ಬೆಂಗಳೂರು : ಸೋಮವಾರ ಪ್ರಾರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ತಪ್ಪಿಸಿಕೊಂಡಿದ್ದಾರೆ. ಸಾಂಕ್ರಾಮಿಕ ಪೀಡಿತ ವರ್ಷದಲ್ಲಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ಪತ್ರಗಳನ್ನು ನಿರಾಕರಿಸಿರುವುದು ಇದಕ್ಕೆ ಕಾರಣ. ಅಂತಹ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆಯಿಂದ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಹೊಸ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಪರೀಕ್ಷಾಪತ್ರ ನೀಡುವಂತೆ ಸರಕಾರ ಖಾಸಗಿ ಶಾಲೆಗಳಿಗೆ ಸೂಚೆನೆಯನ್ನು ನೀಡಿದ್ದನ್ನು ಬಿಟ್ಟರೆ ಕ್ರಮವಹಿಸುವ ಜವಬ್ದಾರಿಯನ್ನು ತೋರಿದಂತೆ ಕಾಣುತ್ತಿಲ್ಲ. ಪರೀಕ್ಷೆಗೆ ಗೈರಾದ 8986 ವಿದ್ಯಾರ್ಥಿಗಳಲ್ಲಿ 92% ರಷ್ಟು ವಿದ್ಯಾರ್ಥಿಗಳು ಪರೀಕ್ಷಾ ಪತ್ರ ನಿರಾಕರಣೆಯಿಂದ ಹೊರಗುಳಿದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಾ ಖಾಸಗಿ ಶಾಲೆಗಳ ಈ ಹಪಾಹಪಿಯನ್ನು ನಿಲ್ಲಿಸಲು ವಿಫಲರಾಗಿರುವುದು ಈಗ ಬೆಳಕಿಗೆ ಬಂದಿದೆ. ಹಾವೇರಿಯ ಮಹಾತ್ಮ ಗಾಂಧಿ ಪ್ರೌಢ ಶಾಲೆಯ 30 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸಿದರೂ ಹಾಲ್ ಟಿಕೆಟ್ ನೀಡಿಲ್ಲ. ಇವರಿಗೆ ಹಾಲ್ ಟಿಕೆಟ್ ನಿರಾಕರಣೆ ಮಾಡಿದ್ದು ಯಾಕೆ ಅಂದರೆ ಶಾಲಾಭಿವೃದ್ಧಿ ಶುಲ್ಕ ಕಟ್ಟಿಲ್ಲ ಎಂಬ ಕಾರಣವನ್ನೊಡ್ಡಿ ನಿರಾಕರಣೆ ಮಾಡಲಾಗಿದೆ.
ಇದನ್ನೂ ಓದಿ : ಖಾಸಗಿ ಶಾಲೆಗಳ ಧನದಾಹಿತನಕ್ಕೆ ಪರೀಕ್ಷೆಯಿಂದ ವಂಚಿತಗೊಂಡ ವಿದ್ಯಾರ್ಥಿಗಳು!
ಶಾಲೆಯ ಶುಲ್ಕ ಕಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಪ್ರವೇಶ ಪತ್ರಗಳನ್ನು ನಿರಾಕರಿಸಿರುವುದು ಸರಿಯಾದ ವಿಧಾನ ಅಲ್ಲ ಎಂದು ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿವೆ. ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸರಕಾರ ಹಿಂದೇಟು ಹಾಕುತ್ತಿರುವುದನ್ನು ಇದು ತೋರಿಸುತ್ತದೆ. ಪರೀಕ್ಷೆಯ ನಿರಾಕರಣೆಯೂ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿಗೆ ಧಕ್ಕೆ ತಂದಿದೆ. ಇಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.

