ಆಂಧ್ರಪ್ರದೇಶ| ಖಾಸಗಿ ಬಸ್‌ಗೆ ಬೆಂಕಿ; 20 ಜನರು ಸಾವು

ಆಂಧ್ರಪ್ರದೇಶ: ಕರ್ನೂಲ್ ಜಿಲ್ಲೆಯಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 20 ಜನರು ಸಜೀವ ದಹನವಾಗಿರುವ ಘಟನೆ ಅಕ್ಟೋಬರ್ 24ರ ಮುಂಜಾನೆ ನಡೆದಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿನ್ನ ಟೆಕೂರು ಗ್ರಾಮದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ವೋಲ್ವೋ ಎಸಿ ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ 42 ಮಂದಿ ಪ್ರಯಾಣಿಕರಿದ್ದರು.

“ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ವೋಲ್ವೋ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿಯ ಕಿಡಿ ಸೋಕಿ ಅವಘಡಕ್ಕೆ ಕಾರಣವಾಗಿರಬಹುದು. 15 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಿದ್ದುಪಡಿ ಮಸೂದೆ-2025: ಎಲ್ಲವೂ ಕೇಂದ್ರ ಮತ್ತು ಕಾರ್ಪೊರೇಟ್ ಗಳಿಗೆ

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ದುರಂತದ ಕುರಿತು ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.

“ಕರ್ನೂಲ್ ಜಿಲ್ಲೆಯ ಚಿನ್ನಾ ಟೇಕೂರ್ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಅಪಘಾತದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಮತ್ತು ಸಂತ್ರಸ್ಥರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲ ನೀಡಲಿದೆ” ಎಂದು ನಾಯ್ಡು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಅ. 14 ರಂದು ರಾಜಸ್ತಾನದ ಜೈಸಲ್ಮೇರ್ – ಜೋಧ್‌ಪುರ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು 22 ಪ್ರಯಾಣಿಕರು ಸಜೀವ ದಹನವಾಗಿದ್ದರು. ಹವಾನಿಯಂತ್ರಿತ (ಎಸಿ) ಬಸ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು.

ಇದನ್ನೂ ನೋಡಿ: ಧರ್ಮಸ್ಥಳ ಲಾಡ್ಜ್‌ಗಳಲ್ಲಿ ಎಸ್‌ಐಟಿ ತನಿಖೆ – 20 ವರ್ಷಗಳ ದಾಖಲೆ ಪರಿಶೀಲನೆ Janashakthi Media

Donate Janashakthi Media

Leave a Reply

Your email address will not be published. Required fields are marked *