ಫ್ರಾನ್ಸ್ : ಪೆಂಶನ್ ಬದಲಾವಣೆಗಳ ರದ್ದಿಗೆ ಪಟ್ಟು ಹಿಡಿದಿರುವ ಕಾರ್ಮಿಕರು

ಫ್ರಾನ್ಸ್ ನಲ್ಲಿ ಅಧ‍್ಯಕ್ಷ ಮ್ಯಾಕ್ರಾನ್ ಜಿದ್ದಿನಿಂದ ತರಲು ಹೊರಟಿರುವ ಪೆಂಶನ್ ಬದಲಾವಣೆಗಳನ್ನು ರದ್ದು ಮಾಡಬೇಕೆಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಏಪ್ರಿಲ್ 6 ರಂದು ನಡೆದ ಪ್ರಮುಖ ದೇಶವ್ಯಾಪಿ ಪ್ರತಿಭಟನೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದರು. ಹಿಂದಿನ ದಿನ ಟ್ರೇಡ್ ಯೂನಿಯನ್ ನಾಯಕರು ಮತ್ತು ಪ್ರಧಾನಿ ಬೋರ್ನೆ ನಡುವೆ ಮಾತುಕತೆಗಳು ವಿಫಲವಾದ ಮೇಲೆ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ದೇಶವ್ಯಾಪಿ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಪೋಲಿಸ್ ದಮನವನ್ನು ಹರಿಯ ಬಿಟ್ಟಿತು. ದೇಶವ್ಯಾಪಿ 111 ಜನರನ್ನು ಬಂಧಿಸಲಾಯಿತು.


ಪ್ರತಿಭಟನೆಯ ನಂತರ ಸಿಜಿಟಿ (ಪ್ರಮುಖ ಫ್ರೆಂಚ್ ಕೇಂದ್ರೀಯ ಟ್ರೇಡ್ ಯೂನಿಯನ್) ಪೆಂಶನ್ ಬದಲಾವಣೆಗಳನ್ನು ಸಾರಾಸಗಟಾಗಿ ಹಿಂತೆಗೆಯಬೇಕು. ಅಷ್ಟರವರೆಗೆ ಹೋರಾಟ ಮುಂದುವರೆಯುತ್ತದೆ. ಎಪ್ರಿಲ್ 13ರಂದು ಇನ್ನೊಂದು ಸಾರ್ವತ್ರಿಕ ಮುಷ್ಕರ ಮತ್ತು ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಏಪ್ರಿಲ್ 13ರಂದು ಸಭೆ ಸೇರಿ ಮ್ಯಾಕ್ರಾನ್ ಸರಕಾರ ತಂದಿರುವ ಪೆಂಶನ್ ಬದಲಾವಣೆಗಳು ಸಂವಿಧಾನ-ಬದ್ಧವಾಗಿವೆಯೇ ಎಂದು ಸಾಂವಿಧಾನಿಕ ಕಮಿಶನ್ ಪರಿಶೀಲಿಸಲಿದೆ. ಅದು ದೇಶದ ನಾಗರಿಕರ, ಕಾರ್ಮಿಕರ ಕೋಪ, ಆಕ್ರೋಶಗಳನ್ನು ಗಣನೆಗೆ \ ತೆಗೆದುಕೊಳ್ಳಲು ಕರೆ ನೀಡಿದೆ. ಈ ಕರೆ ಮತ್ತು ಪ್ರತಿಭಟನೆಗೆ NUPES ಎಂದು ಕರೆಯಲಾಗುವ ಎಡ ರಂಗ ಸಹ ಪೂರ್ಣ ಬೆಂಬಲ ನೀಡಿದೆ.