ಶುಲ್ಕ ಕಟ್ಟದ ಕಾರಣ ತೇರ್ಗಡೆ ಮಾಡಲಿಲ್ಲ : 2019-20 ರಲ್ಲಿ ಶಾಲೆಯ ಶುಲ್ಕ ಕಟ್ಟಿಲ್ಲ ಎನ್ನುವ ಕಾರಣದಿಂದಾಗಿಯೇ 9 ನೇ ತರಗತಿಯಲ್ಲಿನ ವಿದ್ಯಾರ್ಥಿಗಳನ್ನು 10 ನೇ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಎಷ್ಟುಜನ ವಿದ್ಯಾರ್ಥಿಗಳನ್ನು ನಿರಾಕರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿದೆ. ಸಾಮಾನ್ಯವಾಗಿ 9 ನೇ ತರಗತಿಯಲ್ಲಿ ಓದುವ 100 ಮಕ್ಕಳಲ್ಲಿ 99 ಜನ ಎಸ್.ಎಸ್.ಎಲ್.ಸಿ ಪ್ರವೇಶವನ್ನು ಪಡೆಯುತ್ತಾರೆ. ಆದರೆ 9 ನೇ ತರಗತಿಯಲ್ಲಿ ಶುಲ್ಕವನ್ನು ಪೂರ್ಣಪ್ರಮಾಣದಲ್ಲಿ ಕಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಮುಂದಿನ ತರಗತಿಗೆ ರಾಜ್ಯದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ನಿರಾಕರಣೆ ಮಾಡಿರುವ ಸಾಧ್ಯತೆಗಳಿದ್ದು ಶಿಕ್ಷಣ ಇಲಾಖೆ ತನಿಖೆಯನ್ನು ನಡೆಸಿ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಪೋಷಕರಿಗೆ ಮಾಹಿತಿ ಇಲ್ಲ : ಪೂರ್ಣ ಶುಲ್ಕ ಕಟ್ಟದೆ ಹೋದರೆ ನಿಮ್ಮ ಮಕ್ಕಳಿಗೆ ಪರೀಕ್ಷಾ ಪತ್ರ ನೀಡುವುದಿಲ್ಲ ಎಂದು ಯಾವ ಖಾಸಗಿ ಶಾಲೆಗಳು ಪೋಷಕರಿಗೆ ಮಾಹಿತಿಯನ್ನು ನೀಡಿಲ್ಲ. ಮಾಹಿತಿಯನ್ನು ನೀಡದೆ ಈಗ ಹಾಲ್ಟಿಕೆಟ್ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ ಆರೋಪಿಸಿದ್ದಾರೆ.. ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಪರೀಕ್ಷೆ ನಿರಾಕರಣೆ ಮಾಡಿರುವುದು ಶಿಕ್ಷಣ ಹಕ್ಕಿನ ಮೇಲಿನ ದಾಳಿಯಾಗಿದೆ. ಖಾಸಗಿ ಶಾಲೆಗಳು ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಗೊಂಡಿದ್ದರೆ ಮೊದಲಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕಿತ್ತು. ಅಂತಹ ಮಕ್ಕಳ ಪತ್ರಿಕೆಗಳನ್ನು ವಿಶೇಷ ಲಕೋಟೆಯಲ್ಲಿಟ್ಟು ಸರಕಾರಕ್ಕೆ ಕಳುಹಿಸಬೇಕಿತ್ತು. ಆಗ ಸರಕಾರ ಸರಿಯಾದ ನಿಲುವಿನ ಮೂಲಕ ಮಕ್ಕಳ ಸಹಾಯಕ್ಕೆ ಬರಲು ಸಾಧ್ಯವಾಗುತ್ತಿತ್ತು. ಆದರೆ ಸರಕಾರ ಮತ್ತು ಖಾಸಗಿ ಶಾಲೆಗಳು ಈ ಸೂತ್ರವನ್ನು ಅಳವಡಿಸಿಕೊಳ್ಳದೆ ಮಕ್ಕಳ ಬದುಕಿನ ಜೊತೆ ಆಟವಾಡುತ್ತಿವೆ. ಪರೀಕ್ಷೆಯಿಂದ ಹೊರಗುಳಿದ ಮಕ್ಕಳಿಗೆ ಪುನಃ ಪರೀಕ್ಷೆ ನಡೆಸದೆ 9 ನೇ ತರಗತಿಯ ಅಮಕಗಳ ಆಧಾರದಲ್ಲಿ ಹತ್ತನೆ ತರಗತಿಯಲ್ಲಿ ಅವರನ್ನು ತೇರಗಡೆಗೊಳಿಸಬೇಕು ಎಂದು ಸರಕಾರಕ್ಕೆ ನಿರಂಜನಾರಾಧ್ಯರವರು ಸಲಹೆ ನೀಡಿದ್ದರೆ.
ಸರಕಾರ ಇನ್ನಾದರೂ ಇಂತಹ ಅಪಾಯಗಳಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಖಾಸಗಿ ಶಾಲೆಗಳು ಶುಲ್ಕದ ಹೆಸರಿನಲ್ಲಿ ಶಿಕ್ಷಣವನ್ನು ನಿರಾಕರಿಸುವ ಪ್ರಯತ್ನಕ್ಕೆ ಸರಕಾರ ತಡೆ ಒಡ್ಡುವ ಕೆಲಸ ಮಾಡಬೇಕಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವುದು ತನ್ನ ಕರ್ತವ್ಯ ಎಂಬುದನ್ನು ಸರಕಾರ ಮರೆಯಬಾರದು.