ಬೆಂಗಳೂರು – ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾಗಿದ್ದು ಹಲವಾರು ಚುನಾವಣಾ ಅಕ್ರಮಗಳ ವಿರುದ್ಧ ಅಧಿಕಾರಿ ಗಳು ಕಣ್ಣಿಟ್ಟು ಕಾರ್ಯಪ್ರವೃತ್ತರಾಗಿದ್ದಾರೆ. ಅದರಂತೆ ಮುದ್ರಣ ಮಾಧ್ಯಮದ ಇ-ಪತ್ರಿಕೆಯಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಅಗತ್ಯ ಎಂದು ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ಆರ್.ವೆಂಕಟೇಶ್‍ಕುಮಾರ್ ತಿಳಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಅವರು ಈ ವಿಚಾರ ತಿಳಿಸಿದರು.
ಪ್ರಮಾಣಿಕರಿಸಿದ ಜಾಹೀರಾತಿಗೆ ಮಾತ್ರ ಅವಕಾಶ :
ರಾಜಕೀಯಕ್ಕೆ ಸಂಬಂಸಿದ ಜಾಹೀರಾತಿನಲ್ಲಿನ ಅಂಶಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿಯಿಂದ ಪ್ರಮಾಣಿಕರಿಸಬೇಕು, ಪ್ರಮಾಣೀಕರಿಸಿದ ಜಾಹೀರಾತನ್ನು ಪ್ರಕಟಿಸಬಹುದು. ಎಂಸಿ ಅಂಡ್ ಎ ಅನುಮತಿ ಇರುವ ಸರ್ಟಿಫಿಕೇಟ್ ಇಲ್ಲದಿದ್ದರೆ ಪ್ರಕಟ ಮಾಡಿದ್ದ ಮಾಧ್ಯಮದವರು ಜವಾಬ್ದಾರರಾಗುತ್ತಾರೆ. ಜಾಹೀರಾತು ನೀಡುವ ರಾಜಕೀಯ ಪಕ್ಷ, ರಾಜಕೀಯ ವ್ಯಕ್ತಿಗಳು ಪೂರ್ವಾನುಮತಿ ಪಡೆಯಬೇಕಾಗಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವರ್ಷವಿಡೀ ಪ್ರಕಟ ಮಾಡುವ ರಾಜಕೀಯ ಪ್ರೇರಿತ ಜಾಹೀರಾತಿಗೆ ಇದು ಅನ್ವಯವಾಗುತ್ತದೆ. ಜಾಹೀರಾತಿನಲ್ಲಿ ವೈಯಕ್ತಿಕ ನಿಂದನೆ, ಜಾತಿ, ಧರ್ಮ ಸೂಚಿಸುವ ಯಾವುದೇ ಉಲ್ಲೇಖವಿರಬಾರದು. ನಾಮಪತ್ರ ಸಲ್ಲಿಕೆ ಆರಂಭವಾದ ಮೇಲೆ ವೆಚ್ಚವನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿ ಪರ ಅಥವಾ ವಿರುದ್ಧ ವಾಗಿ ಪ್ರಕಟವಾಗುವ ಸುದ್ದಿಗಳು ಫೇಕ್‍ನ್ಯೂಸ್ ಎಂದು ಪರಿಗಣಿಸಲಾಗುವುದು ಎಂದರು.
