ವಿವಿಯ ರಿಜಿಸ್ಟ್ರಾರ್‌ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್‌ ಗೆ 35 ಲಕ್ಷ ರೂ. ವಂಚನೆ

ಬೆಂಗಳೂರು: ಮತ್ತೊಂದು ವಂಚನೆ ಪ್ರಕರಣ ಬೆಂಗಳೂರು ವಿಶ್ವವಿದ್ಯಾಲಯದ ಹೆಸರಲ್ಲಿ ದಾಖಲಾಗಿದ್ದು, ವಿವಿಯ ರಿಜಿಸ್ಟ್ರಾರ್‌ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್‌ ಒಬ್ಬರಿಗೆ 35 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ದೂರು ದಾಖಲಾಗಿದೆ.

ಮೂಲಗಳ ಪ್ರಕಾರ ನಿವೃತ್ತ ಪ್ರಾಧ್ಯಾಪಕ ಆರ್‌.ಕೆ.ಸೋಮಶೇಖರ್‌ (67) ಎಂಬುವವರಿಗೆ ವಂಚನೆ ಮಾಡಲಾಗಿದ್ದು, ಈ ಸಂಬಂಧ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಮೇರೆಗೆ ಹೊರಮಾವು ನಂದನಂ ಲೇಔಟ್‌ ನಿವಾಸಿ ಬಿ.ಜಿ.ರವಿಕುಮಾರ್‌ಎಂಬುವವರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ: “ಸ್ವತಂತ್ರ ಮಾಧ್ಯಮ ದನಿಯೆತ್ತದಂತೆ ಮಾಡುವುದು ಪ್ರಜಾಪ್ರಭುತ್ವವನ್ನು ಕಾಪಾಡುವುದಿಲ್ಲ, ಅದನ್ನು ದುರ್ಬಲಗೊಳಿಸುತ್ತದೆ”

ದೂರುದಾರ ಆರ್‌.ಕೆ.ಸೋಮಶೇಖರ್‌ 1983ರಿಂದ ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದು, 2019ರಲ್ಲಿ ನಿವೃತ್ತರಾಗಿದ್ದರು. ಈ ನಡುವೆ 2010ರಲ್ಲಿ ಸ್ನೇಹಿತರ ಮೂಲಕ ಆರೋಪಿ ಬಿ.ಜಿ.ರವಿಕುಮಾರ್‌ ಪರಿಚಯವಾಗಿ ಬಳಿಕ ಸ್ನೇಹಿತರಾಗಿದ್ದರು. 2015ರಲ್ಲಿ ರವಿಕುಮಾರ್‌ ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ. ಈಗಿನ ಸರ್ಕಾರದ ಹಲವರು ಪರಿಚಯರಿದ್ದಾರೆ.

ನಿಮಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್‌ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ನಂಬಿಸಿದ್ದ. ಬಳಿಕ ಅದಕ್ಕಾಗಿ 50 ಲಕ್ಷ ರೂ. ಖರ್ಚಾಗಲಿದೆ ಎಂದು ರವಿಕುಮಾರ್‌ ಹೇಳಿದ್ದಾರೆ. ಬಳಿಕ ಇಬ್ಬರೂ ಮಾತುಕತೆ ನಡೆಸಿ 35 ಲಕ್ಷ ರೂ.ಗೆ ತೀರ್ಮಾನಿಸಲಾಗಿತ್ತು. ಕೆಲಸ ಆಗದಿದ್ದಲ್ಲಿ ಹಣ ವಾಪಸ್‌ ಕೊಡುವುದಾಗಿಯೂ ರವಿಕುಮಾರ್‌ ಹೇಳಿದ್ದ ಎಂದು ಸೋಮಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ.

ಅದರಂತೆ ಸೋಮಶೇಖರ್‌ 2015ರ ಜುಲೈನಲ್ಲಿ ವಿವಿಧ ಹಂತಗಳಲ್ಲಿ ರವಿಕುಮಾರ್‌ಗೆ ನಗದು ರೂಪದಲ್ಲಿ ಒಟ್ಟು 35 ಲಕ್ಷ ರೂ. ನೀಡಿದ್ದಾರೆ. 6 ತಿಂಗಳೊಳಗೆ ಕೆಲಸ ಆಗಲಿದೆ ಎಂದು ರವಿಕುಮಾರ್‌ ಹೇಳಿದ್ದರು. ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಸೂಚಿಸಿದ್ದರು. ಆರು ತಿಂಗಳ ಬಳಿಕ ವಿಚಾರಿಸಿದಾಗ ಇಲ್ಲದ ಸಬೂಬು ಹೇಳಿ ಆರೋಪಿ ರವಿಕುಮಾರ್ ದಿನ ದೂಡುತ್ತಿದ್ದ.

ಅಷ್ಟರಲ್ಲಿ ತಾನು ಸೇವೆಯಿಂದ ನಿವೃತ್ತನಾಗಿದ್ದು, ತಮ್ಮ ಹಣ ವಾಪಸ್‌ ನೀಡುವಂತೆ ಕೇಳಿದ್ದೆ. ಒಂದು ವರ್ಷದ ಸಮಯ ಕೊಡಿ ಎಂದ ರವಿಕುಮಾರ್‌ ನಂತರವೂ ಹಣ ವಾಪಸ್‌ ನೀಡಿಲ್ಲ. 2024ರ ಡಿಸೆಂಬರ್‌ನಲ್ಲಿ ಕರೆ ಮಾಡಿ ಹಣ ವಾಪಸ್‌ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಸೋಮಶೇಖರ್ ದೂರಿದ್ದಾರೆ.

ಈ ಮಧ್ಯೆ 2025ರ ಮಾ.9ರಂದು ವಿಜಯ ನಗರದ ಸರ್ವಿಸ್‌ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಹೋಟೆಲ್‌ಗೆ ಕರೆಸಿಕೊಂಡಿದ್ದ ರವಿಕುಮಾರ್‌, ಕಾರಿನಲ್ಲಿ ಕೂರಿಸಿಕೊಂಡು ಚಾಕು ತೆಗೆದು ಕುತ್ತಿಗೆಗೆ ಹಿಡಿದು ಇನ್ನು ಮುಂದೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದರಾಜನಗರ ಠಾಣೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಒಳ ಮೀಸಲಾತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಿಕಾಗೋಷ್ಠಿ Janashakthi Media

Donate Janashakthi Media

Leave a Reply

Your email address will not be published. Required fields are marked *