ಬೆಂಗಳೂರು : ಸಮುದಾಯ ಸಂಘಟನೆಯ ನಾಯಕ, ನಿವೃತ್ತ ಉಪನ್ಯಾಸಕ ಪ್ರೊ.ಟಿ.ವೆಂಕಟೇಶ ಮೂರ್ತಿ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಮುದಾಯ ಸಂಘಟನೆ ಸೇರಿದಂತೆ, ಜನಪರ ಚಳುವಳಿಯ ನಾಯಕರು, ಸಾಹಿತಿಗಳು, ಚಿಂತಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಆಚಾರ್ಯ ಪಾಠ ಶಾಲಾ (ಎಪಿಎಸ್) ಕಾಲೇಜಿನಲ್ಲಿ ದೀರ್ಘ ಕಾಲ ಪಾಠ ಮಾಡಿದ್ದ ಟಿ.ವೆಂಕಟೇಶ ಮೂರ್ತಿಯವರು ಕಾಲೇಜು ಶಿಕ್ಷಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಬೆಂಗಳೂರು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ಮುಖಂಡರಾಗಿ ಬಹಳಷ್ಟು ಕೆಲಸ ಮಾಡಿದವರು. BUCTA, FUCTAK ಮತ್ತು AIFUCTO ನ ಶಿಕ್ಷಕರ ಸಂಘಟನೆಯ ನಾಯಕರಾಗಿ ಕೆಲಸ ಮಾಡಿ ಶಿಕ್ಷಕ, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಎಪಿಎಸ್ ಪಿಯು ಕಾಲೇಜಿನ ಪ್ರಾಂಶಿಪಾಲರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಟಿ. ವೆಂಕಟೇಶ ಮೂರ್ತಿಯವರು, ಬೆಂ.ವಿವಿ.ಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಸಮುದಾಯ ಸಂಘಟನೆಯ ಬೆಂಗಳೂರು ಮತ್ತು ರಾಜ್ಯ ಮುಖಂಡರಾಗಿದ್ದರು. ಜನಪರ ಚಳುವಳಿಗೆ ಮಾರ್ಗದರ್ಶಕಾರಾಗಿದ್ದ ಇವರು ಎಪಿಎಸ್ ಕಾಲೇಜ್ ಹಾಗೂ ಬೆಂಗಳೂರಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕಟ್ಟಲು ಪ್ರೋತ್ಸಹವನ್ನು ನೀಡುತ್ತಾ ಬಂದಿದ್ದರು. ಎಸ್.ಎಫ್.ಐ ಸ್ಥಾಪನಾ ಸಭೆಗೆ ಹಾಜರಾಗಿದ್ದ ಟಿವಿಎಂ, ಜೆಎನ್ಯು ಎಸ್ಎಫ್ಐ ಘಟಕದಲ್ಲೂ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾನವೀಯತೆಗೆ ಸ್ಪಂದಿಸುತ್ತಿದ್ದ ವೆಂಕಟೇಶ ಮೂರ್ತಿಯವರು ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರದಿದ್ದಾರೆ.