ಬೆಳಗಾವಿ : ಬರದಿಂದ 48 ಲಕ್ಷ ಹೆಕ್ಟೇರ್‌ನಲ್ಲಿನ ಬೆಳೆ ಹಾನಿಯಾಗಿದ್ದು, ಸರಕಾರದಿಂದ ಮೊದಲ ಕಂತಾಗಿ 2000 ರೂ. ಪರಿಹಾರವನ್ನು ನೀಡುವ ಸಲುವಾಗಿ ಇದೇ ವಾರದಲ್ಲೇ ಡಿಬಿಟಿ ಮೂಲಕ ಹಣ ಪಾವತಿಸಲಾಗುವುದು. ಇದಕ್ಕೆ ಚಳ್ಳಕೆರೆ ತಾಲೂಕಿನಲ್ಲಿ ಚಾಲನೆ ನೀಡಲಾಗುವುದು ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬರದ ಮೇಲಿನ ಚರ್ಚೆಗೆ ಉತ್ತರ ನೀಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರಿಗೆ ನೆರವು ನೀಡಲು ಹಾಗೂ ಜನರ ಗುಳೆ ತಪ್ಪಿಸಲು ಯೋಜಿತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ತಿಳಿಸಿದರು. ರೈತರ
ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 1 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 236 ತಾಲೂಕುಗಳ ಪೈಕಿ ಮೂರು ಹಂತಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಪತ್ರ ಬರೆದು ಎನ್‌ಡಿಆರ್‌ಎಫ್ ಅಡಿಯಲ್ಲಿ 18,171 ಕೋಟಿ ರೂ. ನೆರವು ನೀಡುವಂತೆ ಕೋರಲಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ರಾಜ್ಯದ 13 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿ, ರಾಜ್ಯ ಸರ್ಕಾರ ನೀಡಿರುವ ವರದಿಯು ವಸ್ತುಸ್ಥಿತಿಯಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಬರ ಪರಿಹಾರ ಕಡಿಮೆ ಮಾಡಿದ್ದಕ್ಕೆ ಆಕ್ರೋಶ
ರಾಜ್ಯದಲ್ಲಿ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರ 2000 ರೂಪಾಯಿ ಬರ ಪರಿಹಾರ ನೀಡಲು ಮುಂದಾಗಿದೆ. ಆದರೆ ಇದಕ್ಕೆ ಹಾವೇರಿ ಜಿಲ್ಲೆ ಸವಣೂರು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸರ್ಕಾರ ರೈತರಿಗೆ ಪರಿಹಾರವಾಗಿ 2 ಸಾವಿರ ರೂಪಾಯಿ ನೀಡುವುದು ಬೇಡ, ತಾವೇ ಒಂದು ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ನೀಡುವುದಾಗಿ ಆಕ್ರೋಶ ಹೊರಹಾಕಿದ್ದಾರೆ. ನಂತರ ಐವತ್ತಕ್ಕೂ ಅಧಿಕ ರೈತರು ತಮ್ಮ ಕೈಯಲ್ಲಿ 500 ಮುಖಬೆಲೆಯ ನೋಟುಗಳನ್ನು ಹಿಡಿದು ಅಣುಕು ಪ್ರದರ್ಶನ ಮಾಡಿದರು.
ಇದನ್ನೂ ಓದಿ : ಕಲಮು 370 ರದ್ಧತಿಯನ್ನು ಎತ್ತಿ ಹಿಡಿದಿರುವ ತೀರ್ಪು ಕಳವಳಕಾರಿ – ಸಿಪಿಐ(ಎಂ) ಪೊಲಿಟ್‍ಬ್ಯುರೊ
ಮುಂಗಾರು ಪೂರ್ವ ಹಿನ್ನೆಲೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಲಾಗಿತ್ತು. ಆಗ ಮಳೆ ಕೈಕೊಟ್ಟಿತ್ತು. ಮುಂಗಾರು ಪೂರ್ವ ಕೈಕೊಟ್ಟಿದ್ದರಿಂದ ಮತ್ತೆ ಮುಂಗಾರು ಮಳೆಗೆ ಬಿತ್ತನೆ ಮಾಡಲಾಯಿತು. ಆಗಲೂ ವರುಣನ ಅವಕೃಪೆಯಿಂದ ಇದ್ದ ಬೆಳೆಯನ್ನು ಕಳೆದುಕೊಳ್ಳಬೇಕಾಯಿತು. ಕೊನೆಯ ಪಕ್ಷ ಹಿಂಗಾರು ಬೆಳೆಗೆ ಜಮೀನು ಸಿದ್ಧಪಡಿಸಿಟ್ಟುಕೊಳ್ಳಲಾಯಿತು. ಆದರೆ ಹಿಂಗಾರು ಕೂಡ ಕೈಕೊಟ್ಟಿತು. ಸದ್ಯ ಒಂದು ಎಕರೆಗೆ ಬಿತ್ತನೆ ಮಾಡಲು ಪ್ರತಿಯೊಬ್ಬ ರೈತರು 10 ಸಾವಿರದಿಂದ ಹಿಡಿದು 20 ಸಾವಿರದವರೆಗೆ ಹಣ ಖರ್ಚು ಮಾಡಿದ್ದೇವೆ. ರೈತರ
ಗೊಬ್ಬರ ಆಳುಹೂಳು ಎಂದು ಎಕರೆಗೆ ಸುಮಾರು 25 ಸಾವಿರ ರೂಪಾಯಿ ಹಣ ಖರ್ಚು ಮಾಡಿದ್ದೇವೆ ಎಂದರು. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿವೆ. ಆದರೆ ಸರ್ಕಾರ ತಮಗೆ 2 ಸಾವಿರ ರೂಪಾಯಿ ಹಾಕಲು ಮುಂದಾಗಿರುವುದು ತೀವ್ರ ಬೇಸರ ತರಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ರೈತರೆಲ್ಲ ಸೇರಿ ತಲಾ ಒಂದೊಂದು ಸಾವಿರ ರೂಪಾಯಿ ಸೇರಿಸಿ ತಹಶಿಲ್ದಾರ್‌ಗೆ ಹಣ ನೀಡಲು ಮುಂದಾದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಭಿಕ್ಷುಕರಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಕನಿಷ್ಠ ಪಕ್ಷ ಎಕರೆಗೆ 20 ರಿಂದ 25 ಸಾವಿರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು. ಅಲ್ಲದೆ ರೈತರು ಈ ರೀತಿ ಕೂಡಿಸಿದ ಹಣವನ್ನು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ನೀಡಲು ಮುಂದಾದರು. ಆದರೆ ಹಣ ಪಡೆಯದ ಸವಣೂರು ತಹಶಿಲ್ದಾರ್, ರೈತರಿಗೆ ಅಧಿಕ ಪ್ರಮಾಣದ ಪರಿಹಾರ ವಿತರಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ವಿಡಿಯೋ ನೋಡಿ : ವೇತನವೂ ಇಲ್ಲ, ಮೂಲ ಸೌಲಭ್ಯವೂ ಇಲ್ಲ : ಕೇಂದ್ರ ಪುರಸ್ಕೃತ ಯೋಜನೆಗಳ ನೌಕರರ ಗೋಳು ಕೇಳುವವರು ಯಾರು? ರೈತರ