ಕಲಮು 370 ರದ್ಧತಿಯನ್ನು ಎತ್ತಿ ಹಿಡಿದಿರುವ ತೀರ್ಪು ಕಳವಳಕಾರಿ – ಸಿಪಿಐ(ಎಂ) ಪೊಲಿಟ್‍ಬ್ಯುರೊ

ಐವರು ನ್ಯಾಯಾಧೀಶರ ಪೀಠದ ಪ್ರಧಾನ ತೀರ್ಪು ಮತ್ತು 2 ಸಮ್ಮತಿ ವ್ಯಕ್ತಪಡಿಸುವ ತೀರ್ಪುಗಳ ಆಮೂಲಾಗ್ರ ಅಧ್ಯಯನದ ನಂತರವೇ ಈ ಬಗ್ಗೆ ಒಂದು ವಿವರವಾದ ಸ್ಪಂದನೆ ನೀಡಲು ಸಾಧ‍್ಯವಾದರೂ, ಮೇಲ್ನೋಟಕ್ಕೇ ಈ ತೀರ್ಪು ನಮ್ಮ ಸಂವಿಧಾನದ ಒಕ್ಕೂಟ ರಚನೆಗೆ ಗಂಭೀರ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು “ಸಮಗ್ರೀಕರಣ”ದ ಹೆಸರಿನಲ್ಲಿ ಮತ್ತು “ರಾಷ್ಟ್ರೀಯ ಭದ್ರತೆ” ಯನ್ನು ಉಲ್ಲೇಖಿಸಿ ಏಕಘಟಕ ಪ್ರಭುತ್ವ ರಚನೆಯನ್ನು ಬಲಪಡಿಸುವ ಒಲವು ತೋರುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಸಂವಿಧಾನ ದ ಕಲಮು 370 ರ ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಸರ್ಜನೆಗೆ ಸವಾಲು ಹಾಕಿದ ಅರ್ಜಿಗಳನ್ನು ತಳ್ಳಿಹಾಕುವ ಸುಪ್ರೀಂ ಕೋರ್ಟಿನ ತೀರ್ಪು ಕಳವಳಕಾರಿಯಾಗಿದೆ, ಸಂವಿಧಾನದ ಮೂಲಭೂತ ಲಕ್ಷಣಗಳಲ್ಲಿ ಒಂದಾದ ಒಕ್ಕೂಟ ರಚನೆಯ ಮೇಲೆ ಇದು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಭಾರತಕ್ಕೆ ಸೇರ್ಪಡೆಯ ದಸ್ತಾವೇಜಿಗೆ ಸಹಿ ಹಾಕಿದ ನಂತರ, ಜಮ್ಮು ಮತ್ತು ಕಾಶ್ಮೀರ ಯಾವುದೇ ಸಾರ್ವಭೌಮತ್ವದ ಅಂಶಗಳನ್ನು ಉಳಿಸಿಕೊಂಡಿರುವುದಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರ ಸಂವಿಧಾನವು ಅನವಶ್ಯಕವಾಗುತ್ತದೆ ಎಂದು ತೀರ್ಪು ಹೇಳಿದೆ.ಆದರೆ, ಈಗ ರದ್ದುಗೊಳಿಸಲಾದ 370 ನೇ ವಿಧಿಯಲ್ಲಿ ಒಳಗೊಂಡಿರುವ ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳುವ ಷರತ್ತಿನ ಮೇಲೆಯೇ ಸೇರ್ಪಡೆಯ ದಸ್ತಾವೇಜಿಗೆ ಸಹಿ ಹಾಕಿದ್ದು ತಾನೇ ಎಂದು ಸಿಪಿಐ(ಎಂ) ಪ್ರಶ್ನಿಸಿದೆ.

ಜಮ್ಮು ಮತ್ತು ಕಾಶ್ಮೀರ ಭಾರತೀಯ ಒಕ್ಕೂಟದ ಇತರ ಯಾವುದೇ ರಾಜ್ಯಗಳಂತೆಯೇ ಎಂದು ತೀರ್ಪು ಘೋಷಿಸುತ್ತದೆ, ಈ ಮೂಲಕ ಈಶಾನ್ಯ ರಾಜ್ಯಗಳು ಮತ್ತು ಇತರ ಕೆಲವು ಪ್ರದೇಶಗಳಿಗೆ ಕಲಮು 371 ರ ವಿವಿಧ ಅಂಶಗಳ ಅಡಿಯಲ್ಲಿ ನೀಡಲಾದ ವಿಶಿಷ್ಟ ಲಕ್ಷಣಗಳಿಂದಲೂ ಅದನ್ನು ವಂಚಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳಮಟ್ಟಕ್ಕೆ ಇಳಿಸಿರುವುದರ ಸರಿ-ತಪ್ಪುಗಳನ್ನು ಪರಿಶೀಲಿಸಲು ಹೋಗದ ಈ ತೀರ್ಪು ಸಾಲಿಸಿಟರ್ ಜನರಲ್ ರಾಜ್ಯದ ಸ್ಥಾನಮಾನಕ್ಕೆ ಮರಳುವ ಭರವಸೆ ನೀಡಿದ್ದಾರೆ ಎಂದು ಹೇಳಿ ತಪ್ಪಿಸಿಕೊಂಡಿದೆ. ಅದೇ ಸಮಯದಲ್ಲಿ, ಲಡಾಖ್ ನ್ನು ಒಂದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರಚಿಸುವುದು ಊರ್ಜಿತ ಎಂದು ಎತ್ತಿಹಿಡಿಯಲಾಗಿದೆ. ಅಂದರೆ, ಮರಳುವುದು ಮೂಲ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅಲ್ಲ, ಅದರ ಒಂದು ಭಾಗಕ್ಕೆ ಮಾತ್ರ, ಅದೂ ಕೇವಲ ಕಾಗದದ ಮೇಲಿನ ಭರವಸೆಯಾಗಿ ಉಳಿದಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ವಿಚಿತ್ರವೆಂದರೆ, ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ಸಪ್ಟೆಂಬರ್ 30, 2024 ರ ಒಳಗೆ ಚುನಾವಣೆಗಳನ್ನು ನಡೆಸಲು ನಿರ್ದೇಶಿಸುತ್ತದೆ. ಹೀಗೆ ಅದು ಜಮ್ಮು ಮತ್ತು ಕಾಶ್ಮೀರದ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ದೀರ್ಘ ಅವಕಾಶವನ್ನೇ ನೀಡಿದೆ.

