ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜನರು ಅತ್ಯಂತ ಸಂಕಷ್ಟಕ್ಕೆ ಈಡಾಗಿದ್ದಾರೆ. ಅದರಲ್ಲೂ ಮಧ್ಯಮ ವರ್ಗದ ಜನರು ತೀವ್ರವಾಗಿ ತತ್ತರಿಸಿದ್ದಾರೆ ಅವರಿಗೆ ಖಾಸಗಿ ಆಸ್ಪತ್ರೆಗಳು ಜನರಿಂದ ದುಬಾರಿ ದರ ವಸೂಲಿ ಮಾಡದಂತೆ ಖಾತ್ರಿಗೊಳಿಸುವುದು, ಹಣದುಬ್ಬರ ನಿಯಂತ್ರಣ, ವ್ಯಾಪಾರಿಗಳಿಗೆ ಪರಿಹಾರದಂತಹ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿರುವ ಪ್ರಿಯಾಂಕಾ ಗಾಂಧಿ ಅವರು ಕೋವಿಡ್-19 ಎರಡನೇ ಅಲೆ ಜನ ಸಮುದಾಯದ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದೆ. ಆಡಳಿತ ಸರಕಾರದ ಕಡೆಯಿಂದ ಸಿದ್ಧತೆಯ ಕೊರತೆಯಿಂದಾಗಿ ಜನರು ತೀವ್ರತರವಾದ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದಿದ್ದಾರೆ.
ಇದನ್ನು ಓದಿ: ಮೋದಿ ಸರ್ಕಾರವು ಕತ್ತಲೆಯಲ್ಲಿ ತಡಕಾಡುತ್ತಿರುವಾಗ ನ್ಯಾಯಾಲಯಗಳು ಕೋವಿಡ್ ಬಿಕ್ಕಟ್ಟಿನಲ್ಲಿ ನೆರವು ನೀಡುತ್ತಿವೆ
ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರ ಯಾವುದೇ ಪ್ರಮುಖ ಯೋಜನೆಗಳನ್ನು ಕೈಗೊಂಡಿಲ್ಲದಿರುವುದನ್ನು ಸಹ ಅವರು ಸ್ಪಷ್ಟಪಡಿಸಿದ್ದಾರೆ. ಅನೇಕ ರೀತಿಯಿಂದಾಗಿ ಅನಗತ್ಯವಾದ ನಿಯಮಗಳು ಜನರಿಗೆ ಅಪಾರ ಪ್ರಮಾಣದ ತೊಂದರೆಯನ್ನುಂಟು ಮಾಡಿದೆ ಎಂದು ಉತ್ತರ ಪ್ರದೇಶದ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಮತ್ತೊಂದೆಡೆ ಸಾಂಕ್ರಾಮಿಕ ನಮ್ಮಿಂದ ಅನೇಕ ಜನರನ್ನು ಕಸಿದುಕೊಳ್ಳುತ್ತಿದ್ದು, ಜೀವನೋಪಾಯ, ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರ ಪ್ರಮಾಣದ ಸಂಕಷ್ಟಗಳನ್ನು ಸೃಷ್ಟಿಸಿದೆ. ಇಂದು ಕೋಟ್ಯಾಂತರ ಜನರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ. ಅವರ ಆದಾಯ ಕ್ಷೀಣಿಸಿದೆ. ಹಣದುಬ್ಬರ ಅತಿ ವೇಗವಾಗಿ ಹೆಚ್ಚಳವಾಗುತ್ತಿದೆ. ಇದು ವಿಶೇಷವಾಗಿ ಮಧ್ಯಮ ವರ್ಗದ ಜನರನ್ನು ತೊಂದರೆಗೆ ಸಿಲುಕಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸರ್ಕಾರವು ಸಹ ಕೆಲವು ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಮತ್ತು ಜನರಿಗೆ ಪರಿಹಾರ ಒದಗಿಸಬೇಕಾಗಿದೆ ಎಂದು ಹೇಳಿರುವ ಪ್ರಿಯಾಂಕಾ ಗಾಂಧಿ ಅವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.