋರಿದ ಅರ್ಜಿಗೆ ಸಂಬಂಧಿಸಿದಂತೆ ನಾಲ್ಕು ವಾರದಲ್ಲಿ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಸೂಚಿಸಿ ಕೇಂದ್ರಕ್ಕೆ ನೋಟಿಸ್ ಅನ್ನು ಕೋರ್ಟ್ ಜಾರಿ ಮಾಡಿತು.
ಇದನ್ನೂ ಓದಿ : ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಕೆಯುಡಬ್ಲ್ಯೂಜೆ
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಿತು. ‘ಭ್ರಷ್ಟಾಚಾರವು ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಕಾರಣ, ಇದು ಬಹುಮುಖ್ಯವಾದ ವಿಷಯ’ ಎಂದು ಅಭಿಪ್ರಾಯಪಟ್ಟಿದ್ದ ಪೀಠ, ಈ ಬಗ್ಗೆ ಪ್ರತಿಕ್ರಿಯೆ ದಾಖಲಿಸಲು ಫೆ. 26ರಂದು ಕೇಂದ್ರಕ್ಕೆ ಕೊನೆಯ ಅವಕಾಶ ನೀಡಿತ್ತು.