ಕೋವಿಡ್‌ ದತ್ತಾಂಶದ ನಿಖರ ವರದಿಯನ್ನು ಕೇಂದ್ರ ಮುಚ್ಚಿಡುತ್ತಿದೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ‘ಕೇಂದ್ರದ ಬಿಜೆಪಿ ಸರಕಾರವು ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ನಿಖರವಾದ ದತ್ತಾಂಶವನ್ನು ಮುಚ್ಚಿಡುತ್ತಿದೆ. ಅಲ್ಲದೆ ನರೇಂದ್ರಮೋದಿ ಸರ್ಕಾರವು ಜೀವ ಉಳಿಸುವಂತಹ ಕಾರ್ಯವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

‘ಯಾರು ಜವಾಬ್ದಾರರು?ʼ ಎಂಬ ಅಭಿಯಾನವನ್ನು ಮುಂದಿವರೆಸಿರುವ ಪ್ರಿಯಾಂಕಾ ಗಾಂಧಿ ಅವರು ‘ಜನರ ಜೀವಗಳನ್ನು ಉಳಿಸುವುದಕ್ಕಿಂತ ಪ್ರಧಾನಿ ಮೋದಿ ಅವರ ಘನತೆಯನ್ನು ಕಾಪಾಡುವುದು ಅತಿ ಅವಶ್ಯಕವೇ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ನೆಗೆಟಿವ್ ಜಿಡಿಪಿ, ‘ತರ್ಕಹೀನ’ ಎಂಬ ಲಸಿಕೆ ತರಾಟೆ ಮತ್ತು ಗೃಹಮಂತ್ರಿಗಳ ‘ಜಯಭೇರಿ’ ತಮಾಷೆ

ಈ ಬಗ್ಗೆ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಅವರು,‘ ಈ ದತ್ತಾಂಶಗಳನ್ನು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಬೇಕಾಗಿತ್ತು. ಆದರೆ ಸಾಂಕ್ರಾಮಿಕ ಆರಂಭದಿಂದಲೂ ಕೇಂದ್ರ ಸರಕಾರವು ಈ ದತ್ತಾಂಶಗಳನ್ನು ಪ್ರಚಾರದ ಟೂಲ್‌ ಆಗಿ ಬಳಸಿಕೊಳ್ಳುತ್ತಿದೆ. ಜನರು ಜೀವಗಳನ್ನು ಕಳೆದುಕೊಳ್ಳುತ್ತಿದ್ದರೂ, ತಮ್ಮ ರಾಜಕೀಯ ಉದ್ದೇಶಗಳನ್ನು ಪೂರೈಸಲು ದತ್ತಾಂಶಗಳನ್ನು ತಿರುಚಲಾಗುತ್ತಿದೆ’ ಎಂದು ಟೀಕೆ ಮಾಡಿದರು.

‘ಸಾಂಕ್ರಾಮಿಕದ ಆರಂಭದಿಂದಲೇ ಕೋವಿಡ್‌ ಪ್ರಕರಣಗಳು ಮತ್ತು ಮೃತರ ಸಂಖ್ಯೆಯನ್ನು ಜನಸಂಖ್ಯೆಗೆ ಅನುಗುಣವಾಗಿ ತೋರಿಸಲಾಗುತ್ತಿತ್ತು. ಆದರೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗುತ್ತಿತ್ತು. ಆದರೆ ನಿಜವಾಗಿಯೂ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಮೋದಿ ಸರ್ಕಾರವು ಇದೇ ವಿಧಾನವನ್ನು ಈಗಲೂ ಅನುಸರಿಸುತ್ತಿದೆ’ ಎಂದರು.

ಇದನ್ನು ಓದಿ: ಗೆದ್ದೆವು ಎಂದು ಕಾಲಹರಣ ಮಾಡಿದ ಕೇಂದ್ರ-ಮುಂಬರುವ ಪರಿಣಾಮದ ಕಡೆ ಗಮನ ಹರಿಸಲಿಲ್ಲ: ಅಮರ್ತ್ಯ ಸೇನ್

ಉತ್ತರ ಪ್ರದೇಶ ಸರ್ಕಾರವು ಕೋವಿಡ್‌ ದತ್ತಾಂಶಗಳಲ್ಲಿ ಏರುಪೇರು ಮಾಡಲು ಆರ್‌ಟಿ–ಪಿಸಿಆರ್‌ ಮತ್ತು ಆ್ಯಂಟಿಜೆನ್‌ ಪರೀಕ್ಷೆಯನ್ನು ಅಂಕಿಅಂಶವನ್ನು ಒಟ್ಟಾಗಿ ತೋರಿಸುತ್ತಿದೆ. ಆ್ಯಂಟಿಜೆನ್‌ ಪರೀಕ್ಷೆಯು ಅಷ್ಟೊಂದು ವಿಶ್ವಾಸಾರ್ಹವಲ್ಲ ಎಂಬುದು ತಿಳಿದಿರುವ ವಿಷಯವಾಗಿದೆ.

ಗಂಗಾ ನದಿಯ ದಡದಲ್ಲಿ 2,200 ಶವಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿದ ಡ್ರೋನ್‌ ದೃಶ್ಯಗಳು ಕೂಡ ವೈರಲ್‌ ಆಗಿತ್ತು. ಆಗ ಉತ್ತರ ಪ್ರದೇಶ ಸರ್ಕಾರವು ಏಕಾಏಕಿ ‘ಸಫಾಯಿ ಅಭಿಯಾನ’ವನ್ನು(ಸ್ವಚ್ಛತಾ ಅಭಿಯಾನ) ಆರಂಭಿಸಿತು. ವಾರಾಣಸಿ, ಗೋರಖ್‌ಪುರ, ಲಖನೌ, ಕಾನ್ಪುರ, ಝಾನ್ಸಿ, ಮೀರತ್‌ನ ಶವಗಾರಗಳು ಮತ್ತು ಸರ್ಕಾರ ನೀಡುತ್ತಿರುವ ಸಾವಿನ ವರದಿಯಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಪ್ರಿಯಾಂಕ ಗಾಂಧಿ ಅವರು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *