ಬೆಂಗಳೂರು:ವಿಧಾನಸೌಧದ ಆವರಣದಲ್ಲಿ ಫೆ.27ರಂದು ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಮುನವ್ವರ್, ಇಲ್ತಾಜ್ ಮತ್ತು ಶಫಿ ನಾಶಿಪುಡಿ ಎಂಬುವರನ್ನು ಬಂಧಿತರು ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಇಲ್ತಾಜ್ ದಿಲ್ಲಿ ಮೂಲದವನಾಗಿದ್ದು, ಮುನಾವರ್ ಬೆಂಗಳೂರಿನ ಆರ್.ಟಿ.ನಗರ, ಶಫಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನವ ಎಂದು ತಿಳಿದು ಬಂದಿದೆ.
ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ ಬಳಿಕ, ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೊಷಣೆ ಕೂಗಿದ ಆರೋಪ ಕೇಳಿಬಂದಿತ್ತು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಗದ್ದಲಕ್ಕೆ ದಾರಿ ಮಾಡಿಕೊಟ್ಟಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಮಂದಿಯ ಪಟ್ಟಿಯನ್ನ ಸಿದ್ದಪಡಿಸಲಾಗಿತ್ತು. ಇದರಲ್ಲಿ 7 ಮಂದಿ ವಿಚಾರಣೆ ನಡೆಸಲಾಗಿತ್ತು. ಅದರಲ್ಲಿ ಮೂವರ ವಾಯ್ಸ್ ಸ್ಯಾಂಪಲ್ಸ್ ಹಾಗೂ ದೃಶ್ಯಗಳನ್ನು ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದ್ದು, ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ. ಸಧ್ಯ ಮೂವರನ್ನು ಶಂಕೆ ಆಧಾರದಲ್ಲಿ ಬಂಧಿಸಲಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.