ಮಂಡ್ಯ: ಕನ್ನಡ ಪರ ಸಂಘಟನೆಗಳು, ರಾಜ್ಯದ ರೈಲ್ವೇ ಇಲಾಖೆಯ ಬಡ್ತಿಪರೀಕ್ಷೆಗಳನ್ನು ಕನ್ನಡ ಭಾಷೆಯನ್ನು ಕಡೆಗಣಿಸಿ, ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ಬರೆಯುವಂತೆ ಮಾಡಿರುವ ರೈಲ್ವೆ ಇಲಾಖೆಯ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ನಗರದ ರೈಲ್ವೇ ನಿಲ್ದಾಣದ ಎದುರು ಡಿಸೆಂಬರ್ 19ರಂದು ಪ್ರತಿಭಟನೆ ನಡೆಸಿದರು.
ಈ ನೆಲದಲ್ಲಿನ ಯಾವುದೇ ಉದ್ಯೋಗಕ್ಕಾಗಿನ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕಿರುವುದು, ಸಂವಿಧಾನಾತ್ಮಕವಾಗಿ ನ್ಯಾಯಸಮ್ಮತ ಕ್ರಮವಾಗಿದೆ. ನಿಜವಾದ ಒಕ್ಕೂಟ ವ್ಯವಸ್ಥೆಯ ಮೂಲತತ್ವವಾಗಿದೆ. ಈ ರೀತಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನಿರಾಕರಿಸಿರುವುದನ್ನು ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಹೇಳುತ್ತಿರುವ ರೈಲ್ವೇ ಅಧಿಕಾರಿಗಳು ಹದಿನೈದು ದಿನಗಳ ಹಿಂದೆ ನಡೆಸಿದ ಸ್ಟೇಶನ್ ಮಾಸ್ಟರ್ ಹುದ್ದೆಗಳ ಪರೀಕ್ಷೇಗಳನ್ನು ಹಿಂದಿ, ಇಂಗ್ಲೀಷಿನಲ್ಲಿ ನಡೆಸುವ ಮೂಲಕ ಕನ್ನಡ ವಿರೋಧಿ ಧೋರಣೆ ತೋರಿದ್ದಾರೆ. ಇದು ಕಣ್ತಪ್ಪಿನಿಂದ ಆದ ಪ್ರಮಾದವಲ್ಲ ಉದ್ದೇಶ ಪೂರ್ವಕವಾಗಿ ಆದದ್ದು ಎಂಬುದನ್ನು ಇದು ತೋರಿಸುತ್ತದೆ ಎಂದು ದೂರಿದರು.
ಇದನ್ನೂ ಓದಿ: ನಿತೀಶ್ ಕುಮಾರ್ ರವರ ಅನುಚಿತ ವರ್ತನೆ-ಕ್ಷಮೆಯಾಚಿಸಲು ಜನವಾದಿ ಮಹಿಳಾ ಸಂಘಟನೆ ಆಗ್ರಹ
ರಾಜ್ಯದಲ್ಲಿ ಕರ್ನಾಟಕಕ್ಕೆ ಸೇರಿದ ರೈಲ್ವೇ ಮಂತ್ರಿಯೊಬ್ಬರು ಇದ್ದಾಗಲೂ ರೈಲ್ವೇ ಇಲಾಖೆ ಈ ರೀತಿಯ ಭಂಡತನ ತೋರಿರುವುದು ರೈಲ್ವೇಯ ಉದ್ಯೋಗಗಳಲ್ಲಿ ಕನ್ನಡಿಗರನ್ನು ವಂಚಿಸುವುದೆ ಆಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಕನ್ನಡ ವಿರೋಧಿಧೋರಣೆಗೆ ಕಾರಣರಾದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಜರುಗಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ, ನಮ್ಮ ನಾಡು ನಮ್ಮ ಆಳ್ವಿಕೆ, ಕರ್ನಾಟಕ ರಾಜ್ಯ ರೈತಸಂಘ, ಕರುನಾಡ ಸೇವಕರು ಸಂಘಟನೆ, ಸ್ಟೇಶನ್ ಮಾಸ್ಟರ್ ಹುದ್ದೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಾಗುವಂತೆ ಮರು ಪರೀಕ್ಷೆ ಗಳನ್ನು ನಡೆಸಬೇಕು. ಭವಿಷ್ಯದಲ್ಲಿ ರೈಲ್ವೆ ಸೇರಿದಂತೆ ಕೇಂದ್ರ ಒಕ್ಕೂಟ ಸರಕಾರ ನಡೆಸುವ ಯಾವುದೇ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇರಲೇಬೇಕು ಎಂದು ಆಗ್ರಹಿಸಿದರು.
ಮಂಡ್ಯ ನಗರದ ರೈಲು ನಿಲ್ದಾಣದಲ್ಲಿ ಮಂಡ್ಯ ಸೊಗಡಿನ ರಾಗೀ ಮುದ್ದೆ, ಕಬ್ಬಿನ ಹಾಲು ಮಾರಾಟ ಕೇಂದ್ರಕ್ಕೆ ಅವಕಾಶ ನೀಡಬೇಕು. ಹಳೇ ರೈಲು ನಿಲ್ದಾಣದ ರಸ್ತೆಗೆ ಟಿಕೆಟ್ ವಿತರಣಾ ಕೇಂದ್ರ ಒದಗಿಸಬೇಕು. ಪಾರ್ಕಿಂಗ್ ಶುಲ್ಕಗಳನ್ನು ಇಳಿಸಬೇಕು. ಕರೋನಾ ಸಂದರ್ಭದಲ್ಲಿ ರದ್ದುಪಡಿಸಿದ ಕ್ರೀಡಾ ಹಾಗೂ ಅಂಗವಿಕಲ ಮತ್ತು ಮಾಧ್ಯಮ ಪಾಸ್ ಗಳನ್ನು ಮರು ಚಾಲ್ತಿಗೆ ತರಬೇಕು. ಅಲ್ಲದೇ ಬೆಂಗಳೂರು ಮೈಸೂರು ಮಧ್ಯೆ ಹೆಚ್ಚಿನ ರೈಲುಗಳನ್ನು ಆರಂಭಿಸಬೇಕು. ಷಟಲ್ ರೈಲುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸಬೇಕು. ತುಮಕೂರು – ಚಾಮರಾಜನಗರ ಹಾಗೂ ಹೆಜ್ಜಾಲ ಕನಕಪುರ ಚಾಮರಾಜನಗರ ರೈಲ್ವೆಯೋಜನೆಗೆ ಅಗತ್ಯ ಅನುದಾನ ಒದಗಿಸಿ ಯೋಜನೆಯನ್ನು ಅನುಷ್ಟಾನಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಂ.ಬಿ. ನಾಗಣ್ಣಗೌಡ, ಕರವೇ ಹೆಚ್.ಡಿ. ಜಯರಾಂ, ರಾಜೂ ಗೌಡ, ಶೇಖರ್, ಬಸವರಾಜು ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ : ಕೊಂದವರು ಯಾರು? ಅಭಿಯಾನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ – ಜ್ಯೋತಿ ಎ Janashakthi