ಒಂದು ರಾಜ್ಯವು ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿರುವಾಗ ಮತ್ತು ಅದರ ರಾಜ್ಯದ ಸ್ಥಾನಮಾನವನ್ನು ವಿಸರ್ಜಿಸಿದಾಗ, ಒಂದು ಚುನಾಯಿತ ಶಾಸನಸಭೆಯ ಅನುಪಸ್ಥಿತಿಯಲ್ಲಿ ರಾಷ್ಟ್ರಪತಿಗಳಿಂದ ನೇಮಕಗೊಂಡ ರಾಜ್ಯಪಾಲರ ಸಮ್ಮತಿಯನ್ನು ಪರ್ಯಾಯವಾಗಿ ತೆಗೆದುಕೊಳ್ಳಬಹುದೇ? ಇದು ಕೂಡ ಎಲ್ಲಾ ಇತರ ರಾಜ್ಯಗಳಿಗೆ ಗಂಭೀರ ಪರಿಣಾಮಗಳನ್ನು ಹೊಂದಿದೆ. ಅಲ್ಲಿಯೂ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಿ, ಅದರ ಗಡಿಗಳನ್ನು ಬದಲಾಯಿಸಬಹುದು ಅಥವಾ ರಾಜ್ಯದ ಸ್ಥಾನ ಮಾನವನ್ನು ವಿಸರ್ಜಿಸಬಹುದು ಎಂದು ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ.

ಸಂವಿಧಾನದ ಕಲಮು 3 ರ ಅಡಿಯಲ್ಲಿನ ನಿಬಂಧನೆಯು ಯಾವುದೇ ರಾಜ್ಯದ ಮರುಸಂಘಟನೆಗಾಗಿ ಮಸೂದೆಯನ್ನು ಸಂಬಂಧಿಸಿದ ರಾಜ್ಯದ ಶಾಸನ ಸಭೆಗೆ ಅದರ ಅಭಿಪ್ರಾಯವನ್ನು ಪಡೆಯಲು ಕಳಿಸಬೇಕು ಎಂದು ವಿಧಿಸುತ್ತದೆ. ಆದರೆ ಈ ತೀರ್ಪು ಹೊಸ ರಾಜ್ಯಗಳ ರಚನೆ, ಅಸ್ತಿತ್ವದಲ್ಲಿರುವ ರಾಜ್ಯಗಳ ಪ್ರದೇಶಗಳು, ಗಡಿಗಳು ಅಥವಾ ಹೆಸರುಗಳ ಬದಲಾವಣೆ ಮಾಡಲು ಏಕಪಕ್ಷೀಯವಾಗಿ ಕ್ರಮಗಳನ್ನು ಕೈಗೊಳ್ಳಬಹುದೆಂದು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿ ತೊಂದರೆಗಳ ಪೆಟ್ಟಿಗೆಯನ್ನೇ ತೆರೆದು ಕೊಡುತ್ತಿದೆ. ಇದು ಒಕ್ಕೂಟತತ್ವ ಮತ್ತು ಚುನಾಯಿತ ರಾಜ್ಯ ಶಾಸನಸಭೆಗಳ ಹಕ್ಕುಗಳನ್ನು ಗಂಭೀರವಾಗಿ ದುರ್ಬಲಗೊಳಿಸಲು ದಾರಿ ಮಾಡಿ ಕೊಡಬಹುದು ಎಂದು ಸಿಪಿಐ(ಎಂ) ಆತಂಕ ವ್ಯಕ್ತಪಡಿಸಿದೆ.

ಈ ಐವರು ನ್ಯಾಯಾಧೀಶರ ಪೀಠದ ಪ್ರಧಾನ ತೀರ್ಪು ಮತ್ತು 2 ಸಮ್ಮತಿ ವ್ಯಕ್ತಪಡಿಸುವ ತೀರ್ಪುಗಳ ಆಮೂಲಾಗ್ರ ಅಧ್ಯಯನದ ನಂತರವೇ ಈ ಬಗ್ಗೆ ಒಂದು ವಿವರವಾದ ಸ್ಪಂದನೆ ನೀಡಲು ಸಾಧ‍್ಯ. ಆದಾಗ್ಯೂ, ಈ ತೀರ್ಪು ನಮ್ಮ ಸಂವಿಧಾನದ ಒಕ್ಕೂಟ ರಚನೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು “ಸಮಗ್ರೀಕರಣ”ದ ಹೆಸರಿನಲ್ಲಿ ಮತ್ತು “ರಾಷ್ಟ್ರೀಯ ಭದ್ರತೆ” ಯನ್ನು ಉಲ್ಲೇಖಿಸಿ ಏಕಘಟಕ ಪ್ರಭುತ್ವ ರಚನೆಯನ್ನು ಬಲಪಡಿಸುವ ಒಲವು ತೋರುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

 

Donate Janashakthi Media

Leave a Reply

Your email address will not be published. Required fields are marked *