ಸಾರ್ವಜನಿಕ ಆಸ್ತಿಗಳ ಮಾರಾಟಕ್ಕೆ ಮೋದಿ ಸರ್ಕಾರದ ಧಾವಂತ
ಸಾರ್ವಜನಿಕ ಕ್ಷೇತ್ರದ ಉದ್ಯಮಗಳ (ಪಿಎಸ್‌ಇ) ಖಾಸಗೀಕರಣ ಕುರಿತು 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿರುವ ನೀತಿಯನ್ನು ಕಾರ್ಪೊರೇಟ್ ಮಾಧ್ಯಮಗಳು ಮತ್ತು ಬಲಪಂಥೀಯ ಅರ್ಥಶಾಸ್ತ್ರಜ್ಞರು ಭಾರಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ. “ಮೋದಿ ಬದಲಾಯಿಸಿದ್ದಾರೆ’, “ಅಸಾಧಾರಣ ದಿಟ್ಟತನ’, “ಕೊನೆಗೂ ನಿಜವಾದ ಸುಧಾರಣೆ’ ಎಂಬಿತ್ಯಾದಿ ಟಿಪ್ಪಣಿಗಳನ್ನು ಈ ವಲಯಗಳು ಮಾಡಿವೆ.
ದೊಡ್ಡ ಉದ್ಯಮಪತಿಗಳು ಮತ್ತು ಹಣಕಾಸು ಸಟ್ಟಾಕೋರರಲ್ಲಿ ಇಂಥ ಹುರುಪು ಮೂಡಲು ಕಾರಣವೇನು?. ಬಜೆಟ್‌ನಲ್ಲಿ ಪ್ರಕಟಿಸಿದ್ದು ಏನೆಂಬುದನ್ನು ಈಗ ವಿತ್ತ ಸಚಿವಾಲಯದಡಿ ಬರುವ ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಬಹಿರಂಗಪಡಿಸಿದೆ. “ಆತ್ಮನಿರ್ಭರ ಭಾರತಕ್ಕೆ ಹೊಸ ಸಾರ್ವಜನಿಕ ವಲಯದ ಉದ್ಯಮ ನೀತಿʼʼ ಎಂಬ ದಾಖಲೆಯಲ್ಲಿ ಅದನ್ನು ವಿವರಿಸಲಾಗಿದೆ. ಆಯಕಟ್ಟಿನ ಹಾಗೂ ಆಯಕಟ್ಟೇತರ ಕ್ಷೇತ್ರಗಳೆಂದು ಪಿಎಸ್‌ಇಗಳನ್ನು ಅದರಲ್ಲಿ ವರ್ಗೀಕರಿಸಲಾಗಿದೆ.
‘ಬಂಡವಾಳ ಹಿಂತೆಗೆತ’ದಿಂದ ಕಳಚಿ ಹಾಕುವವರೆಗೆ
ನಾಲ್ಕು ಆಯಕಟ್ಟಿನ ಕ್ಷೇತ್ರಗಳಿವು: 1. ಅಣು ಇಂಧನ, ಬಾಹ್ಯಾಕಾಶ ಮತ್ತು ರಕ್ಷಣೆ. 2. ಸಾರಿಗೆ ಮತ್ತು ದೂರಸಂಪರ್ಕ. 3. ಇಂಧನ, ಪಟ್ರೋಲಿಯಂ ಮತ್ತು ಕಲ್ಲಿದ್ದಲು. 4. ಬ್ಯಾಂಕಿಂಗ್, ವಿಮೆ ಹಾಗೂ ಹಣಕಾಸು ಸೇವೆಗಳು. ಈ ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಅಸ್ತಿತ್ವದದಲ್ಲಿರುವ ಪಿಎಸ್‌ಇಗಳ ‘ಕನಿಷ್ಠ ಇರವು ಮಾತ್ರ ಇರುತ್ತದೆ’. ಉಳಿದೆಲ್ಲ ಸಂಸ್ಥೆಗಳನ್ನು ಖಾಸಗೀಕರಿಸಲಾಗುತ್ತದೆ, ವಿಲೀನಗೊಳಿಸಲಾಗುತ್ತದೆ ಅಥವಾ ಮುಚ್ಚಲಾಗುತ್ತದೆ.
ಆಯಕಟ್ಟೇತರ ವಲಯದಲ್ಲಿ, ಎಲ್ಲ ಪಿಎಸ್‌ಇಗಳ ಖಾಸಗೀಕರಣವನ್ನು ಪರಿಶೀಲಿಸಲಾಗುತ್ತದೆ. ಇಲ್ಲವೇ ಅವುಗಳನ್ನು ಮುಚ್ಚಲಾಗುತ್ತದೆ.
ಪಿಎಸ್‌ಇಗಳ ಈ ದೂರಗಾಮಿ ಪರಿಣಾಮಗಳುಳ್ಳ ಖಾಸಗೀಕರಣ ಯೋಜನೆಯೇ ಭಾರತೀಯ ಮತ್ತು ವಿದೇಶಿ ದೊಡ್ಡ ಬಂಡವಾಳಶಾಹಿಗಳು ಜೊಲ್ಲು ಸುರಿಸುವಂತೆ ಮಾಡಿರುವುದು.
ಪಿ.ವಿ.ನರಸಿಂಹರಾವ್ ದಿನಗಳಿಂದಲೂ ಖಾಸಗೀಕರಣದ ಹೆಜ್ಜೆಗಳಿಗೆ ‘ಬಂಡವಾಳ ಹಿಂತೆಗೆತ’ ಎಂಬ ಮುಸುಕನ್ನು ಹಾಕಲಾಗಿತ್ತು. ಇದುವರೆಗೂ ಈ ಪದ ಚಾಲ್ತಿಯಲ್ಲಿದೆ. ಪಿಎಸ್‌ಇಗಳ ಷೇರುಗಳ ಆಯಕಟ್ಟಿನ ಮಾರಾಟವು ಆರಂಭವಾದದ್ದು ವಾಜಪೇಯಿ ಅವಧಿಯಲ್ಲಿ. ಅದು ಖಾಸಗೀಕರಣವಲ್ಲದೆ ಬೇರೇನೂ ಅಲ್ಲ.
ಈಗ ಮೋದಿ ಆಡಳಿತದ ಎರಡನೇ ಅವಧಿಯಲ್ಲಿ ಸಾರ್ವಜನಿಕ ವಲಯವನ್ನು ಕಳಚಿ ಹಾಕಿಬಿಡುವುದೇ ಹೊಸ ನೀತಿಯ ಅರ್ಥವಾಗಿದೆ. ಯಾಕೆಂದರೆ, ನಾಲ್ಕು ಆಯಕಟ್ಟಿನ ಕ್ಷೇತ್ರಗಳಲ್ಲಿನ ಬಹುತೇಕ ಪಿಎಸ್‌ಇಗಳನ್ನು, ಅವುಗಳಲ್ಲಿ ಬಹುತೇಕ ಲಾಭದಲ್ಲಿ ನಡೆಯುತ್ತಿದ್ದರೂ, ಮಾರಾಟ ಮಾಡಲಾಗುತ್ತದೆ. ಅಂದರೆ ಸಾರ್ವಜನಿಕ ಹಣದಿಂದ ಕಟ್ಟಲಾದ ಬಹುಮೂಲ್ಯ ಸಾರ್ವಜನಿಕ ಆಸ್ತಿಗಳ ಮಾರಾಟ.
ತಥಾಕಥಿತ ಆಯಕಟ್ಟಿನ ವಲಯಗಳ ಅನೇಕ ಪಿಎಸ್‌ಇಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಸಂಕಷ್ಟಕ್ಕೆ ತಳ್ಳಿ ಖಾಸಗೀಕರಣಕ್ಕೆ ಹಾದಿ ಮಾಡಲಾಗಿದೆ. ಒಎನ್‌ಜಿಸಿ, ಬಿಎಚ್‌ಇಎಲ್, ಬಿಎಸ್‌ಎನ್‌ಎಲ್ ಇವೆಲ್ಲವೂ ಸರ್ಕಾರದ ಸಾರ್ವಜನಿಕ ವಲಯ-ವಿರೋಧಿ ಧೋರಣೆಗೆ ಬಲಿಯಾದವುಗಳು.
-
ಮೋದಿ ಆಡಳಿತದ ಎರಡನೇ ಅವಧಿಯಲ್ಲಿ ಸಾರ್ವಜನಿಕ ವಲಯವನ್ನು ಕಳಚಿ ಹಾಕಿಬಿಡುವುದೇ ಹೊಸ ನೀತಿಯ ಅರ್ಥವಾಗಿದೆ. ಅಂದರೆ ಸಾರ್ವಜನಿಕ ಹಣದಿಂದ ಕಟ್ಟಲಾದ ಬಹುಮೂಲ್ಯ ಸಾರ್ವಜನಿಕ ಆಸ್ತಿಗಳ ಮಾರಾಟ. ಹಣಕಾಸು ಪರಿಸ್ಥಿತಿ ತೀವ್ರವಾಗಿ ಮುಗ್ಗರಿಸಿ ಆಸ್ತಿಗಳ ಬೆಲೆಗಳು ತೀರಾ ಕುಸಿತ ಕಂಡಿರುವಾಗ, ಸರ್ಕಾರ ಈ ಆಸ್ತಿಗಳನ್ನು ತೀರಾ ಅಗ್ಗದ ದರಗಳಲ್ಲಿ ಮಾರಲಿದ್ದು ದೇಶೀ- ವಿದೇಶಿ ಬಂಡವಳಿಗರಿಗೆ ಹಬ್ಬದೂಟವಾಗಿದೆ. ಇದೆಲ್ಲವನ್ನು ‘ಆತ್ಮನಿರ್ಭರ’ ಭಾರತದ ಹೆಸರಿನಲ್ಲಿ ಮಾಡಲಾಗುತ್ತಿರುವುದು ಒಂದು ಕ್ರೂರ ವಂಚನೆ.
-
ಸಾರ್ವಜನಿಕ ರಂಗದ ವಿರುದ್ಧ ಸರ್ಕಾರ ಸಾರಿರುವ ಈ ಯುದ್ಧವನ್ನು ಸೋಲಿಸಲು ಆದಷ್ಟು ಹೆಚ್ಚು ಜನ ವಿಭಾಗಗಳನ್ನು ಒಗ್ಗೂಡಿಸಲು ಕಾರ್ಮಿಕ ಸಂಘಟನೆಗಳು ಮತ್ತು ಎಡ ಶಕ್ತಿಗಳು ಶ್ರಮಿಸಬೇಕು.
ಏಕೆ ಈ ಖಾಸಗೀಕರಣದ ಧಾವಂತ?
ನವ ಉದಾರವಾದಿ ಸರ್ಕಾರಗಳಿಗೆ, ಹಣಕಾಸು ಬಿಕ್ಕಟ್ಟು ಬಿಗಡಾಯಿಸಿದಂತೆ ಖಾಸಗೀಕರಣದ ಆದಾಯಗಳ ಮೇಲಿನ ಅವಲಂಬನೆ ಹೆಚ್ಚುತ್ತದೆ. ರೆವಿನ್ಯೂ ಆದಾಯಗಳಲ್ಲಿ ತೀವ್ರ ಕುಸಿತವಾಗಿರುವುದನ್ನು ಈ ಸಾಲಿನ ಕೇಂದ್ರ ಬಜೆಟ್ ತೋರಿಸಿದೆ. ಲಾಭದಾಯಕ ಆದಾಯ ತರುವ ಸಾರ್ವಜನಿಕ ಆಸ್ತಿಗಳನ್ನು ಮಾರಿ ಈ ಸಮಸ್ಯೆಯನ್ನು ಎದುರಿಸುವುದು ಸರ್ಕಾರದ ಉದ್ದೇಶವಾಗಿದೆ.
ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತದ ಮೂಲಕ 2.10 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವುದು 2020-21ನೇ ಸಾಲಿನ ಬಜೆಟಿನ ಗುರಿಯಾಗಿದ್ದರೆ 1.75 ಲಕ್ಷ ಕೋಟಿ ರೂಪಾಯಿ ವರಮಾನದ ಗುರಿಯನ್ನು ಪ್ರಸಕ್ತ ಬಜೆಟ್ ನಿಗದಿಪಡಿಸಿದೆ. ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಕೊರತೆ ಆದರೂ ಸರ್ಕಾರ ಅದರಿಂದ ಪಾಠ ಕಲಿತಿಲ್ಲ. ಅದಕ್ಕೆ ಬದಲು ಇನ್ನಷ್ಟು ಆಕ್ರಮಣಕಾರಿ ರೀತಿಯಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ.
ಬಂಡವಳಿಗರಿಗೆ ಹಬ್ಬದೂಟ
ಹಣಕಾಸು ಪರಿಸ್ಥಿತಿ ತೀವ್ರ ಮುಗ್ಗರಿಸಿರುವಾಗ ಆಸ್ತಿಗಳ ಬೆಲೆಗಳು ತೀರಾ ಕುಸಿತ ಕಂಡಿವೆ. ಈ ಆಸ್ತಿಗಳನ್ನು ಸರ್ಕಾರ ತೀವ್ರ ಕಡಿತದ ದರದಲ್ಲಿ ಮಾರಲಿದ್ದು ದೇಶೀಯ ಹಾಗೂ ವಿದೇಶಿ ಬಂಡವಳಿಗರಿಗೆ ಹಬ್ಬದೂಟವಾಗಿದೆ.
ಹಣಕಾಸು ಕ್ಷೇತ್ರದ ಖಾಸಗೀಕರಣದ ಉದ್ದೇಶ ಬಟಾಬಯಲಾಗಿದೆ. ಬಜೆಟ್‌ನಲ್ಲಿ ಇದೇ ಮೊದಲ ಬಾರಿಗೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಒಂದು ಸಾಮಾನ್ಯ ವಿಮಾ ಕಂಪೆನಿಯನ್ನು ಖಾಸಗೀಕರಿಸುವ ಪ್ರಕಟಣೆ ಮಾಡಲಾಗಿದೆ. ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಕೂಡ ಹಿಂಪಡೆಯಲಾಗುತ್ತದೆ. ಖಾಸಗೀಕರಿಸಲು ಆಯ್ಕೆ ಮಾಡಲಾಗುವ ಎರಡು ಬ್ಯಾಂಕ್‌ಗಳು ಖಂಡಿತವಾಗಿಯೂ ಲಾಭದಾಯಕ ಬ್ಯಾಂಕ್‌ಗಳಾಗಿರುತ್ತವೆ ಎನ್ನುವಲ್ಲಿ ಅನುಮಾನವಿಲ್ಲ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾರ್ಪೊರೆಟ್ ವಲಯದ ಪ್ರವೇಶಕ್ಕೆ ಇದು ಮುನ್ನುಡಿ ಬರೆಯಲಿದೆ.
ಹಣಕಾಸು ಕ್ಷೇತ್ರವು ಖಾಸಗೀಕರಣವಾಯಿತೆಂದರೆ ಇಡೀ ಆರ್ಥಿಕತೆಯ ಬಾಗಿಲು ಬಂಡವಾಳ ಹರಿವಿನ ಏರಿಳಿತಗಳಿಗೆ ಒಳಗಾಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಷರತ್ತುಗಳನ್ನು ವಿಧಿಸಲು ಸಮರ್ಥವಾಗುತ್ತದೆ. ಇದೀಗ ಆತ್ಮನಿರ್ಭರತೆ!
ಲಾಭದಲ್ಲಿ ನಡೆಯುತ್ತಿರುವ ಪಿಎಸ್‌ಇಗಳ ನಿವ್ವಳ್ಟ ಲಾಭಗಳು 1.6 ಲಕ್ಷ ಕೋಟಿ ರೂಪಾಯಿ. ಸರ್ಕಾರಕ್ಕೆ ಅವುಗಳಿಂದ ಸಿಗುವ ಡಿವಿಡೆಂಡ್(ಲಾಭಾಂಶ) 77,000 ಕೋಟಿ ರೂಪಾಯಿ. ಈ ಆಸ್ತಿಗಳ ಮಾರಾಟ ಸರ್ಕಾರದ ಹಾಲಿ ಹಾಗೂ ಭವಿಷ್ಯದ ಆದಾಯ ಹರಿವುಗಳು.
ರಾಷ್ಟ್ರೀಯ ಭದ್ರತೆ-ಸಾರ್ವಭೌಮತೆಗೆ ಅಪಾಯ
ಇದೆಲ್ಲವನ್ನು ‘ಆತ್ಮನಿರ್ಭರʼ ಭಾರತದ ಹೆಸರಿನಲ್ಲಿ ಮಾಡಲಾಗುತ್ತಿರುವುದು ಒಂದು ಕ್ರೂರ ವಂಚನೆ. ಎರಡನೇ ಅತಿ ದೊಡ್ಡ ತೈಲ ಕಂಪೆನಿಯಾದ ಬಿಪಿಸಿಎಲ್‌ನ್ನು ಮಾರಾಟಕ್ಕೆ ಇಡಲಾಗಿದೆ. ಈ ಕಂಪೆನಿಯ ಗಾತ್ರವನ್ನು ನೋಡಿದರೆ ಅದನ್ನು ಖಂಡಿತವಾಗಿಯೂ ಒಂದು ವಿದೇಶಿ ತೈಲ ಕಂಪೆನಿಯ ಕೈಗೆ ಇಡುವ ಸಂಭವ ಜಾಸ್ತಿಯಿದೆ. ಇದು ಮಹತ್ವದ ಇಂಧನ ಸರಬರಾಜಿನ ಮೇಲೆ ನಿಯಂತ್ರಣದ ವಿಚಾರದಲ್ಲಿ ರಾಷ್ಟ್ರೀಯ ಸಾರ್ವಭೌಮತ್ವವನ್ನು ದುರ್ಬಲಗೊಳಿಸುತ್ತದೆ.
ರಕ್ಷಣಾ ವಲಯದಲ್ಲಿನ ಖಾಸಗೀಕರಣದ ಧಾವಂತದಿಂದಾಗಿ ಭಾರತೀಯ ಕಾರ್ಪೊರೆಟ್ ಕ್ಷೇತ್ರದ ಕೆಲವೇ ಆಯ್ದ ಕಂಪೆನಿಗಳು ವಿದೇಶಿ ಶಸ್ತ್ರಾಸ್ತ್ರ ತಯಾರಕರೊಂದಿಗೆ ಕೈಜೋಡಿಸಲು ಮುಂದಾಗುತ್ತವೆ. ಅಮೆರಿಕದೊಂದಿಗಿನ ಬೆಳೆಯುತ್ತಿರುವ ಮಿಲಿಟರಿ ಬಾಂಧವ್ಯವನ್ನು ಪರಿಗಣಿಸಿದರೆ ಅಮೆರಿಕದ ಬಹುರಾಷ್ಟ್ರೀಯ ಶಸ್ತ್ರಾಸ್ತ್ರ ಕಂಪೆನಿಗಳು ರಕ್ಷಣಾ ಉತ್ಪಾದನೆಯ ಪ್ರಮುಖ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸುವ ಅಪಾಯವಿದೆ. ಅಂದರೆ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಕೂಡ ಅಷ್ಟೇ ಅಪಾಯವಿದೆ.
ಖಾಸಗೀಕರಣದ ಧಾವಂತ, ವಿಶೇಷವಾಗಿ ಖನಿಜಗಳು ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಖಾಸಗೀಕರಣವು ಸಾಂವಿಧಾನಿಕ ಆಶಯಕ್ಕೆ ವಿರುದ್ಧವಾಗಿದೆ. ಭೌತಿಕ ಸಂಪನ್ಮೂಲಗಳ ಮಾಲಿಕತ್ವ ಮತ್ತು ನಿಯಂತ್ರಣವು ಅಂತಿಮವಾಗಿ ಜನಸಾಮಾನ್ಯರ ಕಲ್ಯಾಣಕ್ಕೆ ಬಳಕೆಯಾಗಬೇಕು ಎಂದು ಸಂವಿಧಾನದ 39 (ಬಿ) ವಿಧಿ ಪ್ರಭುತ್ವಕ್ಕೆ ನಿರ್ದೇಶಿಸುತ್ತದೆ. ಆದರೆ ವಾಸ್ತವದಲ್ಲಿ ಸಾರ್ವಜನಿಕ ಕಲ್ಯಾಣಕ್ಕೆ ಬದಲು ಖಾಸಗೀಕರಣವು ಪ್ರಾಕೃತಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆದಿದೆ.
ಸುದೀರ್ಘ ಹೋರಾಟಕ್ಕೆ ಸಜ್ಜು
ಆರ್ಥಿಕ ಉದ್ದಿಮೆಗಳಲ್ಲದೆ ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ ಮತ್ತು ವಿದ್ಯುತ್ ಸರಬರಾಜು ಮುಂತಾದ ಕ್ಷೇತ್ರಗಳಲ್ಲೂ ಖಾಸಗೀಕರಣದ ಕಬಂಧ ಬಾಹು ಚಾಚಿದೆ. ಇದು ಜನರ ಶಿಕ್ಷಣ, ಆರೋಗ್ಯ ಮತ್ತು ಮೂಲ ಸೇವೆಗಳ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ. ಈ ಖಾಸಗೀಕರಣದ ಧಾವಂತದ ವಿರುದ್ಧ ಸಾಧ್ಯವಾದಷ್ಟು ವ್ಯಾಪಕ ಜನವಿಭಾಗಗಳನ್ನು ಸೇರಿಸಿಕೊಂಡು ಹೋರಾಟ ನಡೆಸಬೇಕಿದೆ. ವಿಶಾಖಪಟ್ಟಣಂ ಉಕ್ಕು ಸ್ಥಾವರದ ಶೇಕಡ 100 ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾಪನೆಗೆ ಈಗಾಗಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅದರ ವಿರುದ್ಧ ಆಂಧ್ರಪ್ರದೇಶದಲ್ಲಿ ಜನರನ್ನು ಅಣಿನೆರೆಸುವ ಕಾರ್ಯಸಾಗಿದೆ. ದುಡಿಯುವ ವರ್ಗ ಈ ಹೋರಾಟದ ಕೇಂದ್ರದಲ್ಲಿದ್ದು ಇದು ಜನ ಸಮುದಾಯದ ಪ್ರಶ್ನೆಯಾಗಿ ಹೊರ ಹೊಮ್ಮಿದೆ.
ಬ್ಯಾಂಕ್‌ಗಳ ಖಾಸಗೀಕರಣ ಪ್ರಸ್ತಾಪನೆಯ ವಿರುದ್ಧ ಮಾರ್ಚ್ 15 ಮತ್ತು 16ರಂದು ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ವೇದಿಕೆ ಕರೆ ನೀಡಿದೆ. ವಿಮಾ ನೌಕರರು ಕೂಡ ಸುದೀರ್ಘ ಚಳವಳಿಗೆ ಸಜ್ಜಾಗುತ್ತಿದ್ದಾರೆ. ಎಲ್ಲ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ನೌಕರರು ಮತ್ತು ಕಾರ್ಮಿಕರ ಸಂಯೋಜಿತ ಪ್ರತಿರೋಧವನ್ನು ಕಟ್ಟಿ ಬೆಳೆಸುವುದು ಅಗತ್ಯವಾಗಿದೆ.
ಸಾರ್ವಜನಿಕ ರಂಗದ ವಿರುದ್ಧ ಸರ್ಕಾರ ಸಾರಿರುವ ಯುದ್ಧವನ್ನು ಸೋಲಿಸಲು ಆದಷ್ಟು ಹೆಚ್ಚು ಜನ ವಿಭಾಗಗಳನ್ನು ಒಗ್ಗೂಡಿಸಲು ಕಾರ್ಮಿಕ ಸಂಘಟನೆಗಳು ಮತ್ತು ಎಡಶಕ್ತಿಗಳು ಶ್ರಮಿಸಬೇಕು.
ಅನು: ವಿಶ್ವ