ನಿವೃತ್ತಿ ವಯಸ್ಸನ್ನು ಮತ್ತು ಪೂರ್ಣ ಪೆಂಶನ್ ಪಡೆಯಲು ಮಾಡಬೇಕಾಗಿರುವ ಕೆಲಸದ ವರ್ಷಗಳನ್ನು ಮ್ಯಾಕ್ರಾನ್ ಪ್ರಸ್ತಾವಿಸಿರುವ ಪೆಂಶನ್ ಬದಲಾವಣೆಗಳು ಹೆಚ್ಚಿಸಿದ್ದು ಇದು ಕಾರ್ಮಿಕರ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದೆ. ಎಫ್ರಿಲ್ 6 ರಂದು ನಡೆದ ಪ್ರತಿಭಟನೆಯು ಜನವರಿ 19ರ ನಂತರ ನಡೆಯುತ್ತಿರುವ ಪ್ರಮುಖ ದೇಶವ್ಯಾಪಿ ಹೋರಾಟದಲ್ಲಿ 11ನೆಯದು. ಆದರೂ ಈ ಪ್ರತಿಭಟನೆಗಳನ್ನು ನಿರ್ಲಕ್ಷಿಸುವ ದಮನಿಸುವ ಪ್ರಯತ್ನವನ್ನು ಮ್ಯಾಕ್ರಾನ್ ಮಾಡಿದ್ದು ಪೆಂಶನ್ ಬದಲಾವಣೆಗಳನ್ನು ತಂದೇ ತರಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ.

ಆದರೆ ದೇಶವ್ಯಾಪಿ ಪ್ರತಿಭಟನೆಯಿಂದಾಗಿ ಪಾರ್ಲಿಮೆಂಟಿನಲ್ಲಿ ಆಳುವ ರಂಗದ ಹಲವು ಸದಸ್ಯರು ಸಹ ಈ ಕಾನೂನನ್ನು ವಿರೋಧಿಸಿ ಅದು ಬಿದ್ದು ಹೋಗಬಹುದೆಂಬ ಆತಂಕದಿಂದ ಮ್ಯಾಕ್ರಾನ್ ಪಾರ್ಲಿಮೆಂಟನ್ನು ಬೈ ಪಾಸ್ ಮಾಡಿದ್ದಾರೆ. ಇದಕ್ಕಾಗಿ ಸಂವಿಧಾನದ ಕಲಮು 49.3 ನ್ನು ಬಳಸಿ ಕಾನೂನನ್ನು ಪಾರ್ಲಿಮೆಂಟಿನ ಸಮ್ಮತಿಯ ಅಗತ್ಯವಿಲ್ಲದೆ ಪಾಸು ಮಾಡಿಸಿಕೊಂಡಿದ್ದಾರೆ. ಅದು ಸಂವಿಧಾನ ಬದ್ಧವೇ ಎಂದು ಎಂದು ಸಾಂವಿಧಾನಿಕ ಕಮಿಶನ್ ನಿರ್ಧರಿಸಲಿದೆ. ಅದಕ್ಕೆ ಜನರ ಕಾರ್ಮಿಕರ ಅಭಿಪ್ರಾಯ ತಿಳಿಸಲು ಎಪ್ರಿಲ್ 13ರ ಪ್ರತಿಭಟನೆಗೆ ಕರೆ ಕೊಡಲಾಗಿದೆ. ಅದೂ ಸಂವಿಧಾನ-ಬದ್ಧವೆಂದು ತೀರ್ಪು ಕೊಟ್ಟರೆ ಬಹುಶಃ ಪ್ರತಿಭಟನೆ ತೀವ್ರ ಸ್ವರೂಪ ತೆಗೆದುಕೊಳ್ಳಬಹುದು. ಈಗಿನ ಫ್ರೆಂಚ್ ರಾಜಕೀಯ ವ್ಯವಸ್ಥೆಯ ಮೇಲೆ ಜನತೆಯ ವಿಶ್ವಾಸ ಪೂರ್ತಿಯಾಗಿ ಬಿದ್ದು ಹೋಗಬಹುದು. ಇದು ತೀವ್ರ ದೇಶವ್ಯಾಪಿ ರಾಜಕೀಯ ಬಿಕ್ಕಟ್ಟಿಗೆ ಮತ್ತು ಬದಲಾವಣೆಗೆ ಕಾರಣವಾಗಬಹುದು.

Donate Janashakthi Media

Leave a Reply

Your email address will not be published. Required fields are marked *