ಚಿಂಚೋಳಿ :ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಮೊದಲು ಘೋಷಿಸಿದ್ದೆ ಕಾಂಗ್ರೆಸ್ ಸರ್ಕಾರ. ಆದರೆ, ನಮ್ಮ ಯೋಜನೆಗಳನ್ನು ಬಿಜೆಪಿಯವರು ತಮ್ಮದೆಂದು ಬಿಂಬಿಸುತ್ತಾರೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಚಿಂಚೋಳಿ ತಾಲೂಕಿನ ಕೊರವಿ ದೊಡ್ಡ ತಾಂಡದಲ್ಲಿ ನಡೆಯುತ್ತಿರುವ ಕಾಳಿಕಾದೇವಿ ದೇವಾಲಯದ ಜಾತ್ರ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ತಾವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಬಂಜಾರ ಸಮುದಾಯದ ಅಭಿವೃದ್ದಿಗೆ ಹಲವಾರು ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದೆ ಎಂದು ನೆನಪಿಸಿಕೊಂಡ ಪ್ರಿಯಾಂಕ್ ಖರ್ಗೆ ಅವರುತಾಂಡಾ ಅಭಿವೃದ್ದಿ ನಿಗಮಕ್ಕೆ ರೂ 240 ಕೋಟಿ, ಬಂಜಾರ ಸಮುದಾಯದ ಆಚಾರ ವಿಚಾರ ಸಂಸ್ಕೃತಿಯ ರಕ್ಷಣೆಗಾಗಿ ಸಂತ ಸೇವಲಾಲರ ಹೆಸರಿನಲ್ಲಿ ಸಂತ ಸೇವಲಾಲ ಪ್ರಗತಿ ತಾಂಡಾಗಳನ್ನು ಘೋಷಿಸಿ ಪ್ರತಿ ತಾಂಡಾಗಳಿಗೆ ರೂ 50 ಲಕ್ಷದಿಂದ ರೂ 2 ಕೋಟಿ,ಸಂತ ಸೇವಾಲಾಲ್ ಹೆಸರಿನಲ್ಲಿ 400 ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ( ಪ್ರತಿಯೊಂದಕ್ಕೆ ರೂ 25 ಲಕ್ಷ )ಅನುದಾನ, ಲಾಲ್ ಧರಿಯಲ್ಲಿ ಸ್ಕಿಲ್ ಸೆಂಟರ್ ಗೆ ಕಸೂತಿ ನಿರ್ಮಾಣ ಮಾಡಲು ರೂ 50 ಕೋಟಿ ಅನುದಾನ, ಸೋರಗೊಂಡನಕೊಪ್ಪ ಗ್ರಾಮವನ್ನು ಪುಣ್ಯ ಕ್ಷೇತ್ರವನ್ನಾಗಿ ಅಭಿವೃದ್ದಿ ಮಾಡುವ ಉದ್ದೇಶದಿಂದಾಗಿ ರೂ 190 ಕೋಟಿ ಅನುದಾನ ತೆಗೆದಿರಿಸಿದ್ದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಯೋಜನೆ ನಿಂತು ಹೋದವು ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಬಂಜಾರರ ಹೆಸರಲ್ಲಿ ಮತ ತೆಗೆದುಕೊಂಡವರು ನಮ್ಮ ಯೋಜನೆಗಳನ್ನು ಯಾಕೆ ಮುಂದುವರೆಸಲಿಲ್ಲ. ಬಂಜಾರ ಸಮುದಾಯವನ್ನು ಯಾಕೆ ಅಭಿವೃದ್ದಿ ಪಡಿಸಲಿಲ್ಲ ? ಎಂದು ಪ್ರಶ್ನಿಸಿದರು.
ತಮ್ಮ ರಾಜಕೀಯ ಎದುರಾಳಿಗಳಿಗೆ ಎಂದಿನ ಧಾಟಿಯ ಮಾತಿನ ಮೂಲಕ ಟಾಂಗ್ ನೀಡಿದ ಸಚಿವರು ” ನಾನು ಯಾರಿಗೂ ಅಂಜುವುವನನ್ನ ಇದ್ದದ್ದನ್ನು ಇದ್ದಂತೆ ಹೇಳುತ್ತೇನೆ. ಮೋದಿಗೆ ನಾನು ಅಂಜಲ್ಲ ಇವರಿಗೆಲ್ಲ ಅಂಜುತ್ತೇನೆಯೇ? ಬಹಳ ಆದರೆ ಕೇಜ್ರಿವಾಲರಂತೆ ನನ್ನನ್ನೂ ಜೈಲಿಗೆ ಹಾಕಿಸಬಹುದು. ನಾನು ಜೈಲಿಗೆ ಹೋದರೆ ನೀವು ನನಗೆ ಊಟ ತಂದು ಕೊಡುತ್ತೀರಲ್ಲ ? ಎಂದು ನೆರೆದಿದ್ದವರನ್ನು ಪ್ರಶ್ನಿಸಿದರು.
ಶೀಘ್ರದಲ್ಲಿಯೇ ಸುಭಾಷ್ ರಾಠೋಡ ಅವರಿಗೆ ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಎಂದ ಸಚಿವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ವಿಷಯದ ಬಗ್ಗೆ ಅವರೊಂದಿಗೆ ಮಾತನಾಡಿದ್ದೆ. ಆದರೆ , ಸುಭಾಷ್ ರಾಠೋಡ ನಯವಾಗಿ ನಿರಾಕರಿಸಿ ಜನರ ಮಧ್ಯೆ ಮತ್ತಷ್ಟು ದಿನ ಇರುವುದಾಗಿ ತಮಗೆ ಬೇಕೆನಿಸಿದಾಗ ಕೇಳುವುದಾಗಿ ಹೇಳಿದ್ದರು ಎಂದರು.
ಸುಭಾಷ್ ರಾಠೋಡ ಮಾತನಾಡಿ ಬಂಜಾರ ಸಮಾಜ ಶಿಕ್ಷಣ ಪಡೆಯಬೇಕು. ತಮ್ಮ ದಾರಿ ತಪ್ಪಿಸುವವರ ಬಗ್ಗೆ ಜಾಗೃತರಾಗಿರಬೇಕು ಎಂದರು.