ದೆಹಲಿ: ಮಣಿಪುರ ಹಿಂಸಾಚಾರದ ಪರಿಸ್ಥಿತಿಯನ್ನು ಯುರೋಪಿಯನ್ ಪಾರ್ಲಿಮೆಂಟ್ ಚರ್ಚಿಸುತ್ತಿರುವ ಬಗ್ಗೆ ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಈ ಎರಡೂ ಬೆಳವಣಿಗೆಯ ಬಗ್ಗೆ ಪ್ರಧಾನಿ ಮಾತನಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರದ ವಿಚಾರವಾಗಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮಣಿಪುರ ಹೊತ್ತಿ ಉರಿಯುತ್ತಿದೆ. ಯುರೋಪಿಯನ್ ಸಂಸತ್ತು ಭಾರತದ ಆಂತರಿಕ ವಿಷಯವನ್ನು ಚರ್ಚಿಸುತ್ತಿದೆ. ಪ್ರಧಾನಿ ಒಂದೂ ಮಾತನಾಡಿಲ್ಲ!. ಈ ಮಧ್ಯೆ, ಅವರಿಗೆ ಬಾಸ್ಟಿಲ್ ಡೇ ಪರೇಡ್‌ಗೆ ಟಿಕೆಟ್ ಅನ್ನು ರಫೇಲ್ ನೀಡುತ್ತಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಫ್ರಾನ್ಸ್ ಪ್ರವಾಸದಲ್ಲಿ ಮೋದಿ | ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲಿರುವ EU!
ಒಕ್ಕೂಟ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಜೈಮ್ ರಮೇಶ್, “1977ರ ಜನವರಿಯಲ್ಲಿ ಯೇಲ್ ವಿಶ್ವವಿದ್ಯಾಲಯದ ಹೆಸರಾಂತ ಅರ್ಥಶಾಸ್ತ್ರಜ್ಞ ರಿಚರ್ಡ್ ನೆಲ್ಸನ್ ಅವರು ‘ದಿ ಮೂನ್ ಅಂಡ್ ದಿ ಘೆಟ್ಟೋ’ ಎಂಬ ಅತ್ಯಂತ ಪ್ರಭಾವಶಾಲಿ ಪ್ರಬಂಧವನ್ನು ಪ್ರಕಟಿಸಿದರು. ಈ ವೇಳೆ ನೆಲ್ಸನ್ ಪ್ರಶ್ನೆಯನ್ನು ಮುಂದಿಡುತ್ತಾ, ತಾಂತ್ರಿಕವಾಗಿ ಕ್ರಿಯಾಶೀಲವಾಗಿರುವ ಅಮೆರಿಕವು ಮನುಷ್ಯನನ್ನು ಚಂದ್ರನ ಮೇಲೆ ಇಳಿಸಲು ಸಮರ್ಥವಾಗಿದೆ ಆದರೆ ಅಮೆರಿಕಾದ ಸಮಸ್ಯೆಗಳನ್ನು ಅದರಲ್ಲೂ ವಿಶೇಷವಾಗಿ ದೇಶದ ಒಳನಗರಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು” ಎಂದು ಹೇಳಿದ್ದಾರೆ.
“ನೆಲ್ಸನ್ ಅವರ ಈ ಹೇಳಿಕೆ ನಮ್ಮನ್ನು ಚಿಂತಿಸಲು ಪ್ರಚೋದಿಸುತ್ತದೆ. ನಾವು ಚಂದ್ರನ ಬಳಿಗೆ ಹೋಗುತ್ತಿದ್ದೇವೆ. ಆದರೆ ನಮ್ಮ ಜನರು ಇಲ್ಲೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಅಥವಾ ಬಯಸುವುದಿಲ್ಲ. ಬುಹುಷಃ ನೆಲ್ಸನ್ ಅವರು ಪ್ರಬಂಧದ ಭಾರತೀಯ ಆವೃತ್ತಿಯಾದ ‘ದಿ ಮೂನ್ ಆಂಡ್ ಮಣಿಪುರ’ವನ್ನು ಮಂಡಿಸಬಹುದು” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿಯ ಕುರಿತು ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಅಂಗೀಕರಿಸಿದ ನಿರ್ಣಯವನ್ನು “ವಸಾಹತುಶಾಹಿ ಮನಸ್ಥಿತಿ”ಯ ಪ್ರತಿಬಿಂಬ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಬಣ್ಣಿಸಿದ್ದಾರೆ. “ಭಾರತದ ಆಂತರಿಕ ವ್ಯವಹಾರಗಳಲ್ಲಿ ಇಂತಹ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರ : ಶಾಂತಿ ಮತ್ತು ಸಹಜಸ್ಥಿತಿಯ ಮರುಸ್ಥಾಪನೆ ತಕ್ಷಣದ ಗುರಿಯಾಗಬೇಕು
ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದೆ. ವಿಶೇಷವಾಗಿ ಕುಕಿ ಮತ್ತು ಮೈತೆಯಿ ಸಮುದಾಯಗಳ ನಡುವೆ ಈ ಗಲಭೆ ನಡೆಯುತ್ತಿದ್ದು, 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಹಿಂಸಾಚಾರವನ್ನು ತಡೆಯುವಲ್ಲಿ ಒಕ್ಕೂಟ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.