ಸೋಶಿಯಲ್ ಮೀಡಿಯಾದ ವಿವಿಧ ಅಪ್ಲಿಕೇಷನ್‍ಗಳ ಮೇಲೆ ನಿಗಾ :
ನೀತಿ ಸಂಹಿತೆ ಜಾರಿಗೂ ಮುನ್ನ ಜಾರಿಯಲ್ಲಿರುವ ಕಾನೂನಡಿ ನೂರು ಕೋಟಿಗೂ ಹೆಚ್ಚು ಮೌಲ್ಯದಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಾರಾ ಪ್ರಚಾಕರು ಅಭಿನಯಿಸುವ ವಾಣಿಜ್ಯ ಉದ್ದೇಶದ ಚಲನಚಿತ್ರ ಪ್ರದರ್ಶನಕ್ಕೆ ನಿರ್ಬಂಧವಿಲ್ಲ. ಆದರೆ ರಾಜಕೀಯ ರೀತಿಯ ವಿಚಾರವಿದ್ದರೆ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮಾಧ್ಯಮ ವಿಭಾಗದ ವಿಶೇಷಾಧಿಕಾರಿ ಸೂರ್ಯಸೇನ್ ಮಾತನಾಡಿ, ಟ್ವಿಟರ್, ಫೇಸ್‍ಬುಕ್, ವಾಟ್ಸಾಪ್, ಯೂಟೂಬ್, ಇನ್‍ಸ್ಟ್ರಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದ ವಿವಿಧ ಅಪ್ಲಿಕೇಷನ್‍ಗಳ ಮೇಲೆ ನಿಗಾ ಇಡಲಾಗಿದೆ. ಅದೇ ರೀತಿ ಡಿಜಿಟಲ್ ಮೀಡಿಯಾದ ಸುದ್ದಿ ಮಾಧ್ಯಮಗಳನ್ನು ಸಹ ಪರಿಗಣಿಸಲಾಗುತ್ತದೆ. ವಾಟ್ಸಾಪ್ ಗ್ರೂಪ್‍ನ ಅಡ್ಮಿನ್ ಜವಾಬ್ದಾರರಾಗುತ್ತಾರೆ ಎಂದರು. ಅಭ್ಯರ್ಥಿಗಳು ವೈಯಕ್ತಿಕ ಪೋಸ್ಟರ್ ಹಾಕುವುದನ್ನು ಕೂಡ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ. ಪ್ರಾಯೋಜಿತ ಜಾಹೀರಾತುಗಳನ್ನು ಪೂರ್ವಾನುಮತಿ ಪಡೆದು ಪ್ರಕಟಿಸಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು. ಸಾಮರಸ್ಯ ಕದಡುವ ವಿಚಾರಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಚುನಾವಣಾ ಅಕ್ರಮ: ₹ 47.43 ಕೋಟಿ ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳ ವಶ
ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದುದು : ರಾಜ್ಯ ಮುಖ್ಯ ಚುನಾವಣಾಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟ ಮಾಡುವ ಮುನ್ನ ಎಂಸಿ ಅಂಡ್ ಎ ಕಮಿಟಿಯ ಪೂರ್ವ ಪ್ರಮಾಣಿಕರಣ ಪಡೆದಿರಬೇಕು. ಮುದ್ರಣ ಮಾಧ್ಯಮಕ್ಕೆ ಮತದಾನದ ಮುಂಚಿನ 48 ಗಂಟೆಗಳ ಅವಗೆ ಅನ್ವಯವಾಗಲಿದೆ. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದರು.
ಮಾಧ್ಯಮಗಳು ಸಮಾಜದ ಕಣ್ಣುಗಳು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಮುರಳೀಧರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಲು ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ಮಾಧ್ಯಮಗಳು ಸಮಾಜದ ಕಣ್ಣುಗಳಿದ್ದಂತೆ, ಭಾರತದ ಚನಾವಣಾ ಆಯೋಗ ಇದುವರೆಗೂ 400 ಚುನಾವಣೆಗಳನ್ನು ನಡೆಸಿದೆ ಎಂದರು. ಕಾರ್ಯಾಗಾರದಲ್ಲಿ ರಾಜ್ಯ ಅಪರ ಮುಖ್ಯ ಚುನಾವಣಾಕಾರಿ ರಾಜೇಂದ್ರ ಚೋಳನ್, ವಿಶೇಷ ಆಯುಕ್ತ ಉಜ್ವಲ್‍ಕುಮಾರ್, ಹಿರಿಯ ಪತ್ರಕರ್ತರಾದ ಶೇಷಚಂದ್ರಿಕಾ ಮತ್ತಿತರರು ಉಪಸ್ಥಿತರಿದ್ದರು.